ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟ್‌ನಿಂದ 7ನೇ ವರ್ಷದ ಗಣೇಶೋತ್ಸವ ಅಂಗವಾಗಿ ಶ್ರೀ ರಾಮನ ಅವತಾರದಲ್ಲಿ ಪ್ರತಿಷ್ಠಾಪಿಸಿರುವ ಗಣಪತಿ ವಿಸರ್ಜನೆ, ಶೋಭಾಯಾತ್ರೆ ಕಾರ್ಯಕ್ರಮ ಶನಿವಾರ ಸಹಸ್ರಾರು ಭಕ್ತರ ನಡುವೆ ನಡೆಯಿತು.ಬೆಳಗ್ಗೆ 11ಕ್ಕೆ ಗಣ್ಯರ ಸಮ್ಮುಖದಲ್ಲಿ ಆರಂಭವಾದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಬೃಹತ್ ಶೋಭಾ ಯಾತ್ರೆಯಲ್ಲಿ ನಾಸಿಕ್ ಡೋಲ್ ಹಾಗೂ ಅಬ್ಬರದ ಡಿಜೆ ಸಂಗೀತದ ನಡುವೆ ನಗರದ ರಾಜಬೀದಿಗಳಲ್ಲಿ ಮೆರವಣಿಗೆ ಸಾಗಿತು. ಅಂಗಡಿ, ಕಟ್ಟಡಗಳ ಮೇಲೆ, ರಸ್ತೆಯ ಇಕ್ಕೆಲೆಗಳಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಸಾರ್ವಜನಿಕರು ನಿಂತು ಗಣಪತಿ ದರ್ಶನ ಪಡೆದರು.
ಗಣಪತಿ ಜೊತೆಗೆ ಮೆರವಣಿಗೆಯಲ್ಲಿ ಶ್ರೀ ವೀರಾಂಜನೇಯ ಸ್ವಾಮಿ, ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳು ಇದ್ದವು. ಇಲ್ಲಿನ ಜಯದೇವ ವೃತ್ತದಲ್ಲಿ ಕ್ರೇನ್ ಮೂಲಕ ಗಣಪತಿಗೆ ಪುಷ್ಪ ವೃಷ್ಟಿ ಮಾಡಲಾಯಿತು. ಗಣಪತಿ ಮೆರವಣಿಗೆಯಲ್ಲಿ ಡಿಜೆ ಸದ್ದಿಗೆ ಯುವಕ, ಯುವತಿಯರು, ವಿದ್ಯಾರ್ಥಿ ವಿದ್ಯಾರ್ಥಿನಿಯರು, ಮಕ್ಕಳು, ಮಹಿಳೆಯರು ಹೆಜ್ಜೆ ಹಾಕಿದರು.ಪ್ರಮುಖರು ಭಾಗಿ:
ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಜೊಳ್ಳಿ ಗುರು, ಮಾಜಿ ಎಂಎಲ್‌ಸಿ ಡಾ.ಎ.ಎಚ್.ಶಿವಯೋಗಿ ಸ್ವಾಮಿ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮುಖಂಡರಾದ ಯಶವಂತರಾವ್ ಜಾಧವ್, ಶ್ರೀನಿವಾಸ ದಾಸಕರಿಯಪ್ಪ, ಗಾಯತ್ರಿ ಸಿದ್ದೇಶ್ವರ, ಮಾಜಿ ಮೇಯರ್ ಎಸ್.ಟಿ.ವೀರೇಶ, ಕೆ.ಎಂ.ಸುರೇಶ, ಶಿವನಳ್ಳಿ ರಮೇಶ, ಲೋಕಿಕೆರೆ ನಾಗರಾಜ, ಕುಮಾರ, ಜಯಪ್ರಕಾಶ ಮಾಗಿ, ಪ್ರಕಾಶ ಐಗೂರು, ಸಿದ್ದೇಶ, ಎಚ್.ಸಿ.ಜಯಮ್ಮ, ಶಿವನಗೌಡ ಪಾಟೀಲ, ಎಂ.ಎಸ್.ರಾಮೇಗೌಡ, ಕಮಲ್ ಗಿರೀಶ ಸೇರಿದಂತೆ ಅನೇಕರು ಭಾಗವಹಿಸಿ ಗಣಪತಿ ದರ್ಶನ ಪಡೆದರು.ಹೈಸ್ಕೂಲ್ ಮೈದಾನದಿಂದ ಆರಂಭವಾದ ಶೋಭಾಯಾತ್ರೆಯು ಅಕ್ಕಮಹಾದೇವಿ ರಸ್ತೆ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಲಾಯರ್ ರಸ್ತೆ, ಪಿ.ಬಿ.ರಸ್ತೆ ಮಾರ್ಗವಾಗಿ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ನಡೆಯಿತು. ಕೆಲವು ಭಾಗಗಳಲ್ಲಿ ಅಂಗಡಿ ಮುಂಗಟ್ಟುಗಳ ಮಾಲೀಕರು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿದ್ದರು. ನಂತರ ಗಣೇಶ ಮೂರ್ತಿಯನ್ನು ಬಾತಿ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.
