ಮನುಷ್ಯನ ಪತನ ಶುರುವಾಗಿದ್ದೇ ಊಟದಿಂದ: ರಾಘವೇಶ್ವರ ಶ್ರೀ

KannadaprabhaNewsNetwork |  
Published : Sep 03, 2026, 02:30 AM IST
ಶ್ರೀಗಳಿಂದ ಆಶೀರ್ವಾದ ಪಡೆಯುತ್ತಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ | Kannada Prabha

ಸಾರಾಂಶ

ಚರಕ ಸಂಹಿತೆಯು ಸೃಷ್ಟಿಯ ಆದಿಯಲ್ಲಿ ಮನುಷ್ಯರು ದೇವರಿಗೆ ಸರಿಸಮಾನವಾದ ಓಜಸ್ಸನ್ನು ಹೊಂದಿದ್ದರು. ಗಟ್ಟಿಮುಟ್ಟಾದ ಶರೀರವನ್ನು, ಪ್ರಸನ್ನವಾದ ಇಂದ್ರಿಯಗಳನ್ನು, ಪರಿಪೂರ್ಣ ಆರೋಗ್ಯವನ್ನು ಹೊಂದಿದ್ದರು ಎಂದಿದೆ.

ಗೋಕರ್ಣ: ಹುಟ್ಟಿದ ಪ್ರತಿಜೀವಿಯೂ ಆಹಾರದ ಒಳಹೊರಗನ್ನು ತಿಳಿದುಕೊಳ್ಳಲೇಬೇಕು. ಆಹಾರದ ವಿಚಾರವನ್ನು ತಿಳಿದುಕೊಳ್ಳದೇ ಇದ್ದರೆ ಮನುಷ್ಯನಾಗಿ ಜೀವಿಸುವ ಹಕ್ಕನ್ನೇ ಕಳೆದುಕೊಂಡಂತೆ. ಹಾಗಾಗಿ ಆಹಾರದ ವಿಚಾರವಾಗಿ ನಾವು ವಿಮರ್ಶೆ ಮಾಡಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿಗಳು ನುಡಿದರು. ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ''''ಅನ್ನಬ್ರಹ್ಮ ಚಾತುರ್ಮಾಸ್ಯ''''ದ ಬುಧವಾರದ ಧರ್ಮಸಭೆಯಲ್ಲಿ ''''ಅನ್ನಂ ಬ್ರಹ್ಮ'''' ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಕೃತಯುಗದಲ್ಲಿ ಅಗ್ನಿ ಹಾಗೂ ಆಹಾರದ ವಿಚಾರದಲ್ಲಿ ಮೊದಲ ತಪ್ಪು ಹೆಜ್ಜೆ ಆರಂಭವಾಯಿತು. ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ಸ್ವೀಕರಿಸಲು ಕೆಲವರು ಆರಂಭಿಸಿದರು. ಪರಿಣಾಮವಾಗಿ ಮಾನವರ ದೇಹ ಸ್ಥೂಲವಾಯಿತು ಎಂದರು.

ಆಲಸ್ಯ, ಕೂಡಿಡುವ ಬುದ್ಧಿ, ಲೋಭ, ದ್ರೋಹ, ಸುಳ್ಳು, ಕಾಮ ಕ್ರೋಧಾದಿಗಳು, ಹೀಗೆ ಒಂದರಿಂದ ಒಂದು ದುರ್ಗುಣಗಳು ಬೆಳೆಯುತ್ತಾ ಸಾಗಿತು. ಮನುಷ್ಯನ ವ್ಯಕ್ತಿತ್ವ ಪತನದ ದಾರಿಯನ್ನು ಹಿಡಿಯಿತು. ಅಗ್ನಿಯ ವ್ಯತ್ಯಾಸದಿಂದ ವಾತದಲ್ಲಿ ಬದಲಾವಣೆ, ಪರಿಣಾಮವಾಗಿ ರೋಗಗಳು ಮನುಷ್ಯನನ್ನು ಆಕ್ರಮಿಸಿದವು ಎಂದರು.

