ಭ್ರಷ್ಟ ಅಧಿಕಾರಿಗಳನ್ನು ನೇಣು ಹಾಕುವೆ: ಉಪ ಲೋಕಾಯುಕ್ತ ಬಿ.ವೀರಪ್ಪ

KannadaprabhaNewsNetwork |  
Published : May 29, 2025, 12:40 AM IST
೨೮ಕೆಎಂಎನ್‌ಡಿ-೧ಮಂಡ್ಯದ ಅಂಬೇಡ್ಕರ್ ಭವನದಲ್ಲಿ ನಡೆದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಸಮಾರಂಭ ಉದ್ಘಾಟಿಸಿ ಉಪ ಲೋಕಾಯುಕ್ತ ಬಿ.ವೀರಪ್ಪ ಮಾತನಾಡಿದರು. | Kannada Prabha

ಸಾರಾಂಶ

ಸ್ವಾತಂತ್ರ ಪೂರ್ವದಲ್ಲಿ ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಉತ್ತಮವಾಗಿರಲಿಲ್ಲ. ಆದರೆ, ಇಂದು ದೇಶದಲ್ಲಿ ಶೇಕಡಾ ನೂರಕ್ಕೆ ೮೦ ರಷ್ಟು ಜನ ವಿದ್ಯಾವಂತರಿದ್ದಾರೆ. ಆದರೆ ಅವರಲ್ಲಿ ಎಷ್ಟು ಜನರಿಗೆ ಸಂವಿಧಾನ ತಿಳಿದಿದೆ ಎಂಬ ಪ್ರಶ್ನೆ ಉದ್ಭವಿಸಿದಾಗ ದೊರೆಯುವ ಉತ್ತರ ಕಡಿಮೆ. ದೇಶದ ಪ್ರಜೆಗಳಾದ ನಾವು ಸಂವಿಧಾನವನ್ನು ಅರಿತುಕೊಳ್ಳಬೇಕಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಾಮಾಣಿಕವಾಗಿ ಸಾರ್ವಜನಿಕರ ಕೆಲಸ ಮಾಡುವವರ ಕಾಲು ಮುಟ್ಟಿ ನಮಸ್ಕರಿಸುವೆ. ಅದೇ ರೀತಿ ಭ್ರಷ್ಟಾಚಾರ ನಡೆಸಿ ಜನರಿಗೆ ತೊಂದರೆ ನೀಡಿದವರನ್ನು ನೇಣು ಹಾಕುತ್ತೇನೆ ಎಂದು ಉಪ ಲೋಕಾಯುಕ್ತ ಬಿ.ವೀರಪ್ಪ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಬುಧವಾರ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಭ್ರಷ್ಟಾಚಾರ ನಡೆಸಿ ಕೋಟ್ಯಂತರ ರು. ಆಸ್ತಿ ಸಂಪಾದಿಸಿರುವವರು ನೆಮ್ಮದಿಯಾಗಿಲ್ಲ. ಯಾರು ಪ್ರಾಮಾಣಿಕವಾಗಿ ಭ್ರಷ್ಟಾಚಾರ ರಹಿತ ಕರ್ತವ್ಯ ಮಾಡುತ್ತಿದ್ದಾರೋ ಅಂತಹವರು ಮಾತ್ರ ನೆಮ್ಮದಿಯಾಗಿದ್ದಾರೆ ಎಂದು ಹೇಳಿದರು.

ಭ್ರಷ್ಟಾಚಾರದಿಂದ ಕೋಟ್ಯಂತರ ರು. ಆಸ್ತಿ ಸಂಪಾದಿಸಿದವರು ತಮ್ಮ ಅಂತಿಮ ಕಾಲದಲ್ಲಿ ಮಕ್ಕಳು ಒಬ್ಬರಿಗೊಬ್ಬರು ಕಿತ್ತಾಡಿಕೊಳ್ಳುತ್ತಿರುವುದನ್ನು ನೋಡಿದ್ದೇವೆ. ಪರಿಸ್ಥಿತಿ ಹೀಗಿರುವಾಗ ಭ್ರಷ್ಟಾಚಾರದಿಂದ ಹಣ ಸಂಪಾದನೆ ಮಾಡುವುದಾದರೂ ಏಕೆ ಎಂದು ಪ್ರಶ್ನಿಸಿದರು.

