ಲೈಸನ್ಸ್ ಇಲ್ಲದೆ ಲಿಕ್ಕರ್ ಮಾರಿದರೆ ಹೊಟೇಲ್‌ ಲೈಸನ್ಸ್ ರದ್ದು: ಶಾಸಕ ಭೀಮಣ್ಣ ನಾಯ್ಕ

KannadaprabhaNewsNetwork |  
Published : May 29, 2025, 12:16 AM IST
ಪೊಟೋ೨೮ಎಸ್.ಆರ್.ಎಸ್೩ (ನಗರದ ತಾಲೂಕಾಡಳಿತ ಸೌಧದಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿದರು.) | Kannada Prabha

ಸಾರಾಂಶ

ಹಳ್ಳಿಗಳಲ್ಲಿರುವ ಅಂಗಡಿಗಳಲ್ಲಿ ರಾಜಾರೋಷವಾಗಿ ಸರಾಯಿ ಮಾರಾಟ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ಮಾಹಿತಿ ಬಂದಿದೆ.

ಶಿರಸಿ; ಹಳ್ಳಿಗಳಲ್ಲಿರುವ ಅಂಗಡಿಗಳಲ್ಲಿ ರಾಜಾರೋಷವಾಗಿ ಸರಾಯಿ ಮಾರಾಟ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ಮಾಹಿತಿ ಬಂದಿದೆ. ಲೈಸನ್ಸ್ ಇಲ್ಲದೆ ಲಿಕ್ಕರ್ ಮಾರಾಟ ಮಾಡಿದರೆ ಹೊಟೇಲ್‌ಗಳ ಲೈಸನ್ಸ್ ರದ್ದು ಮಾಡಲು ಕ್ರಮ ಕೈಗೊಳ್ಳುವಂತೆ ಶಾಸಕ ಭೀಮಣ್ಣ ನಾಯ್ಕ ಸೂಚನೆ ನೀಡಿದರು.

ಅವರು ನಗರದ ತಾಲೂಕಾಡಳಿತ ಸೌಧದಲ್ಲಿ ಬುಧವಾರ ಆಯೋಜಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಶಾಲಾ-ಕಾಲೇಜುಗಳ ಪಕ್ಕದಲ್ಲೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿದೆ. ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಗ್ರಾಮೀಣ ಭಾಗದಲ್ಲಿ ಪೋಕ್ಸೋ ಹಾಗೂ ಬಾಲ್ಯ ವಿವಾಹ ಪ್ರಕರಣ ಹೆಚ್ಚಾಗುತ್ತಿದೆ.ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಇಂತಹ ನೀಚ ಕೆಲಸ ಮಾಡುವವರ ಬಗ್ಗೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಪಿಡಿಒಗಳು ಗ್ರಾಮ ಪಂಚಾಯತ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು. ಸಣ್ಣ ಸಣ್ಣ ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಸರಿಯಲ್ಲ. ಶಾಲೆಗಳಲ್ಲಿ ಮಕ್ಕಳಿಗೆ ಈ ಬಗ್ಗೆ ಜಾಗೃತಿ ಮೂಡಿಸುವಂತಹ ಕೆಲಸವಾಗಬೇಕು. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕೆಡಿಪಿ ಸಭೆಯನ್ನು ನಡೆಸಲಾಗುತ್ತದೆ. ಕರ್ತವ್ಯವನ್ನು ಸರಿಯಾಗಿ ನಿಭಾಯಿಸಲು ಆಗದ ಅಧಿಕಾರಿಗಳ ಬಗ್ಗೆ ಎನು ಹೇಳುವುದು ಎಂದು ತಿಳಿಯುತ್ತಿಲ್ಲ ಎಂದು ಸಿಟ್ಟಾದರು.

