ಹಾನಗಲ್ಲ: ಜೇನು ಕೃಷಿಯನ್ನು ಕೃಷಿಕರು ಉಪಕಸುಬಾಗಿ ಕಡಿಮೆ ಬಂಡವಾಳದಲ್ಲಿ ಅತ್ಯುತ್ತಮ ಆರ್ಥಿಕ ಲಾಭ ಪಡೆಯಲು ಅವಕಾಶವಿದೆ ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ ಅಜೀಜ ಶೇಖ್ ತಿಳಿಸಿದರು.ಶುಕ್ರವಾರ ತಾಲೂಕಿನ ಯಳವಟ್ಟಿ ಮೊರಾರ್ಜಿ ವಸತಿಯ ಶಾಲೆಯಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಜೇನುನೊಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೇನು ಸಾಕಣೆ ಜನಪ್ರಿಯವಾದ ಉದ್ಯಮವಾಗಿದೆ. ಜೇನು ಸಾಕಣೆಯಿಂದ ಜೇನು ತುಪ್ಪವಲ್ಲದೆ ರಾಜಶಾಹಿ ರಸ, ಜೇನುತುಪ್ಪ ಪಡೆಯಬಹುದು. ರೈತರು ಜೇನು ಕೃಷಿಯನ್ನು ಅತ್ಯುತ್ತಮ ಉಪಕಸುಬಾಗಿ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಅವಕಾಶವಿದೆ. ಜೇನು ಸಾಕಣೆಗೆ ಉತ್ತಮ ಪರಿಸರವನ್ನೂ ಉಳಿಸಬೇಕು. ಜೇನೂ ಅತ್ಯಂತ ಸೂಕ್ಷ್ಮಜೀವಿ ಎಂದರು.ಆಶಯ ನುಡಿಗಳನ್ನಾಡಿದ ಅರಣ್ಯಾಧಿಕಾರಿ ಕೆ. ಮಲ್ಲಪ್ಪ ಜೇನುಕೃಷಿ ಕೇವಲ ಲಾಭದ ಕೃಷಿ ಮಾತ್ರವಲ್ಲ. ಅದು ನಮಗೆ ಒಂದಾಗಿ ಬಾಳುವುದನ್ನು ಕಲಿಸುತ್ತದೆ. ರೈತರು ಬೆಳೆಯುವ ಬೆಳೆಗಳಿಗೆ ಜೇನುಹುಳು ಅತ್ಯಂತ ಸಹಕಾರಿ ಜೀವಿಯಾಗಿದೆ. ಜೇನು ಹಾರಾಟದ ಮೂಲಕ ಪರಾಗಸ್ಪರ್ಶಕ್ಕೆ ಸಹಕಾರಿಯಾಗಿ ಬೆಳೆಗಳೂ ಹೆಚ್ಚು ಇಳುವರಿ ನೀಡಲು ಕೂಡ ಸಹಕಾರಿ. ಭೂಮಿಯ ಮೇಲಿನ ಶೇ. 25ರಷ್ಟು ಸಸ್ಯಗಳು ಜೇನುಹುಳುಗಳ ಪರಾಗಸ್ಪರ್ಶವನ್ನು ಅವಲಂಬಿಸಿದೆ ಎಂದರು.ತಾಲೂಕು ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಕೃಷಿಕರು ಜೇನು ಕೃಷಿಗೆ ಆದ್ಯತೆ ಬೇಕು. ಪ್ರಕೃತಿ ಹಾಳು ಮಾಡುವುದು ಬೇಡ. ಭೂಮಿ ಉಳಿದರೆ ನಾವು ಉಳಿಯುತ್ತೇವೆ. ಇದಕ್ಕಾಗಿ ಇಲಾಖೆಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉತ್ತಮ ಪ್ರಚಾರ ಮಾಡಬೇಕು. ರೈತರ ಸಹಕಾರವೂ ಬೇಕು. ಸರ್ಕಾರದ ಅನುದಾನಕ್ಕಾಗಿಯೇ ಕಾಯುವುದು ಬೇಡ. ನಾವೂ ಬಂಡವಾಳ ತೊಡಗಿಸಿ ಲಾಭ ಮಾಡಿಕೊಳ್ಳೋಣ ಎಂದರು.ಶಿರಸಿಯ ಜೇನುತಜ್ಞ ಟಿ.ಆರ್. ಜಯಚಂದ್ರ ಜೇನು ಕೃಷಿಯ ಬಗೆ, ಸಂರಕ್ಷಣಾ ಕ್ರಮಗಳ ಕುರಿತು ಮಾಹಿತಿ ನೀಡಿದರು. ಶಿಕ್ಷಕ ವೆಂಕಟೇಶ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಎಸಿಎಫ್ ಶಿವಾನಂದ ಪೂಜಾರ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಡವೆಪ್ಪ ಆಲದಕಟ್ಟಿ, ತೋಟಗಾರಿಕೆ ಇಲಾಖೆ ಅಧಿಕಾರಿ ಮೃತ್ಯುಂಜಯ ಹಿರೇಮಠ, ಆರ್‌ಎಫ್‌ಒ ಗಣೇಶ ಶೆಟ್ಟರ, ವಿ.ಆರ್. ಪಾಟೀಲ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.