ಕನ್ನಡಪ್ರಭ ವಾರ್ತೆ ಕಲಬುರಗಿ
ಇಲ್ಲಿನ ಐತಿಸಾಹಿಕ ಶರಣಬಸವೇಶ್ವರ ಮಹಾ ರಥೋತ್ಸವಕ್ಕೆ ಕ್ಷಣಗಣನೆ ಶುರುವಾಗಿರುವಂತೆಯೇ ದುರಂತ ಘಟನೆಯೊಂದು ದಾಸೋಹ ಅಂಗಳದಲ್ಲಿ ಸಂಭವಿಸಿದೆ.ಶನಿವಾರ ಶರಣಬಸವೇಶ್ವರರ ಐತಿಹಾಸಿಕ 202ನೇ ರಥೋತ್ಸವ, ಅದಕ್ಕಾಗಿ ಇಡೀ ದಾಸೋಹ ಮಹಾಮನೆ, ಮಹಾ ದಾಸೋಹಿಯ ಸಮಾಧಿ ಸ್ಥಳ ಸಿಂಗಾರಗೊಂಡಿತ್ತು. ಮಹಾ ರಥೋತ್ಸವಕ್ಕೂ ಮುನ್ನಾದಿನ ಶುಕ್ರವಾರ ಸಂಪ್ರದಾಯದಂತೆ ದಾಸೋಹ ಅಂಗಳದಲ್ಲಿ ಶರಣರಿಗೆ ಉಚ್ಚಾಯಿ (ಸಣ್ಣ ತೇರಿನ ಸೇವೆ) ಅರ್ಪಿಸಲಾಗುತ್ತಿತ್ತು.
ಭಾರಿ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಈ ಹಂತದಲ್ಲಿ ಭದ್ರತೆಯ ಕರ್ತವ್ಯದ ಮೇಲೆ ನಿಯೋಜನೆಗೊಂಡಿದ್ದ ಚಿಟಗುಪ್ಪ ಹೋಮ್‌ಗಾರ್ಡ್ ಘಟಕದ ರಾಮು ಚಿಗುಪ್ಪಾ ಎಂಬುವವರು ಸಮತೋಲನ ತಪ್ಪಿ ರಥದ ಗಾಲಿ ಕೆಳಗೆ ಬಿದ್ದು ದಾರುಣ ಸಾವನ್ನಪ್ಪಿದ್ದಾರೆ.ಇದಲ್ಲದೆ ಇನ್ನೊಬ್ಬ ಹೋಮ್‌ಗಾರ್ಡ್ ಅಶೋಕ ರೆಡ್ಡಿ ಚಿಟಗುಪ್ಪ ಹಾಗೂ ಅಲ್ಲೇ ಉಚ್ಚಾಯಿ ಕಣ್ತುಂಬಿಕೊಳ್ಳಲು ನಿಂತಿದ್ದ ಬಾಲಕ ಸೇರಿದಂತೆ ನಾಲ್ವರಿಗೆ ಗಾಯಗಳಾಗಿವೆ. ಅವರನ್ನೆಲ್ಲ ತುರ್ತು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬಿಗಿ ಬಂದೋಬಸ್ತ್ ಇದ್ದರೂ, ಪೊಲೀಸ್, ಹೋಮ್‌ಗಾರ್ಡ್ ಸಿಬ್ಬಂದಿ ಸಾಕಷ್ಟು ಸಂಖ್ಯೆಯಲ್ಲಿದ್ದರೂ ಕೂಡಾ ಸಣ್ಣ ರಥೋತ್ಸವದಲ್ಲೇ ಈ ಪರಿಯಲ್ಲಿ ನೂಕುನುಗ್ಗಲು ಯಾಕೆ ಉಂಟಾಯ್ತು? ಭದ್ರತಾ ಲೋಪವೆ? ಅಥವಾ ಜನ ಹೆಚ್ಚಿನ ಸಂಖ್ಯೆಲಲ್ಲಿ ಹರಿದು ಬಂದಿದ್ದರಿಂದ ನಿಯಂತ್ರಣಕ್ಕೆ ಬಾರದೆ ಇಂತಹ ಅನಾಹುತ ನಡೆಯಿತೆ? ಎಂಬಿತ್ಯಾದಿ ಪ್ರಶ್ನೆಗಳು ಉಚ್ಚಾಯಿ ಸಂಭ್ರಮದಲ್ಲಿ ನಡೆದಂತಹ ದಾರುಣ ಘಟನೆ ಹಿಂದೆ ಹುಟ್ಟಿಕೊಂಡಿವೆ.ಸಂಜೆ 6. 30 ರ ಹೊತ್ತಿಗೆ ಉಚ್ಚಾಯಿ ಸಂಭ್ರಮ ಶುರುವಾಗಿತ್ತು. 7.15 ರ ಹೊತ್ತಿಗೆ ಸಂಭ್ರಮ ತಾರಕಕ್ಕೇರಿತ್ತು. ಮಹಾ ದಾಸೋಹ ಪೀಠದ 8ನೇ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪಾಜಿ, ಮಾತೋಶ್ರೀ ದಾಕ್ಷಾಯಿಣಿ ಅವ್ವಾಜಿ, ಬಸವರಾಜ ದೇಶಮುಖ ಸೇರಿದಂತೆ ಅಪ್ಪಾಜಿ ಪರಿವಾರದ ಸರ್ವ ಸದಸ್ಯರು ಅಲ್ಲಿದ್ದರು. ಶಾಸ್ತ್ರೋಕ್ತವಾಗಿ ಉಚ್ಚಾಯಿ ಸಂಪ್ರದಾಯಗಳು ನಡೆದಿದ್ದವು. ಆದರೆ ಉಚ್ಚಾಯಿ ತೇರಿನ ಇನ್ನೊಂದು ಪಾರ್ಶ್ವದಲ್ಲಿ ಹೆಚ್ಚಿಗೆ ಜನ ಸೇರಿದ್ದಲ್ಲದೆ ಒಬ್ಬರ ಮೇಲೊಬ್ಬರು ಮುಗಿಬಿದ್ದರು. ನೂಕಾಟದಲ್ಲಿ ತೊಡಗಿದ್ದೇ ಅನಾಹುತಕ್ಕೆ ಕಾರಣವಾಗಿ ಒಂದು ಬಲಿ ಪಡೆಯಲು ಕಾರಣವಾಯ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಐತಿಹಾಸಿಕ ಜಾತ್ರೆಯ ಮುನ್ನಾದಿನವೇ ಇಂತಹ ಘಟನೆ ಸಂಭವಿಸಿರೋದರಿಂದ ಈ ಬಗ್ಗೆ ಶರಣರ ಭಕ್ತ ಗಣನದ ಮನ- ಮನೆಗಳಲ್ಲಿ ಆತಂಕ ಮೂಡಿದೆ. ಶನಿವಾರ ಭವ್ಯ ರಥೋತ್ಸವ, ಇನ್ನೂ ಹೆಚ್ಚಿನ ಜನ ಸೇರುತ್ತಾರೆ. ಈ ಹಂತದಲ್ಲಾದರೂ ಪೊಲೀಸರು ಹೆಚ್ಚಿನ ಭದ್ರತೆ ಒದಿಸಿ ಅನಾಹುತಗಳು ಮರುಕಳಿಸದಂತೆ ತಡೆಯಲಿ ಎಂದು ಭಕ್ತರು ಆಗ್ರಹಿಸಿದ್ದಾರೆ.