ಕೇಂದ್ರ ಬಜೆಟ್‌ ಹೂರಣ ಇಲ್ಲದ ಹೋಳಿಗೆ: ಸಂಸದೆ ಡಾ.ಪ್ರಭಾ

KannadaprabhaNewsNetwork | Published : Jul 24, 2024 12:18 AM

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 3ನೇ ಅವಧಿಯ ಕೇಂಧ್ರ ಸರ್ಕಾರದ ಚೊಚ್ಚಲ ಬಜೆಟ್‌ ಹೂರಣ ಇಲ್ಲದ ಹೋಳಿಗೆಯಂತಿದೆ. ಈ ಬಜೆಟ್‌ ಮೂಲಕ ಕೇಂದ್ರವು ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಮುಂದುವರಿಸಿದೆ ಎಂದು ದಾವಣಗೆರೆ ಕ್ಷೇತ್ರ ಕಾಂಗ್ರೆಸ್ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಬೇಸರ ವ್ಯಕ್ತಪಡಿಸಿದ್ದಾರೆ.

- ಮಿತ್ರ ಪಕ್ಷಗಳ ಆಂಧ್ರ, ಬಿಹಾರಕ್ಕೆ ಮಣೆ, ಕರ್ನಾಟಕಕ್ಕೆ ಮಲತಾಯಿ ಧೋರಣೆ: ಆರೋಪ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 3ನೇ ಅವಧಿಯ ಕೇಂಧ್ರ ಸರ್ಕಾರದ ಚೊಚ್ಚಲ ಬಜೆಟ್‌ ಹೂರಣ ಇಲ್ಲದ ಹೋಳಿಗೆಯಂತಿದೆ. ಈ ಬಜೆಟ್‌ ಮೂಲಕ ಕೇಂದ್ರವು ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಮುಂದುವರಿಸಿದೆ ಎಂದು ದಾವಣಗೆರೆ ಕ್ಷೇತ್ರ ಕಾಂಗ್ರೆಸ್ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಬೇಸರ ವ್ಯಕ್ತಪಡಿಸಿದರು.

ದೆಹಲಿಯಲ್ಲಿ ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ದಾವಣಗೆರೆ ಕಡೆ "ಹೂರಣ ಇಲ್ಲದ ಹೋಳಿಗೆ " ಎಂಬ ಗಾದೆಮಾತಿದೆ. ಈ ಮಾತಿನಂತೆ ಕೇಂದ್ರ ಬಜೆಟ್‌ ಸ್ಥಿತಿಯಾಗಿದೆ. ಮಿತ್ರಪಕ್ಷಗಳ ರಾಜ್ಯಗಳಿಗೆ ಹೆಚ್ಚು ಸ್ಪಂದಿಸುವ ಮೂಲಕ ಕರ್ನಾಟಕದ ಬಗ್ಗೆ ಕೇಂದ್ರವು ಮತ್ತೆ ಮಲತಾಯಿ ಧೋರಣೆ ಮುಂದುವರಿಸಿದೆ ಎಂದರು.

ವಿಶೇಷವಾಗಿ ಕೃಷಿ ಕ್ಷೇತ್ರಕ್ಕೆ, ಎಂಎಸ್‌ಪಿ ನಿಗದಿಪಡಿಸುವ ಬಗ್ಗೆ ಸ್ಪಷ್ಟ ವಿವರಣೆಯೇ ಇಲ್ಲದ ಬಜೆಟ್ ಇದಾಗಿದೆ. ರೈತರ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಬಗ್ಗೆ ಸ್ಪಷ್ಟತೆ ಇಲ್ಲ. ಕೃಷಿ ಮಾರುಕಟ್ಟೆ, ಸಾಗಾಣಿಕೆ, ಕೃಷಿ ಸಂಶೋಧನಾ ಕೇಂದ್ರಗಳ ಕಡೆಗೆ ಹೆಚ್ಚು ಒತ್ತು ನೀಡಬೇಕಾಗಿತ್ತು. ಆದರೆ, ಅಂತಹ ಪ್ರಯತ್ನ ಬಜೆಟ್‌ನಲ್ಲಿ ಆಗಿಲ್ಲ ಎಂದು ಟೀಕಿಸಿದರು.

