ಜೆಡಿಎಸ್ ಬೇಕಿಲ್ಲ ಎಂದು ಮುಸ್ಲಿಂ ಸಮುದಾಯ ಸಂದೇಶ- ಎಲ್ಲಿ ಕಳೆದುಕೊಂಡಿದ್ದೀನೋ ಅಲ್ಲೇ ಹುಡುಕ್ತೇನೆ : ನಿಖಿಲ್

KannadaprabhaNewsNetwork |  
Published : Nov 25, 2024, 01:04 AM ISTUpdated : Nov 25, 2024, 06:48 AM IST
nikhil kumaraswamy

ಸಾರಾಂಶ

ಚನ್ನಪಟ್ಟಣ: ನಾನು ಎಲ್ಲಿ ಕಳೆದುಕೊಂಡಿದ್ದೇನೋ ಅಲ್ಲಿಯೇ ಹುಡುಕುತ್ತೇನೆ. ಇಲ್ಲಿಯೇ ಮುಂದಿನ ರಾಜಕೀಯ ಮುಂದುವರೆಸುತ್ತೇನೆ. ಕ್ಷೇತ್ರದಲ್ಲಿ ನಮ್ಮ ಪಕ್ಷದ ಮೇಲೆ ದೊಡ್ಡಮಟ್ಟದ ಅಭಿಮಾನ ಇದೆ. ಪಕ್ಷದ ಕಾರ್ಯಕರ್ತರ ಜತೆಗೆ ನಾನು ಸದಾ ಇರುತ್ತೇನೆ  

ಚನ್ನಪಟ್ಟಣ: ನಾನು ಎಲ್ಲಿ ಕಳೆದುಕೊಂಡಿದ್ದೇನೋ ಅಲ್ಲಿಯೇ ಹುಡುಕುತ್ತೇನೆ. ಇಲ್ಲಿಯೇ ಮುಂದಿನ ರಾಜಕೀಯ ಮುಂದುವರೆಸುತ್ತೇನೆ. ಕ್ಷೇತ್ರದಲ್ಲಿ ನಮ್ಮ ಪಕ್ಷದ ಮೇಲೆ ದೊಡ್ಡಮಟ್ಟದ ಅಭಿಮಾನ ಇದೆ. ಪಕ್ಷದ ಕಾರ್ಯಕರ್ತರ ಜತೆಗೆ ನಾನು ಸದಾ ಇರುತ್ತೇನೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ತಾಲೂಕಿನ ಕೂಡ್ಲೂರು ಪಂಚಾಯಿತಿಯ ಶ್ರೀರಾಂಪುರ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತ ಮಂಜುನಾಥ್ ಮನೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಎರಡು ದಿನ ಇರುವಾಗ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ಹಾಕುತ್ತಾರೆ. ಇದನ್ನು ಚುನಾವಣಾ ಆಯೋಗ ಗಮನಿಸಬೇಕು. ಕನ್ನಡಿಗರ ತೆರಿಗೆ ಹಣವನ್ನು ಚುನಾವಣೆ ವೇಳೆ ಹಾಕುತ್ತಾರೆ. ನಾವು ಈ ವಿಚಾರದಲ್ಲಿ ಹೋರಾಟ ಮಾಡಲ್ಲ, ಹೋರಾಟ ಮಾಡಲು ಸರ್ಕಾರದ ಸಾಕಷ್ಟು ವೈಫಲ್ಯಗಳಿವೆ. ಹಲವು ವಿಚಾರಗಳಿವೆ. ಆ ವಿಚಾರದಲ್ಲಿ ಮುಂದೆ ನಾವು ಹೋರಾಟ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ ಕಾರಿದರು.

ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಮುಸ್ಲಿಂ ಮತಗಳು ಬಂದಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಚುನಾವಣೆಯಲ್ಲಿ ಹೆಚ್ಚಿನ ಮತ ಬಂದಿದೆ. ಆದರೆ ಒಂದು ಸಮುದಾಯದ ಮತಗಳು ಬಂದಿಲ್ಲ. ದೇವೇಗೌಡರ ಕೊಡುಗೆಯನ್ನು ಅವರು ನೆನಪಿಸಿಕೊಂಡಿಲ್ಲ. ನಮ್ಮ ಅವಶ್ಯಕತೆ ಅವರಿಗೆ ಇಲ್ಲ ಅನಿಸುತ್ತೆ. ಹಾಗಾಗಿ ನಾವು ಸಹ ಅವರನ್ನು ಬಿಟ್ಟು ಸ್ಟ್ರಾಟರ್ಜಿ ಮಾಡಬೇಕಾಗುತ್ತದೆ ಎಂದು ಹೇಳಿದರು.

ನಾವು ಕಾಂಗ್ರೆಸ್‌ನವರ ಬಳಿ ಹೋಗಿರಲಿಲ್ಲ. ಅವರೇ ನಮ್ಮ ಬಳಿ ಬಂದರು, ಸರ್ಕಾರ ಮಾಡಿದ್ದೆವು. ಆದರೆ ಅವರು ನಮಗೆ ಅನ್ಯಾಯ ಮಾಡಿದ್ದಕ್ಕೆ ನಾವು ಬಿಜೆಪಿಗೆ ಹೋಗಿದ್ದೇವೆ. ನನ್ನ ಸೋಲಿನ ಅಂತರ ನೋಡಿದಾಗ ಅದರ ಆಳವನ್ನು ಯಾರು ಹುಡುಕುತ್ತಿಲ್ಲ. ಆ ಸಮುದಾಯದವನ್ನು ಬದಿಗಿಟ್ಟು ಮಾತಾಡಿದರೆ ನಾವು ಸಮಬಲ ಹೋರಾಟ ಮಾಡಿದ್ದೇನೆ. ಹಳ್ಳಿಗಳಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಜನ ನಮಗೆ ಆಶೀರ್ವಾದ ಮಾಡಿದ್ದಾರೆ ಎಂದರು.

