ಹೊಸಕೋಟೆ-ಚೆನ್ನೈ ಎಕ್ಸ್‌ಪ್ರೆಸ್‌ವೇ (ಹೆದ್ದಾರಿ) ನಿರ್ಮಾಣದಿಂದಾಗಿ ಕೆಜಿಎಫ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರೈತರ ಕೃಷಿ ಭೂಮಿಗಳು ಸಂಪರ್ಕ ಕಳೆದುಕೊಂಡಿದ್ದು (ಲ್ಯಾಂಡ್ ಲಾಕ್ಡ್) ಈ ಸಮಸ್ಯೆ ಬಗೆಹರಿಸಲು ತಕ್ಷಣವೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಅಗತ್ಯ ನಿರ್ದೇಶನ ನೀಡುವಂತೆ ಕೆಜಿಎಫ್ ಶಾಸಕಿ ಡಾ.ರೂಪಕಲಾ ಎಂ.ಶಶಿಧರ್ ಅವರು ಮುಖ್ಯ ಕಾರ್ಯದರ್ಶಿಗೆ ಮನವಿ
ಕನ್ನಡಪ್ರಭ ವಾರ್ತೆ ಬೇತಮಂಗಲ
ಹೊಸಕೋಟೆ-ಚೆನ್ನೈ ಎಕ್ಸ್‌ಪ್ರೆಸ್‌ವೇ (ಹೆದ್ದಾರಿ) ನಿರ್ಮಾಣದಿಂದಾಗಿ ಕೆಜಿಎಫ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರೈತರ ಕೃಷಿ ಭೂಮಿಗಳು ಸಂಪರ್ಕ ಕಳೆದುಕೊಂಡಿದ್ದು (ಲ್ಯಾಂಡ್ ಲಾಕ್ಡ್) ಈ ಸಮಸ್ಯೆ ಬಗೆಹರಿಸಲು ತಕ್ಷಣವೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಅಗತ್ಯ ನಿರ್ದೇಶನ ನೀಡುವಂತೆ ಕೆಜಿಎಫ್ ಶಾಸಕಿ, ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಡಾ.ರೂಪಕಲಾ ಎಂ.ಶಶಿಧರ್ ಅವರು ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ.
ಶಾಸಕರು ಶುಕ್ರವಾರ ಬರೆದ ಪತ್ರದಲ್ಲಿ ರೈತರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ವಿವರವಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ.
ಸಂಪರ್ಕ ಇಲ್ಲದ ಕೃಷಿ ಭೂಮಿ: ಎಕ್ಸ್‌ಪ್ರೆಸ್‌ವೇ ನಿರ್ಮಾಣದಿಂದಾಗಿ ರೈತರು ತಮ್ಮ ಜಮೀನುಗಳಿಗೆ ನೇರವಾಗಿ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಕೃಷಿ ಚಟುವಟಿಕೆಗಳಿಗಾಗಿ ರೈತರು ಸುಮಾರು ೧ ರಿಂದ ೨ ಕಿಲೋಮೀಟರ್ ಹೆಚ್ಚುವರಿ ದೂರ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ಅವರಲ್ಲಿ ತೀವ್ರ ಆರ್ಥಿಕ ಹೊರೆ ಮತ್ತು ಹತಾಶೆ ಉಂಟುಮಾಡಿದೆ ಎಂದು ಉಲ್ಲೇಖ ಮಾಡಿದ್ದಾರೆ.
ಯೋಜನೆಯ ಆರಂಭದಿಂದಲೂ ಸಂತ್ರಸ್ತ ರೈತರು ತಮ್ಮ ಜಮೀನುಗಳಿಗೆ ಹೋಗಲು ಎಕ್ಸ್‌ಪ್ರೆಸ್‌ವೇ ಪಕ್ಕದಲ್ಲಿ ಸೇವಾ ರಸ್ತೆಗಳನ್ನು (ಸರ್ವಿಸ್ ರೋಡ್) ನಿರ್ಮಿಸಿಕೊಡುವಂತೆ ರಸ್ತೆಯ ಕಚೇರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯಾವುದೇ ಹಂತದಲ್ಲೂ ರೈತರ ಈ ನ್ಯಾಯಸಮ್ಮತ ಬೇಡಿಕೆಗೆ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ಶಾಸಕರು ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುವುದನ್ನು ತಡೆಯಲು ಮತ್ತು ರೈತರ ಹಿತರಕ್ಷಣೆಗಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ತಕ್ಷಣವೇ ಮಧ್ಯಪ್ರವೇಶಿಸಬೇಕು. ಮಾನವೀಯತೆಯ ಆಧಾರದ ಮೇಲೆ ರೈತರ ಮನವಿಗಳನ್ನು ಪರಿಗಣಿಸಿ, ಅವರಿಗೆ ಪ್ರಾಯೋಗಿಕವಾಗಿ ಅನುಕೂಲವಾಗುವಂತೆ ತಕ್ಷಣವೇ ಸಂಪರ್ಕ ರಸ್ತೆಗಳನ್ನು ಒದಗಿಸಲು ರಾಷ್ಟ್ರೀಯ ಯೋಜನಾ ಪ್ರಾಧಿಕಾರದ ಅಧಿಕಾರಿಗಳಿಗೆ ಅಗತ್ಯ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕೆಂದು ಡಾ.ರೂಪಕಲಾ ಎಂ.ಶಶಿಧರ್ ಪತ್ರದ ಮೂಲಕ ಅತ್ಯಂತ ತುರ್ತಾಗಿ ವಿನಂತಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.