ಸರ್ವರೋಗಗಳಿಗೆ ಮದ್ದು ನೀಡುವ ಶಕ್ತಿ ಜೇನಿಗಿದೆ: ನರಸಿಂಹ ಭಟ್ಟ

KannadaprabhaNewsNetwork |  
Published : Mar 30, 2026, 01:45 AM IST
29ಎಚ್.ಎಲ್.ವೈ-1: ಶನಿವಾರ ಪಟ್ಟಣದ ಉಪ-ಕಾರಾಗೃಹದ ಸಭಾಂಗಣದಲ್ಲಿ ಕಾರಾಗೃಹ ಬಂದಿಗಳಿಗಾಗಿ ಆಯೋಜಿಸಿದ ಜೇನು-ಕೃಷಿ ತರಬೇತಿ ಕಾರ್ಯಾಗಾರವನ್ನು ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ ಉದ್ಘಾಟಿಸಿದರು.   | Kannada Prabha

ಸಾರಾಂಶ

ಎರೆಹುಳುವಿನಂತೆ ಜೇನು ಸಹ ರೈತನ ಮಿತ್ರವಾಗಿದೆ, ಮಾನವನ ಬದುಕಿಗೆ ಅವಶ್ಯಕವಾಗಿರುವ ಜೇನಿನ ಬಗ್ಗೆ ನಮಗಿರುವ ಮಾಹಿತಿಯ ಅತ್ಯಲ್ಪವಾಗಿದೆ.

ಜೇನು-ಕೃಷಿ ತರಬೇತಿ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ಹಳಿಯಾಳ

ಮಾನವನಿಗೆ ಸದಾ ಕ್ರಿಯಾಶೀಲತೆಯ ಪಾಠವನ್ನು ಹೇಳುವ ಜೇನಿನ ಶ್ರಮದ ಮುಂದೇ ನಮ್ಮ ಶ್ರಮವೂ ಏನೂ ಅಲ್ಲ ಎಂದು ಜೋಯಿಡಾ ಕಾಡುಮನೆ ಹನಿ ಪಾರ್ಕ್‌ ಸಂಸ್ಥಾಪಕ, ಪತ್ರಕರ್ತ ನರಸಿಂಹ ಭಟ್ಟ ಹೇಳಿದರು.ಪಟ್ಟಣದ ಉಪ-ಕಾರಾಗೃಹದ ಸಭಾಂಗಣದಲ್ಲಿ ಕಾರಾಗೃಹ ಬಂಧಿಗಳಿಗಾಗಿ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ, ತಾಲೂಕು ಉಪ-ಕಾರಾಗೃಹ ಹಳಿಯಾಳ ಮತ್ತು ಕಾಡುಮನೆ ಹನಿ ಪಾರ್ಕ್‌ ಜೋಯಿಡಾ ಇವುಗಳ ಸಹಭಾಗಿತ್ವದಲ್ಲಿ ಆಯೋಜಿಸಿದ ಜೇನು-ಕೃಷಿ ತರಬೇತಿ ಕಾರ್ಯಾಗಾರದಲ್ಲಿ ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳ ಮೂಲಕ ಉಪನ್ಯಾಸ ನೀಡಿದರು.ಎರೆಹುಳುವಿನಂತೆ ಜೇನು ಸಹ ರೈತನ ಮಿತ್ರವಾಗಿದೆ, ಮಾನವನ ಬದುಕಿಗೆ ಅವಶ್ಯಕವಾಗಿರುವ ಜೇನಿನ ಬಗ್ಗೆ ನಮಗಿರುವ ಮಾಹಿತಿಯ ಅತ್ಯಲ್ಪವಾಗಿದೆ. ಅದಕ್ಕಾಗಿ ಈ ಜೇನಿನ ಕುರಿತಾದ ಸಮಗ್ರ ಮಾಹಿತಿಯನ್ನು ನೀಡುವಂತಹ ಪಾಠವನ್ನು ಪಠ್ಯಪುಸ್ತಕದಲ್ಲಿ ಅಳವಡಿಸುವ ಅವಶ್ಯಕತೆಯಿದೆ. ಈಗಾಗಲೇ ನಾನು ಈ ಕುರಿತು ಪ್ರಸ್ತಾವನೆಯನ್ನು ರಾಜ್ಯ ಹಾಗೂ ಕೇಂದ್ರ ಕೃಷಿ ಸಚಿವರಿಗೆ ಸಲ್ಲಿಸಿದ್ದು, ಅವರಿಂದ ಸಕಾರಾತ್ಮಕ ಸ್ಪಂದನೆ ದೊರಕಿದೆ ಎಂದರು.

