ಕನ್ನಡಪ್ರಭ ವಾರ್ತೆ ತುಮಕೂರು
ಬಲಿಪಾಡ್ಯಮಿಯಂದು ಪ್ರತಿಷ್ಠಾಪನೆಯಾಗಿ ಆರಂಭವಾದ ಗೂಳೂರು ಗಣಪನ ಪೂಜಾ ಕೈಂಕರ್ಯಗಳು ಕಾರ್ತಿಕ ಮಾಸದಲ್ಲಿ ಸಂಪೂರ್ಣಗೊಂಡು, ಸಕಲ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಗೂಳೂರು ಕೆರೆಯಲ್ಲಿ ವರ್ಣರಂಜಿತ ಸಿಡ್ಡಿಮದ್ದಿನ ಅಬ್ಬರದ ನಡುವೆ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.
ಎರಡು ದಿನಗಳ ಕಾಲ ನಡೆದ ಗೂಳೂರು ಗಣೇಶ ಜಾತ್ರೆಯಲ್ಲಿ ನಾಡಿನ ವಿವಿಧೆಡೆಗಳಿಂದ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದು ಪುನೀತರಾದರು.ಶನಿವಾರ ರಾತ್ರಿ 8 ಗಂಟೆಗೆ ಊರಿನ ಯಜಮಾನರ ಮನೆಯಿಂದ ನಂದಿಧ್ವಜ ಮತ್ತು ಕರಡಿ ವಾದ್ಯದೊಂದಿಗೆ ಗಣಪತಿ ದೇವಾಲಯಕ್ಕೆ ಕಳಸ ತಂದು ಮಹಾಗಣಪತಿಗೆ ಮಹಾ ಮಂಗಳಾರತಿ ನೆರವೇರಿಸಲಾಯಿತು.
ಭಾನುವಾರ ಮಧ್ಯಾಹ್ನದಿಂದ ಮಹಾಗಣಪತಿ ಉತ್ಸವವು ಜಾನಪದ ಕಲಾತಂಡಗಳಾದ ನಾದಸ್ವರ, ಕರಡಿ ಮಜಲು, ನಾಸಿಕ್ ಡೋಲ್, ಕೇರಳದ ಜಾನಪದ ನೃತ್ಯ, ಮಂಡದ ಕಲಾ ತಂಡದಿಂದ ಕರಡಿ ವಾದ್ಯ, ಮಹಿಳಾ, ಪುರುಷ ವೀರಗಾಸೆ ತಂಡಗಳು, ಕೀಲು ಕುದುರೆ, ನಂದಿಕೋಲು, ನವಿಲು, ಜಿರಾಫೆ, ಕವಾಡ ನೃತ್ಯ, ಹಾಸ್ಯದ ಚಾರ್ಲಿ ನೃತ್ಯ, ವೀರಭದ್ರ ದೇವರ ಕುಣಿತ, ವೀರಗಸೆ, ಡೊಳ್ಳು, ಪೂಜಾ ಕುಣಿತದ ಪ್ರದರ್ಶನದೊಂದಿಗೆ ಗೂಳೂರಿನ ಪ್ರಮುಖ ರಾಜಬೀದಿಗಳಲ್ಲಿ ಅತ್ಯಂತ ವೈಭವೋಪೇತವಾಗಿ ನಡೆಯಿತು.
ಬೆಳಗಿನ ಜಾವ 500 ಅಡಿ ಉದ್ದದ ಜೋಗ್‌ಪಾಲ್ಸ್, ನೂರು ಬಾರಿ ಒಡೆಯುವ ಔಟ್ಸ್ ಹಾಗೂ ಪ್ಯಾರಚೂಟ್‌ಗಳ ಪ್ರದರ್ಶನ, 5ಗಂಟೆಗೆ ನಡೆದ ಆಕರ್ಷಕ ವರ್ಣರಂಜಿತ ಸಿಡಿಮದ್ದಿನ ಪ್ರದರ್ಶನ ನೆರೆದಿದ್ದ ಭಕ್ತಾದಿಗಳಲ್ಲಿ ರೋಮಾಂಚನ ಉಂಟು ಮಾಡಿತು.
ಕಳೆದ ಒಂದು ತಿಂಗಳಿನಿಂದಲೂ ಕಾರ್ತಿಕ ಮಾಸದಲ್ಲಿ ಪ್ರತಿನಿತ್ಯ ವಿಶೇಷ ಪೂಜಾ ಕೈಂಕರ್ಯದೊಂದಿಗೆ ಗಣೇಶಮೂರ್ತಿಯನ್ನು ಗ್ರಾಮಸ್ಥರು ಹಾಗೂ ನಾಡಿನ ವಿವಿಧೆಡೆಯ ಭಕ್ತರು ಆರಾಧಿಸಿ ಆಶೀರ್ವಾದ ಪಡೆದರು. ಪ್ರತಿದಿನವೂ ಪ್ರಸಾದ ವಿನಿಯೋಗ ಸಹ ನಡೆಯಿತು. ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತಾದಿಗಳು ಅನ್ನ ಸಂತರ್ಪಣೆ ಸಹ ಏರ್ಪಡಿಸಲಾಗಿತ್ತು. ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ಗೂಳೂರು ಶ್ರೀ ಮಹಾಗಣಪತಿ ಭಕ್ತಮಂಡಳಿಯ ಶಿವಕುಮಾರ್ ತಿಳಿಸಿದರು.