ಮಹಿಳೆಯರ ಅಭ್ಯುದಯಕ್ಕೆ ಕೇವಲ ₹3 ಲಕ್ಷ ಕೋಟಿ ಮಾತ್ರ ಕಾಯ್ದಿರಿಸಲಾಗಿದ್ದು, ಇದು ಅತ್ಯಂತ ಕಡಿಮೆ ಹಣವಾಗಿದೆ. ಮಹಿಳಾ ಸಬಲೀಕರಣ ಮಾಡುವುದಾಗಿ ಕೇಂದ್ರ ಘೋಷಿಸಿದೆ. ಅದು ಕೇವಲ ಬಾಯಿ ಮಾತಿಗೆ ಸೀಮಿತವಾಗದೇ, ಕೃತಿಗೂ ಬರಬೇಕು. ಕರ್ನಾಟಕ ರಾಜ್ಯಕ್ಕೆ ವಿಶ್ವವಿದ್ಯಾನಿಲಯಗಳ ಅಗತ್ಯವಿತ್ತು. ಆದರೆ, ಅದರ ಬಗ್ಗೆ ಕೇಂದ್ರ ಪ್ರಸ್ತಾಪಿಸಿಲ್ಲ ಎಂದು ದೂರಿದರು.

ರಾಜ್ಯದಲ್ಲಿ ಎಐಎಂಎಸ್‌, ವಿಶ್ವವಿದ್ಯಾನಿಲಯಗಳು, ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸುವಂತೆ ಬೇಡಿಕೆ ಇಟ್ಟಿದ್ದೆವು. ನೀರಾವರಿ ಯೋಜನೆಗಳಿಗೆ ಸ್ಪಂದಿಸುವಂತೆ ಮನವಿ ಮಾಡಿದ್ದೆವು. ಆದರೆ, ಅದ್ಯಾವುದಕ್ಕೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಎನ್‌ಡಿಎ ಸಾರಥ್ಯ ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಆಂಧ್ರಪ್ರದೇಶ, ಬಿಹಾರವನ್ನು ಮಾತ್ರ ಪರಿಗಣಿಸಿದಂತಿದೆ. ಕರ್ನಾಟಕದ ವಿಚಾರದಲ್ಲಿ ಮತ್ತೆ ಮಲತಾಯಿ ಧೋರಣೆ ಮುಂದುವರಿಸಿದೆ ಎಂದರು.

- - -

ಬಾಕ್ಸ್‌ * ರಾಜ್ಯಕ್ಕೆ ಅನುದಾನ, ಯೋಜನೆ ತರಲಾಗಿಲ್ಲ ರಾಜ್ಯದಲ್ಲಿ ಅನಾವೃಷ್ಟಿ, ಅತಿವೃಷ್ಟಿ ಬಗ್ಗೆಯೂ ಕೇಂದ್ರ ಸರ್ಕಾರ ಸ್ಪಂದಿಸಲಿಲ್ಲ. ಈಗ ರಾಜ್ಯಕ್ಕೆ ಯಾವುದೇ ರೀತಿ ಅನುದಾನ ನೀಡಿಲ್ಲ. ಕರ್ನಾಟಕದಿಂದ ನಾವು ಕಾಂಗ್ರೆಸ್ಸಿನ 9 ಸಂಸದರು ಸೇರಿದಂತೆ ಬಿಜೆಪಿ, ಜೆಡಿಎಸ್‌ ಸಂಸದರು ಸೇರಿದಂತೆ ಒಟ್ಟು 28 ಸಂಸದರಿದ್ದರು. ಆದರೂ, ರಾಜ್ಯಕ್ಕೆ ಅನುದಾನವನ್ನು ತರುವಲ್ಲಿ ಲೋಕಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಕೇಂದ್ರ ಸಚಿವರಾಗಲೀ, ರಾಜ್ಯದ ಬಿಜೆಪಿ ಸಂಸದರಾಗಲೀ ಚಕಾರ ಎತ್ತಿಲ್ಲ. ರಾಜ್ಯದಲ್ಲಿ ಕೇಂದ್ರ ಸಚಿವರು, ಎನ್‌ಡಿಎ ಮಿತ್ರಪಕ್ಷಗಳ ಸಂಸದರು ಇದ್ದರೂ ಅನುದಾನ, ಯೋಜನೆ ತರುವಲ್ಲಿ ಅಸಮರ್ಥರಾಗಿದ್ದಾರೆ ಎಂದು ಸಂಸದೆ ಡಾ.ಪ್ರಭಾ ಚಾಟಿ ಬೀಸಿದರು.

- - - -23ಕೆಡಿವಿಜಿ3, 4:

ಡಾ.ಪ್ರಭಾ ಮಲ್ಲಿಕಾರ್ಜುನ, ಸಂಸದೆ, ದಾವಣಗೆರೆ ಲೋಕಸಭಾ ಕ್ಷೇತ್ರ.

Share this article