ನಾನು ಸೋತಿದ್ದೇನೆ ಎಂದು ಮನೆಯಲ್ಲಿ ಕೂರುವ ಜಾಯಮಾನ ನನ್ನದಲ್ಲ. ಈ ಹೋರಾಟ ಹೊಸದೇನು ಅಲ್ಲ. ನಾನು ಹೋರಾಟದ ಕಿಚ್ಚನ್ನು ರೂಢಿಸಿಕೊಂಡಿದ್ದೇನೆ. ಕಾಂಗ್ರೆಸ್ ನಡವಳಿಕೆ ಸರ್ಕಾರದ ವೈಫಲ್ಯಗಳ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಾನು ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.

ಮಂಜುನಾಥ್ ನಿವಾಸಕ್ಕೆ ನಿಖಿಲ್ ಭೇಟಿ

ಚನ್ನಪಟ್ಟಣ: ಉಪ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲಿನ ಹಿನ್ನೆಲೆಯಲ್ಲಿ ಮನನೊಂದು ಶನಿವಾರ ಆತ್ಮಹತ್ಯೆಗೆ ಯತ್ನಿಸಿದ್ದ ಕೂಡ್ಲೂರು ಪಂಚಾಯಿತಿಯ ಶ್ರೀರಾಂಪುರ ಗ್ರಾಮದ ಜೆಡಿಎಸ್ ಕಾರ್ಯಕರ್ತ ಮಂಜುನಾಥ್ (ಅಭಿ) ಅವರ ನಿವಾಸಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಈ ವೇಳೆ ಮಂಜುನಾಥ್ ಅವರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಇನ್ನೆಂದೂ ಇಂತಹ ದುಡುಕಿನ ನಿರ್ಧಾರ ಮಾಡಬಾರದು. ಚುನಾವಣೆ ಎಂದ ಮೇಲೆ ಸೋಲು ಗೆಲುವು ಸಾಮಾನ್ಯ. ಸೋಲೇ ಗೆಲುವಿನ ಮೆಟ್ಟಿಲು. ಹೀಗಾಗಿ ಯಾರೂ ಧೃತಿಗೆಡಬಾರದು ಎಂದು ಕಾರ್ಯಕರ್ತರಿಗೆ ನಿಖಿಲ್ ಮನವಿ ಮಾಡಿದರು.

ಕಾರ್ಯಕರ್ತರೇ ನಮ್ಮ ಪಕ್ಷದ ಶಕ್ತಿ. ಎಲ್ಲರೂ ಪಕ್ಷದ ಜತೆ ನಿಂತು ಕೆಲಸ ಮಾಡೋಣ, ಹೋರಾಟ ಮಾಡೋಣ. ನಾನು ಸೋತಿದ್ದೇನೆ ಎಂದು ಮನೆಯಲ್ಲಿ ಕೂರುವುದಿಲ್ಲ. ಎದೆಗುಂದುವುದಿಲ್ಲ ನಿಮ್ಮ ಜತೆ ನಾನು ಇರ್ತೀನಿ, ಪಕ್ಷ ಇರುತ್ತೆ ಯಾರು ಕೂಡ ಧೃತಿಗೆಡಬಾರದು ಎಂದು ಹೇಳಿದರು.

ಮನೆಗೆ ಆಧಾರವಾಗಿದ್ದ ಮಂಜುನಾಥ್ ಅವರು ಈ ರೀತಿ ಮಾಡಿಕೊಂಡಿದ್ದಕ್ಕೆ ಬಹಳ ಬೇಸರವಾಗಿದೆ. ಎರಡು ಮಕ್ಳಳಿವೆ, ಮನಸ್ಸು ಧೃತಿಗೆಡಬೇಡಿ ನಿಮ್ಮ ಜತೆ ನಾನಿರುತ್ತೇನೆ, ತಾಲೂಕಿನಲ್ಲಿ ದೇವೇಗೌಡರು ಹಾಗೂ ಕುಮಾರಣ್ಣ ಅವರ ಮೇಲೆ ಪಕ್ಷದ ಮೇಲೆ ಕಾರ್ಯಕರ್ತರು ಪ್ರಾಣ ಇಟ್ಟುಕೊಂಡಿದ್ದಾರೆ. ಯಾರು ಧೈರ್ಯ ಕಳೆದುಕೊಳ್ಳಬೇಡಿ ಎಂದು ನಿಖಿಲ್ ಮನವಿ ಮಾಡಿದರು.

ಈ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ. ಜಯಮುತ್ತು, ಮುಖಂಡರಾದ ಕುಕ್ಕೂರದೊಡ್ಡಿ ಜಯರಾಮ್ ಉಪಸ್ಥಿತರಿದ್ದರು. 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