ರಾಮನಗರ: ರಾಮನಗರ ಕ್ಷೇತ್ರದಲ್ಲಿ ಆಗಬೇಕಿರುವ ಶಾಶ್ವತ ಅಭಿವೃದ್ಧಿ ಕೆಲಸಗಳ ಬಗ್ಗೆ ಅಧಿವೇಶನದಲ್ಲಿ ಸಚಿವರು ಮತ್ತು ಸರ್ಕಾರದ ಗಮನವನ್ನು ಸೆಳೆಯುತ್ತೇನೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.
ನಗರದ ಪ್ರಮುಖ ವೃತ್ತಗಳನ್ನು ಸೌಂದರೀಕರಣಗೊಳಿಸುವುದು ಸೇರಿದಂತೆ ಕಾರಂಜಿ ನಿರ್ಮಾಣ, ಲೈಟ್ ಅಳವಡಿಕೆ, ವಾಯು ವಿಹಾರಿಗಳಿಗೆ ವಿಶ್ರಾಂತಿ ಬೆಂಚ್‌ಗಳನ್ನು ನಿರ್ಮಿಸಲಾಗುವುದು. ಇದಕ್ಕೆ ಸುಮಾರು 5 ಕೋಟಿ ರು.ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದು ಪ್ರಸ್ತಾವನೆ ಸಲ್ಲಿಸಿದ್ದೇನೆ. ಆದರೆ, 1.75 ಕೋಟಿ ರು. ಅನುದಾನ ಸರ್ಕಾರದಿಂದ ಲಭ್ಯವಾಗಿದ್ದು, ಅದರಲ್ಲಿ ವಾಟರ್ ಟ್ಯಾಂಕ್ ವೃತ್ತ ಮತ್ತು ಕೆಂಪೇಗೌಡ ವೃತ್ತ ಹಾಗೂ ರಸ್ತೆಯ ಎರಡು ಇಕ್ಕೆಲಗಳನ್ನು 1.75 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ಎಲ್ಲರಿಗೂ ಆರೋಗ್ಯ ಅತೀ ಮುಖ್ಯ. ಅದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನಗರಸಭೆಯ 10 ಲಕ್ಷ ರು.ಅನುದಾನ ಹಾಗೂ ಉಳಿದ ಅನುದಾನವನ್ನು ಜಿಪಂನ ಅನುದಾನದಲ್ಲಿ ಭರಿಸಿ ಪಟ್ಟಣದಲ್ಲಿ 75 ಲಕ್ಷ ರು. ವೆಚ್ಚದಲ್ಲಿ ಯೋಗ ಕೊಠಡಿ ನಿರ್ಮಿಸಲಾಗುತ್ತಿದೆ. ನೆರೆಹಾವಳಿಯ ಅನುದಾನದ, ಉಳಿತಾಯ ಅನುದಾನ ಬಳಸಿ ಹಲವು ಅಭಿವೃದ್ದಿ ಕಾರ್ಯ ಗಳಿಗೆ ನಗರಸಭೆ ಅಧ್ಯಕ್ಷರು, ಸದಸ್ಯರ ಸಹಕಾರದಲ್ಲಿ ಚಾಲನೆ ನೀಡಿರುವುದಾಗಿ ತಿಳಿಸಿದರು.ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಸೇರಿಸುವ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಒಳ್ಳೆಯ ಸಲಹೆ ಕೊಟ್ಟಿದ್ದಾರೆ. ಸರ್ಕಾರ ಅದರ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಶಾಸಕ ಇಕ್ಬಾಲ್ ಹುಸೇನ್ ಉತ್ತರಿಸಿದರು.
ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಮಾತನಾಡಿ, ಶಾಸಕ ಎಚ್.ಎ.ಇಕ್ಬಾಲ್‌ಹುಸೇನ್ ಮತ್ತು ನಾವು ಪಟ್ಟಣದ ಸೌಂದರೀಕರಣಕ್ಕೆ ಸಂಕಲ್ಪ ಮಾಡಿದ್ದೇವೆ. ಹೇಳಲಾಗದ ಕೆಲವು ಸಮಸ್ಯೆಗಳ ಸಾಕಾರಕ್ಕೆ ಸಾಕಷ್ಟು ಅನುದಾನ ಬೇಕಿದೆ. ಶಾಸಕರು ಕ್ಷೇತ್ರದ ಹಲವು ಅಭಿವೃದ್ಧಿ ಕೆಲಸಗಳ ಬಗ್ಗೆ ಕನಸ್ಸುಗಳನ್ನು ಇಟ್ಟುಕೊಂಡಿದ್ದಾರೆ. ಅವರ ಕನಸು, ಆಸೆಗಳ ಈಡೇರಿಕೆಗೆ ನಾವು ಕೂಡ ಸಹಕಾರ ಕೊಟ್ಟು ಮಾದರಿ ನಗರವನ್ನಾಗಿಸಲು ಶ್ರಮಿಸುತ್ತೇವೆ. ಇದಕ್ಕೆ ಸಾರ್ವಜನಿಕರು ಸಹ ನಮ್ಮಗಳ ಜೊತೆ ಕೈಜೋಡಿಸಬೇಕಿದೆ ಎಂದು ಹೇಳಿದರು.ರಾಮನಗರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ನಗರಸಭೆ ಉಪಾಧ್ಯಕ್ಷೆ ಆಯಿಷಾಬಾನು, ಸದಸ್ಯರಾದ ಸೋಮಶೇಖರ್, ಗಿರಿಜಮ್ಮ, ಪವಿತ್ರ, ಜಯಲಕ್ಷ್ಮಮ್ಮ, ಅಜ್ಮತ್, ನಿಜಾಂ ಷರೀಫ್, ಬೈರೇಗೌಡ, ಸಮದ್, ಗೋವಿಂದರಾಜು, ಅಣ್ಣು, ನಾಗಮ್ಮ, ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಗುರುಪ್ರಸಾದ್, ಬಗರ್ ಹುಕ್ಕುಂ ಸಾಗುವಳಿ ಸಮಿತಿ ಸದಸ್ಯ ರವಿ, ಪೌರಾಯುಕ್ತ ಡಾ.ಜಯಣ್ಣ, ಎಇಇ ವಿಶ್ವನಾಥ್, ಇಂಜಿನಿಯರ್ ಪವಿತ್ರ, ಪಿಆರ್‌ಡಿ ಎಇಇ ಲಾವಣ್ಯ, ಇಂಜಿನಿಯರ್ ಸತ್ಯಪ್ರಕಾಶ್, ಲೋಕೋಪ ಯೋಗಿ ಇಲಾಖೆ ಎಇಇ ಪಳಿನಿಸ್ಚಾಮಿ ಮುಖಂಡರಾದ ಮಂಗಾಡಹಳ್ಳಿ ಬಸವರಾಜು, ಸೋಮಶೇಖರ್, ಪ್ರವೀಣ್ ಮತ್ತಿತರರು ಹಾಜರಿದ್ದರು.
ಕೋಟ್ ...ರಾಮನಗರ ಟೌನಿನ ಪ್ರಮುಖ ವೃತ್ತಗಳ ಸೌಂದರ್ಯ ಹೆಚ್ಚಿಸುವ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಯಾವ ಇಲಾಖೆ ಅಧಿಕಾರಿಗಳು ಏಕ ನಿರ್ಧಾರ ತೆಗೆದುಕೊಳ್ಳಬಾರದು. ನಗರಸಭೆ ಅಧ್ಯಕ್ಷರು, ಎಂಜಿನಿಯರ್ ಗಳೊಂದಿಗೆ ವಿವಿಧ ಇಲಾಖೆ ಅಧಿಕಾರಿಗಳು ಚರ್ಚೆ ನಡೆಸಿ ಅನುದಾನ ಸದ್ಬಳಕೆ ಮಾಡಿಕೊಳ್ಳಬೇಕು.
- ಇಕ್ಬಾಲ್ ಹುಸೇನ್ , ಶಾಸಕರು, ರಾಮನಗರ ಕ್ಷೇತ್ರ6ಕೆಆರ್ ಎಂಎನ್ 1.ಜೆಪಿಜಿ
ರಾಮನಗರ ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡುಗಳಲ್ಲಿ ಸುಮಾರು 5 ಕೋಟಿ ರು. ವೆಚ್ಚದ ವಿವಿಧ ಅಭಿವೃದ್ದಿ ಕೆಲಸಗಳಿಗೆ ಶಾಸಕ ಇಕ್ಬಾಲ್ ಹುಸೇನ್ ಭೂಮಿ ಪೂಜೆ ನೆರವೇರಿಸಿದರು.