ಕಳೆದ ಸೆ.7ರಂದು ಟ್ರಸ್ಟ್ ನಿಂದ ಈ ವರ್ಷ ಕಾಶಿ ವಿಶ್ವನಾಥ ದೇವಸ್ಥಾನದ ಮಾದರಿ ಮಂಟಪದಲ್ಲಿ ಗಣಪತಿ ಪ್ರತಿಷ್ಠಾಪಿಸಲಾಗಿದ್ದು, ವಿಸರ್ಜನೆ ಹಿಂದಿನ ದಿನವಾದ ಶುಕ್ರವಾರ ಸಹಾ ಬಹಳಷ್ಟು ಭಕ್ತರು ಬಂದು ಗಣೇಶನ ದರ್ಶನ ಪಡೆದರು.ಈ ಶೋಭಾಯಾತ್ರೆಗೆ ದಾವಣಗೆರೆ ಪಿ.ಬಿ.ರಸ್ತೆ, ಪ್ರಮುಖ ವೃತ್ತಗಳು ಕೇಸರಿ ಬಾವುಟ, ಬಂಟಿಂಗ್ಸ್, ಬ್ಯಾನರ್‌ಗಳಿಂದ ಅಲಂಕೃತಗೊಂಡಿದ್ದವು. ಅಲ್ಲದೇ ಪ್ರಮುಖ ರಸ್ತೆ, ವೃತ್ತಗಳಲ್ಲಿ ವೇದಿಕೆ ನಿರ್ಮಿಸಿ ಬಸವೇಶ್ವರ, ವಾಲ್ಮೀಕಿ, ಆದಿ ರೇಣುಕಾಚಾರ್ಯರು, ಕನಕದಾಸರು, ಛತ್ರಪತಿ ಶಿವಾಜಿ ಮಹಾರಾಜರು, ಮಹಾವೀರ, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಅನೇಕ ಮಹಾತ್ಮರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗಿತ್ತು.
ಕುಡಿಯುವ ನೀರು, ಉಪಹಾರ ವಿತರಣೆ:ಮೆರವಣಿಗೆ ಸಾಗುವ ಪ್ರಮುಖ ವೃತ್ತ, ರಸ್ತೆಗಳಲ್ಲಿ ಅನೇಕ ಸಂಘ ಸಂಸ್ಥೆಗಳಿಂದ ಭಕ್ತಾದಿಗಳಿಗೆ ಕುಡಿಯುವ ನೀರು, ಮಜ್ಜಿಗೆ, ಲಘು ಉಪಹಾರ ಕೊಡುವ ವ್ಯವಸ್ಥೆ ಮಾಡಿದ್ದರು.
ಸಂಚಾರಿ ಮಾರ್ಗಗಳ ಬದಲಾವಣೆ:ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಹಿನ್ನೆಲೆ ಸಂಚಾರದಲ್ಲಿ ಒತ್ತಡವಾಗಬಾರದು ಎಂದು ಜಿಲ್ಲಾಡಳಿತದಿಂದ ನಗರದಲ್ಲಿ ವಾಹನ ಸಂಚಾರ ಮಾರ್ಗಗಳಲ್ಲಿ ಬದಲಾವಣೆ ಮಾಡಲಾಗಿತ್ತು. ಹರಿಹರ, ಚಿತ್ರದುರ್ಗ, ಚನ್ನಗಿರಿ, ಹರಪನಹಳ್ಳಿ, ಜಗಳೂರು ಸೇರಿದಂತೆ ವಿವಿಧೆಡೆಯಿಂದ ಬರುವ ವಾಹನಗಳಿಗೆ ರ‍್ಯಾಯ ಸಂಚಾರ ಮಾರ್ಗ ವ್ಯವಸ್ಥೆ ಕಲ್ಪಿಸಿ ನಿಗದಿತ ಮಾರ್ಗ ಸೂಚಿಸಲಾಗಿತ್ತು.
ಮೆರವಣಿಗೆಗೆ ಡಿಜೆ ಮೆರಗು:ಗಣಪತಿ ಮೆರವಣಿಗೆಯ ಪ್ರಮುಖ ಆಕರ್ಷಣೆಯಾದ ಟೈಗರ್ ಪ್ಲಸ್ ಡಿಜೆ ಸೇರಿದಂತೆ 6 ಡಿಜೆಗಳು ಮುದೋಳ, ಹುಬ್ಬಳ್ಳಿ, ಬೆಳಗಾವಿ, ಜರೀಕಟ್ಟೆಯಿಂದ ಬಂದಿದ್ದು, ಅಬ್ಬರದೊಂದಿಗೆ ಸದ್ದು ಮಾಡಿ ಮಕ್ಕಳು, ಯುವಕ-ಯುವತಿಯರಲ್ಲಿ ಕುಣಿಯಲು ಉತ್ತೇಜನ ನೀಡಿದವು. ಮಹಿಳೆಯರಿಗಾಗಿ ಪ್ರತ್ಯೇಕ ಡಿಜೆ ವ್ಯವಸ್ಥೆ ಮಾಡಲಾಗಿತ್ತು. ನಾಸಿಕ್ ಡೋಲು ಮೆರವಣಿಗೆಗೆ ಮೆರಗು ನೀಡಿತು.
ಸೂಕ್ತ ಪೊಲೀಸ್ ಬಿಗಿ ಭದ್ರತೆ:ಜಿಲ್ಲಾ ಪೊಲೀಸ್ ಇಲಾಖೆಯಿಂದ ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನಗರದಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಡ್ರೋಣ್ ಕ್ಯಾಮೆರಾ ಸೇರಿದಂತೆ ಅಲ್ಲಲ್ಲಿ ಸಿಸಿ ಕ್ಯಾಮೆರಾಗಳು ನಿಗಾವಹಿಸಿದ್ದವು.