ಹೊಸಕೋಟೆ: ದಿವ್ಯಾಂಗರು ತಮ್ಮ ಬದುಕನ್ನು ಸವಾಲಾಗಿ ಸ್ವೀಕರಿಸಿದ್ದು, ಪ್ರತಿಯೊಬ್ಬರೂ ಅವರಿಗೆ ನೆರವಾದರೆ ಅದು ದೇವರ ಸೇವೆಗೆ ಸಮಾನವಾದುದು ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.
ಗರುಡಾಚಾರ್ ಪಾಳ್ಯದ ತಮ್ಮ ಗೃಹ ಕಚೇರಿಯಲ್ಲಿ 700 ಜನ ದಿವ್ಯಾಂಗರಿಗೆ ತಲಾ 500 ರು. ಮಾಸಾಶನ ಹಾಗೂ ಅನ್ನಸಂತರ್ಪಣೆ ಮಾಡಿ ಮಾತನಾಡಿದ ಅವರು, ಪ್ರಪಂಚದಲ್ಲಿ ಮನುಷ್ಯ ಎಲ್ಲಾ ಅಂಗಾಂಗಗಳು ಸರಿ ಇದ್ದರೂ ಬದುಕುವುದು ದುಸ್ತರವಾಗಿದೆ. ಇದರ ನಡುವೆ ಸಮಾಜದಲ್ಲಿ ಅಸಂಖ್ಯಾತ ದಿವ್ಯಾಂಗರು, ವಿಶೇಷ ಚೇತನರು ಜೀವನವನ್ನು ಒಂದು ಸವಾಲಾಗಿ ಸ್ವೀಕರಿಸಿ ಬದುಕುತ್ತಿದ್ದಾರೆ. ಅವರಿಗೆ ಎಂಟಿಬಿ ಸೇವಾ ಸಮಿತಿ ಪ್ರತಿ ತಿಂಗಳು ಆರ್ಥಿಕ ನೆರವಿನ ಜೊತೆಗೆ ದಾಸೋಹ ಮಾಡಲಾಗುತ್ತಿದೆ. ಅನಾಥಾಶ್ರಮಗಳಿಗೆ ದಿನಸಿ ಸಾಮಗ್ರಿ, ಔಷಧೋಪಚಾರ, ಕಲಿಕಾ ಸಾಮಗ್ರಿ ಸರಬರಾಜು ಮಾಡುತ್ತಿದ್ದೇನೆ. ಮೂರು ದಶಕಗಳ ಹಿಂದೆ ವೃದ್ಧರಿಗೆ 50 ರು.ಮಾಸಾಶನ ಪ್ರಾರಂಭಿಸಿ ಇಂದು 500 ರು. ವಿತರಿಸುತ್ತಿದ್ದೇನೆ ಎಂದರು.ಕಲಾ ಜ್ಯೋತಿ ಆಶ್ರಮದ ಸಂಸ್ಥಾಪಕ ಅಧ್ಯಕ್ಷ ಮುನಿರಾಜು ಮಾತನಾಡಿ, ಎಂಟಿಬಿ ನಾಗರಾಜ್ ರಾಜಕಾರಣಿ, ಉದ್ಯಮಿ. ತಮ್ಮ ಗಳಿಕೆಯ ಒಂದಿಷ್ಟು ಭಾಗ ದಾನ ಮಾಡುವುದನ್ನು ರೂಧಿಸಿಕೊಂಡಿದ್ದಾರೆ. ಪ್ರಮುಖವಾಗಿ ಬೆಂಗಳೂರು ನಗರ ಗ್ರಾಮಾಂತರ ಜಿಲ್ಲೆ ಸೇರಿದಂತೆ ರಾಜ್ಯದ ಅಯ್ದ 30 ಅನಾಥಾಶ್ರಮಗಳಿಗೆ ಆಹಾರ ಕಿಟ್‌ಗಳನ್ನ ಸರಬರಾಜು ಮಾಡುವ ಹಾಗೂ ಅಗತ್ಯ ಆರ್ಥಿಕ ನೆರವನ್ನ ಒದಗಿಸುವ ಕಾರ್ಯ 30 ವರ್ಷಗಳಿಂದ ಮಾಡುತ್ತಿದ್ದಾರೆ ಎಂದರು.
ಬಿಬಿಎಂಪಿ ಮಾಜಿ ಸದಸ್ಯ ನಿತೀಶ್ ಪುರುಷೋತ್ತಮ್, ಮಾಜಿ ಸಚಿವ ಎಂಟಿಬಿ ನಾಗರಾಜ್ ಪತ್ನಿ ಶಾಂತಕುಮಾರಿ ಇತರರಿದ್ದರು.ಫೋಟೋ : 12 ಹೆಚ್‌ಎಸ್‌ಕೆ 1
ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ಸಚಿವ ಎಂಟಿಬಿ ನಾಗರಾಜ್ ಗರುಡಾಚಾರ್ ಪಾಳ್ಯದ ಗೃಹ ಕಚೇರಿಯಲ್ಲಿ ಎಂಟಿಬಿ ಸೇವಾ ಸಮಿತಿಯಿಂದ ದಿವ್ಯಾಂಗರಿಗೆ ಮಾಸಾಶನ ವಿತರಿಸಿದರು.