ಜಗತ್ತಿನಲ್ಲಿ ಹಾಳಾಗದೇ ಇರುವ ಏಕೈಕ ವಸ್ತುವೆಂದರೇ ಅದು ಜೇನು, ಸರ್ವರೋಗಗಳಿಗೆ ಮದ್ದು ನೀಡುವ ಶಕ್ತಿ ಜೇನಿಗಿದೆ, ಇಂದೂ ಜಗತ್ತಿನಾದ್ಯಂತ ಅತೀ ಬೇಡಿಕೆಯಲ್ಲಿರುವ ವಸ್ತುವೆಂದರೇ ಜೇನು. ವಿಶ್ವದಲ್ಲಿ ಜೇನಿನ ಐದು ಪ್ರಬೇಧಗಳಿದ್ದು, ಅದರಲ್ಲಿ ನಾಲ್ಕು ಪ್ರಬೇಧಗಳು ನಮ್ಮ ದೇಶದಲ್ಲಿಯೇ ಇರುವುದರಿಂದ ನಮ್ಮ ದೇಶವನ್ನು ಜೇನಿನ ತವರು ಎಂದು ಕರೆಯಲಾಗುತ್ತಿದೆ ಎಂದು ಹೇಳಿದರು.ಜೇನು ಯುವ ವಿಜ್ಞಾನಿ ಧ್ರುವ ಭಟ್ ಮಾತನಾಡಿ, ಜೇನು ಕೃಷಿಯು ಆದಾಯ ತರುವಂತಹ ಕೃಷಿಯಾಗಿದೆ. ಈ ಕೃಷಿಗೆ ತಾಳ್ಮೆ ಬೇಕು, ಜೇನು ಕಲ್ಪವೃಕ್ಷವಿದ್ದಂತೆ. ಜೇನಿನ ಪ್ರತಿಯೊಂದು ಉತ್ಪನ್ನಗಳಿಗೂ ಬೇಡಿಕೆಯಿದ್ದು, ಹೆಚ್ಚಿನ ಆದಾಯ ಗಳಿಸಬಹುದು ಎಂದರು.

ಮಾರುಕಟ್ಟೆಯಲ್ಲಿ ಜೇನು ತುಪ್ಪಕ್ಕೆ ಇರುವಂತಹ ಬೇಡಿಕೆ ಯಾವ ವಸ್ತುಗಳಿಗೂ ಕಂಡು ಬರುವುದಿಲ್ಲ ಎಂದರು. ಮಾರುಕಟ್ಟೆಯಲ್ಲಿಂದು ಶುದ್ಧ ಜೇನು ತುಪ್ಪದ ಕೊರತೆಯಿದೆ, ಇದನ್ನು ನೋಡಿಕೊಂಡೇ ಅತೀ ಹೆಚ್ಚು ಪ್ರಮಾಣದಲ್ಲಿ ಕಲಬೆರಕೆಯಾದ ಜೇನು ತುಪ್ಪ ಮಾರುಕಟ್ಟೆಯಲ್ಲಿ ಇಂದು ಮಾರಾಟವಾಗುತ್ತಿದೆ ಎಂದರು.

ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ, ಬಂಧಿಗಳ ಮನ ಪರಿವರ್ತನೆಗಾಗಿ ಹಾಗೂ ಸ್ವಾವಲಂಬನೆಯ ಬದುಕಿಗಾಗಿ ಸರ್ಕಾರಗಳು ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿವೆ. ಅದಕ್ಕಾಗಿ ಇವುಗಳ ಸದುಪಯೋಗವನ್ನು ಪಡೆದು ಉತ್ತಮ ಹವ್ಯಾಸ ಬೆಳೆಸುವುದರೊಂದಿಗೆ ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲೂಕ ಉಪ-ಕಾರಾಗೃಹದ ಅಧೀಕ್ಷಕ ಕಲ್ಲಪ್ಪ ಗಸ್ತಿ ಮಾತನಾಡಿದರು. ಯುವಪತ್ರಕರ್ತ ಸಂಜು ಕೊಳೂರ ಸ್ವಾವಲಂಬಿ ಗೌರವದ ಬದುಕನ್ನು ಸಾಗಿಸಲು ಇರುವ ವಿವಿಧ ಯಶಸ್ವಿ ಮಾರ್ಗಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಪರ್ಧೆ ಎದುರಿಸಲು ಯುವ ವಿದ್ಯಾರ್ಥಿಗಳು ಸನ್ನದ್ಧರಾಗಬೇಕು
ಪರಸ್ಪರ ಹೊಂದಾಣಿಕೆ, ಪ್ರೀತಿ ವಿಶ್ವಾಸವೇ ಜೀವನ