ಬಂಟ್ವಾಳ ತಾಲೂಕಿನಲ್ಲಿ ಮಳೆಯ ಅಬ್ಬರ, ಅಪಾರ ಹಾನಿ

KannadaprabhaNewsNetwork |  
Published : Jun 27, 2024, 01:09 AM IST
ಬಂಟ್ವಾಳದಲ್ಲಿ ಮಳೆಗೆ ಅಪಾರ ಹಾನಿ | Kannada Prabha

ಸಾರಾಂಶ

ಗೋಳ್ತಮಜಲು ಗ್ರಾಮದ ನೆಟ್ಲ ಧನಂಜಯ ಗಟ್ಟಿ ಎಂಬವರ ವಾಸ್ತವ್ಯದ ಮನೆ ಮೇಲೆ ಅಶ್ವತ್ಥ ಮರ ಬಿದ್ದು ಭಾಗಶಃ ಹಾನಿಯಾಗಿದ್ದಲ್ಲದೆ ಮನೆಯ ಕಂಪೌಂಡ್‌ಗೂ ಹಾನಿಯಾಗಿದೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ತಾಲೂಕಿನಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆಯಾಗುತ್ತಿದ್ದು ಅಪಾರ ಹಾನಿ ಸಂಭವಿಸಿದೆ. ಮಳೆಯ ಅಬ್ಬರಕ್ಕೆ ತಾಲೂಕಿನ ಅಲ್ಲಲ್ಲಿ ಮನೆ, ಕೃಷಿ ಹಾಗೂ ಗುಡ್ಡೆ ಜರಿತ ಹೀಗೆ ಅನೇಕ ಕಡೆಗಳಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ.

ಕೆದಿಲ ಗ್ರಾಮದ ಗಾಂಧಿ ನಗರ ಪೂವಕ್ಕ ಅವರ ವಾಸ್ತವ್ಯದ ಮನೆ ಮೇಲೆ ಮರ ಬಿದ್ದು ಹೆಂಚುಗಳ ಜೊತೆ ಸಿಮೆಂಟ್ ಶೀಟ್‌ಗಳು ಜಖಂಗೊಂಡಿವೆ. ನೆಟ್ಲ ನಿಟಿಲೇಶ್ವರ ದೇವಾಲಯದ ಬಳಿಯ ಮನೆಯ ಕಂಪೌಂಡ್‌ಗೆ ಮರಬಿದ್ದು ಹಾನಿಯಾಗಿದೆ. ಗೋಳ್ತಮಜಲು ಗ್ರಾಮದ ನೆಟ್ಲ ಧನಂಜಯ ಗಟ್ಟಿ ಎಂಬವರ ವಾಸ್ತವ್ಯದ ಮನೆ ಮೇಲೆ ಅಶ್ವತ್ಥ ಮರ ಬಿದ್ದು ಭಾಗಶಃ ಹಾನಿಯಾಗಿದ್ದಲ್ಲದೆ ಮನೆಯ ಕಂಪೌಂಡ್‌ಗೂ ಹಾನಿಯಾಗಿದೆ. ನರಿಕೊಂಬು ಗ್ರಾಮದ ಮಾಣಿಮಜಲು ಎಂಬಲ್ಲಿ ರಾಮಚಂದ್ರ ಗೌಡ ಎಂಬವರ ಮನೆಯ ಸಮೀಪದ ಗುಡ್ಡದ ಮಣ್ಣು ಜರಿದು ಶೌಚಾಲಯದ ಪಿಟ್ ಗುಂಡಿಯ ಮೇಲೆ ಮಣ್ಣು ಬಿದ್ದು ಹಾನಿಯಾಗಿದೆ. ನರಿಕೊಂಬು ಗ್ರಾಮದ ಮರ್ಲಿಮಾರು ಎಂಬಲ್ಲಿ ರೈತನ ಭತ್ತದ ಗದ್ದೆಯಲ್ಲಿ ನೀರು ಶೇಖರಣೆಯಾಗಿ ಕೃಷಿಗೆ ಹಾನಿಯಾಗಿದೆ.

ಪುದು ಗ್ರಾಮದ ಕೆಸನಮೊಗರು ಎಂಬಲ್ಲಿ ಬಾಬು ಸಫಲ್ಯ ಎಂಬವರ ಮನೆಮೇಲೆ ಮರ ಬಿದ್ದು, ಗೋಡೆ ಹಾಗೂ ಛಾವಣಿಗೆ ಹಾನಿಯಾಗಿದೆ. ಬಂಟ್ವಾಳ ಅಮ್ಟಾಡಿ ಗ್ರಾಮದ ಕಿನ್ನಿಬೆಟ್ಟು ಎಂಬಲ್ಲಿ ಬ್ರಿಜಿತ್‌ ಡಿಕೋಸ್ಟ್‌ ಅವರಿಗೆ ಸೇರಿದ ಹಟ್ಟಿಗೆ ಹಾನಿಯಾಗಿದೆ. ಪುಣಚ ಗ್ರಾಮದ ಮಲ್ಲಿಕಟ್ಟೆ ಭಾಸ್ಕರ್‌ ಎಂಬವರ ಮನೆಯ ಆವರಣಗೋಡೆ ಕುಸಿದು ಬಿದ್ದಿದೆ. ಬಂಟ್ವಾಳ ಕಸಬಾ ಗ್ರಾಮದ ಹೊಸ್ಮಾರು ಎಂಬಲ್ಲಿ ಅಶೋಕ ಹಾಗೂ ಗಣೇಶ ಪೂಜಾರಿ ಎಂಬವರ ಮನೆಯ ಆವರಣ ಗೋಡೆ ಕುಸಿದು ಬಿದ್ದು, ಮನೆ ಬೀಳುವ ಸ್ಥಿತಿಯಲ್ಲಿದೆ. ಮನೆಮಂದಿಯನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಹಾನಿ ಪ್ರದೇಶಗಳಿಗೆ ಸಂಬಂಧಪಟ್ಟ ತಾಲೂಕಿನ‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಪರಿಹಾರ ಕಾರ್ಯಕ್ಕೆ ಸೂಚನೆ ನೀಡಿದ್ದಾರೆ.

ಜನಸ್ಪಂದನ ಸಭೆ ರದ್ದು: ಬುಧವಾರ ಮಧ್ಯಾಹ್ನ ೩ ಗಂಟೆಗೆ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಬಿ.ಸಿ.ರೋಡು ಅಂಬೇಡ್ಕರ್‌ ಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಜನಸ್ಪಂದನ ಸಭೆಯನ್ನು ಆಯೋಜಿಸಲಾಗಿತ್ತು. ಆದರೆ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿ ಮಳೆಹಾನಿ ಸಂಭವಿಸಿದ ಸ್ಥಳಗಳಿಗೆ ಕಂದಾಯ ಸಚಿವರ ಭೇಟಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಯಬೇಕಿದ್ದ ಜನಸ್ಪಂದನ ಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ತಹಸೀಲ್ದಾರ್‌ ಅರ್ಚನಾ ಭಟ್‌ ತಿಳಿಸಿದ್ದಾರೆ.

ನೇತ್ರಾವತಿಯಲ್ಲಿ ಏರಿಕೆ: ನೇತ್ರಾವತಿ ನದಿ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದ್ದು, ಮಧ್ಯಾಹ್ನ ೩.೩೦ಕ್ಕೆ ನದಿನೀರಿನ ಮಟ್ಟ ೪.೮ ಮೀಟರ್‌ಗೆ ಏರಿಕೆಯಾಗಿತ್ತು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