ಭಾರತೀಯ ಪರಂಪರೆ ಹೇಳುವಂತೆ ಕೃತಯುಗದಲ್ಲಿ ದೇವರು ಜಗತ್ತನ್ನು ತುಂಬಾ ಸುಂದರವಾಗಿ ಸೃಷ್ಟಿಸಿದ್ದ. ಅದು ದೇವರು ಸೃಷ್ಟಿಸಿದಂತೆಯೇ ಇದ್ದ ಕಾಲ. ಕೃತಯುಗ ಒಳಿತಿನ ಒಳಿತಾದರೆ ಈಗಿನ ಕಲಿಯುಗ ಕೆಡುಕಿನ ಕೆಡುಕು ಎನ್ನಬಹುದು. ಅಂದು ಜನರು ಪರಿಪೂರ್ಣ ಆರೋಗ್ಯವನ್ನು ಹೊಂದಿದ್ದರು. ಕೃತಯುಗದ ವರ್ಣನೆಯನ್ನು ಕೇಳುವಾಗ ಅದು ಅತಿಶಯೋಕ್ತಿ ಎನಿಸಬಹುದು. ಏಕೆಂದರೆ ನಾವು ಅಂಥ ವಾತಾವರಣವನ್ನು ನೋಡಿಲ್ಲ. ಹಾಗಾಗಿ ಅದು ಸುಳ್ಳು ಎನಿಸಬಹುದು ಎಂದರು.

ಚರಕ ಸಂಹಿತೆಯು ಸೃಷ್ಟಿಯ ಆದಿಯಲ್ಲಿ ಮನುಷ್ಯರು ದೇವರಿಗೆ ಸರಿಸಮಾನವಾದ ಓಜಸ್ಸನ್ನು ಹೊಂದಿದ್ದರು. ಗಟ್ಟಿಮುಟ್ಟಾದ ಶರೀರವನ್ನು, ಪ್ರಸನ್ನವಾದ ಇಂದ್ರಿಯಗಳನ್ನು, ಪರಿಪೂರ್ಣ ಆರೋಗ್ಯವನ್ನು ಹೊಂದಿದ್ದರು ಎಂದಿದೆ. ಆಗ ರೋಗವೂ ಇರಲಿಲ್ಲ, ವೈದ್ಯರಿರಲಿಲ್ಲ, ವೈದ್ಯಶಾಸ್ತ್ರವೂ ಇರಲಿಲ್ಲ. ಔಷಧದ ಅಂಗಡಿಗಳೂ ಇರಲಿಲ್ಲ ಎಂದು ಶ್ರೀಗಳು ವಿವರಿಸಿದರು.ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಂಜುನಾಥ ಜನ್ನು, ಮಹೇಶ ಶೆಟ್ಟಿ, ಹನುಮಂತ ಗೌಡ ಮುಂತಾದವರು ಕಾರ್ಯಕ್ರಮದಲ್ಲಿ ಶ್ರೀಗಳ ಆಶೀರ್ವಾದ ಪದೆದರು.ಉಪ್ಪಿನಂಗಡಿ ಹವ್ಯಕ ಮಂಡಲದ ಮಾಣಿ, ಕಬಕ, ಉಜಿರೆ, ಉಪ್ಪಿನಂಗಡಿ, ಉರುವಾಲು, ವೇಣೂರು ಹವ್ಯಕ ವಲಯಗಳ ಪರವಾಗಿ ವೈ. ಗಣರಾಜ ಕೊಣಮ್ಮೆ ಕುಟುಂಬದವರು ಗುರುಭಿಕ್ಷಾ ಸೇವೆಯನ್ನು ಸಮರ್ಪಿಸಿದರು. ನಾರಾಯಣ ಭಟ್ ಹಾರೆಕೆರೆ, ಅರವಿಂದ ದರ್ಬೆ, ಗಣಪತಿ ಜಟ್ಟಿಮನೆ, ಮಹೇಶ ಕುದಪುಲಾ, ಪರಮೇಶ್ವ ಭಟ್ ವೇಣೂರು, ಶಿವಪ್ರಸಾದ ವೇಣೂರು ಹಾಗೂ ದಿನಪ್ರಧಾನರಾಗಿ ವೆಂಕಟಗಿರಿ ಎಂ.ಆರ್. ದಂಪತಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾರುಕಟ್ಟೆ ಸ್ಥಳಾಂತರಿಸಲು ಆಗ್ರಹಿಸಿ ಮನವಿ
ಕ್ರೀಡೆಯಿಂದ ಶಿಸ್ತು, ನಾಯಕತ್ವ ಗುಣ ವೃದ್ಧಿ; ಬಿಇಒ ದಯಾನಂದ