ಗದಗ: ಶಿಕ್ಷಕರು ಕೇವಲ ಪಾಠ ಹೇಳುವವರಲ್ಲ. ಅವರು ವಿದ್ಯಾರ್ಥಿಗಳ ಬದುಕಿನ ದಾರಿದೀಪವಾಗಿದ್ದಾರೆ. ಕೇವಲ ಪಠ್ಯಕ್ರಮವನ್ನು ಪೂರ್ಣಗೊಳಿಸುವುದಿಲ್ಲ, ಬದಲಿಗೆ ನಮ್ಮ ವಿದ್ಯಾರ್ಥಿಗಳಲ್ಲಿ ಜ್ಞಾನದ ಹಸಿವನ್ನು, ಕುತೂಹಲವನ್ನು ಮತ್ತು ಸೃಜನಶೀಲತೆಯನ್ನು ಬಿತ್ತುವವರು ಶಿಕ್ಷಕರೇ ಎಂದು ಕೆಎಲ್ಇ ಸಂಸ್ಥೆಯ ನಿರ್ದೇಶಕ ಎಸ್.ಐ. ಮುನವಳ್ಳಿ ಹೇಳಿದರು.
ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಿಕ್ಷಕರು ಕೇವಲ ಪಾಠ ಹೇಳುವವರಲ್ಲ, ಬದಲಿಗೆ ವಿದ್ಯಾರ್ಥಿಗಳಿಗೆ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಶಿಲ್ಪಿಗಳು. ಅವರ ನಿಸ್ವಾರ್ಥ ಸೇವೆಗೆ ನಾವು ಸದಾ ಋಣಿಯಾಗಿರಬೇಕು ಎಂದರು.
ಪದವಿ ಕಾಲೇಜು ಪ್ರಾಚಾರ್ಯ ಪಿ.ಜಿ. ಪಾಟೀಲ ಮಾತನಾಡಿ, 2020ರ ಹೊಸ ಶಿಕ್ಷಣ ನೀತಿಯಿಂದ ವಿಕಸಿತ ಭಾರತ ಎಂಬ ಕಲ್ಪನೆಗೆ ಪೂರಕವಾದ ಉದ್ಯೋಗ ಅವಕಾಶಗಳು, ನಾವಿನ್ಯತೆ, ಸಂಶೋಧನೆಗೆ ಅಡಿಪಾಯವಾಗುತ್ತದೆ. ಮುಂದೆ ಮಹಾವಿದ್ಯಾಲಯದಲ್ಲಿ ಬಿಎ-ಬಿಇಡಿ ಹಾಗೂ ಬಿಎಸ್‌ಸಿ-ಬಿಇಡಿ 2026-27ನೇ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭವಾಗುತ್ತಿದೆ ಎಂದರು.ಪಪೂ ಕಾಲೇಜು ಪ್ರಾಚಾರ್ಯ ಎಸ್.ಬಿ. ಹಾವೇರಿ, ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಎಸ್.ಪಿ. ಸಂಶಿಮಠ ಮುಂತಾದವರು ಮಾತನಾಡಿದರು. ಕಾಲೇಜಿನ ಶಿಕ್ಷಕರನ್ನು ಗೌರವಿಸಲಾಯಿತು. ಸೌಭಾಗ್ಯಾ ಹಿರೇಮಠ ಪ್ರಾರ್ಥಿಸಿದರು. ಆರ್.ಜಿ. ಪಾಟೀಲ ಹಾಗೂ ರೀಮಾ ಬಾಕಳೆ ಕಾರ್ಯಕ್ರಮ ನಿರೂಪಿಸಿದರು.