ಬೆಳೆ ವಿಮಾ ಇನ್ಶುರೆನ್ಸ್ ಕಂಪನಿ ರೈತರಿಗೆ ಟೊಪ್ಪಿಗೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಮಳೆ ಮಾಪನ ವೈಫಲ್ಯತೆ ಎಂದು ಕಾರಣ ಹೇಳುತ್ತಾರೆ. ತಾಲೂಕಿನಲ್ಲಿರುವ ಮಳೆ ಮಾಪನವನ್ನು ಸರಿಯಾಗಿ ನಿರ್ವಹಣೆ ಮಾಡುವವರು ಯಾರು ಎಂಬುದು ತಿಳಿಯುತ್ತಿಲ್ಲ. ಹಣ ಬಂದು ೫ ತಿಂಗಳಾದರೂ ಇನ್ನು ಹಲವು ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಏನು ಮಾಡುತ್ತಿದ್ದೀರಿ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಪ್ರಶ್ನಿಸಿದ ಅವರು, ರಸ್ತೆಗಳ ಕಡೆಗೆ ವಾಲಿದ ಅಪಾಯಕಾರಿ ಮರಗಳನ್ನು ಹಾಗೂ ಶಾಲೆ, ಅಂಗನವಾಡಿ ಸಮೀಪ ಇರುವ ಮರಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಅಧಿಕಾರಿಗಳು ಕುರ್ಚಿಗೆ ಮಾತ್ರ ಸೀಮಿತರಾಗಿರಬಾರದು. ಸರ್ಕಾರದ ಸೌಲಭ್ಯಗಳನ್ನು ರೈತರಿಗೆ ತಿಳಿಸಿ ಹೇಳಬೇಕು. ರೈತರಿಗೆ ತಲುಪಿಸಬೇಕು. ಅಧಿಕಾರಿಗಳೇ ಸುಮ್ಮನಿದ್ದರೆ ಸರ್ಕಾರದ ಯಾವ ಸೌಲಭ್ಯಗಳೂ ಜನರಿಗೆ ತಲುಪುವುದಿಲ್ಲ ಎಂದರು.

ತಾಲೂಕು ವೈದ್ಯಾಧಿಕಾರಿ ಡಾ.ವಿನಾಯಕ ಭಟ್ಟ ಮಾತನಾಡಿ, ಶಿರಸಿ ತಾಲೂಕಿನಲ್ಲಿ ಎರಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆಯಿದೆ. ಸಿಬ್ಬಂದಿ ಕೊರತೆ ಸಹ ಇದೆ. ಔಷಧಿಗಳ ದಾಸ್ತಾನು ಸಾಕಷ್ಟಿದೆ. ಕೋವಿಡ್ ಪರೀಕ್ಷೆಯನ್ನು ಪ್ರಾರಂಭ ಮಾಡುತ್ತೇವೆ. ತಾಲೂಕು ಆಸ್ಪತ್ರೆಗೆ ಕಿಟ್‌ಗಳನ್ನು ನೀಡಲಾಗಿದೆ. ಪರೀಕ್ಷೆ ನಡೆಸಿ ಶಿವಮೊಗ್ಗ ಲ್ಯಾಬ್‌ಗೆ ಕಳುಹಿಸಲಾಗುವುದು ಎಂದರು.

ತೋಟಗಾರಿಕೆ ಇಲಾಖೆಯ ಸತೀಶ್ ಹೆಗಡೆ ಮಾತನಾಡಿ, ಮಳೆ ಮಾಪನ ಕೇಂದ್ರಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯುತ್ತಲೇ ಇದ್ದೇವೆ. ಮಳೆ ಮಾಪನ ಕೇಂದ್ರದ ನಿರ್ವಹಣಾ ಕಮಿಟಿಯು ರಾಜ್ಯ ಸರ್ಕಾರದ ನೇರ ಅಡಿಯಲ್ಲಿದೆ.ಅವರು ಯಾವುದೇ ಅಧಿಕಾರಿಗಳ ಮಾತನ್ನೂ ಕೇಳುವುದಿಲ್ಲ. ಇದೀಗ ರಾಜ್ಯ ಸರ್ಕಾರದಿಂದ ಆದೇಶ ಬಂದ ಹಿನ್ನೆಲೆಯಲ್ಲಿ ಮಳೆ ಮಾಪನ ನಿರ್ವಹಣೆ ಮಾಡುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದರು.

ತಾಪಂ ಇಒ ಚನ್ನಬಸಪ್ಪ ಹಾವಣಗಿ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಮತಗಿಯಲ್ಲಿ ನಿವೃತ್ತ ಯೋಧ ಲಕ್ಷ್ಮಣಗೆ ಭವ್ಯ ಸ್ವಾಗತ
ಉತ್ತರದ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯ ಅಗತ್ಯ: ಉ.ಕ.ಹೋರಾಟ ಸಮಿತಿ