ಕ್ಯಾನ್ಸರ್‌ಗಿಂತಲೂ ದೊಡ್ಡ ಕಾಯಿಲೆ:

ಭ್ರಷ್ಟಾಚಾರ ಕ್ಯಾನ್ಸರ್‌ಗಿಂತಲೂ ಮಹಾಮಾರಿ ಕಾಯಿಲೆಯಿದ್ದ ಹಾಗೆ. ಒಂದು ವೇಳೆ ಕ್ಯಾನ್ಸರ್ ಕಾಯಿಲೆ ಹೊಂದಿರುವವರನ್ನು ಗುಣಪಡಿಸಬಹುದು. ಭ್ರಷ್ಟಾಚಾರ ಎಂಬ ಕಾಯಿಲೆ ಹೊಂದಿರುವವರನ್ನು ಗುಣಪಡಿಸಲಾಗುವುದಿಲ್ಲ. ಅಧಿಕಾರಿಗಳು ಭ್ರಷ್ಟಾಚಾರ ಎಂಬ ಕಾಯಿಲೆಯಿಂದ ದೂರವಿರಿ. ಇಲ್ಲವಾದರೆ ಭಯದಲ್ಲಿ ಬದುಕುವ ಪರಿಸ್ಥಿತಿ ಬರಬಹುದು ಎಂದು ಕಿವಿಮಾತು ಹೇಳಿದರು.

ಭ್ರಷ್ಟಾಚಾರದ ಹಾದಿಯಲ್ಲಿ ಸಾಗಿದರೆ ದೇಶದ ಅಭಿವೃದ್ಧಿಗೆ ಕಂಟಕ ನಿಶ್ಚಿತ. ಸ್ವಾತಂತ್ರಕ್ಕಾಗಿ ಶ್ರಮಿಸಿದ ಮಹಾತ್ಮಾಗಾಂಧಿ, ಸುಭಾಷ್‌ ಚಂದ್ರಬೋಸ್, ಡಾ.ಬಿ.ಆರ್.ಅಂಬೇಡ್ಕರ್ ಇತರರು ಇಂದು ಈ ದೇಶದ ಸ್ಥಿತಿಯನ್ನು ಕಂಡಿದ್ದರೆ ಅವರೇ ನೇಣು ಹಾಕಿಕೊಂಡು ಸಾಯುತ್ತಿದ್ದರು. ಅಂತ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ವಿಷಾದಿಸಿದರು.

ನಿರ್ಭಯವಾಗಿ ದೂರು ಸಲ್ಲಿಸಿ:

ರಾಜ್ಯದ ಪ್ರತಿಯೊಬ್ಬ ಪ್ರಜೆಯೂ ಅನ್ಯಾಯ, ಭ್ರಷ್ಟಾಚಾರ ಹಾಗೂ ದುರಾಡಳಿತದ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡುವ ಅಧಿಕಾರವನ್ನು ಹೊಂದಿದ್ದಾರೆ. ಯಾರಿಗೂ ಹೆದರದೆ ಧೈರ್ಯವಾಗಿ ನಿಮ್ಮ ದೂರುಗಳನ್ನು ಯಾವ ಸಮಯದಲ್ಲಾದರೂ, ಯಾವ ಸಂದರ್ಭದಲ್ಲಾದರೂ ಲೋಕಾಯುಕ್ತ ಕಚೇರಿಗೆ ನೀಡುವಂತೆ ಸಾರ್ವಜನಿಕರಿಗೆ ತಿಳಿಸಿದರು.

ಅಧಿಕಾರಿಗಳು ಕರ್ತವ್ಯ ನಿಭಾಯಿಸದೆಯಿದ್ದಲ್ಲಿ ಅನರ್ಹ ಎಂದು ಅಮಾನತು ಮಾಡಬಹುದು. ಅಧಿಕಾರಿಗಳ ವಿರುದ್ಧ ದೂರು ಬಂದಲ್ಲಿ ನೋಟಿಸ್ ಕಳುಹಿಸಲಾಗುವುದು ಹಾಗೂ ಉತ್ತರ ನೀಡಲು ಒಂದು ತಿಂಗಳಿನ ಗಡುವು ನೀಡಲಾಗುತ್ತದೆ. ನಂತರವೂ ಉತ್ತರ ನೀಡದಿದ್ದಲ್ಲಿ ಕರ್ತವ್ಯಲೋಪ ಎಂದು ೬ ತಿಂಗಳು ಜೈಲು ಶಿಕ್ಷೆಯನ್ನು ಸಹ ವಿಧಿಸಲಾಗುವುದು ಎಂದು ಲೋಕಾಯುಕ್ತದ ಅಧಿಕಾರ ವ್ಯಾಪ್ತಿಯನ್ನು ವಿವರಿಸಿದರು.

ಅಧಿಕಾರಿಗಳ ವಿರುದ್ಧ ಸುಳ್ಳು ದೂರು ಬಂದಲ್ಲಿ ಸುಳ್ಳು ದೂರು ನೀಡಿದ್ದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಸುಳ್ಳು ದೂರು ನೀಡಿದವರನ್ನು ಧೈರ್ಯವಾಗಿ ಎದುರಿಸಲು ಆತ್ಮಸಾಕ್ಷಿಯಿಂದ ಅಧಿಕಾರಿಗಳು ಕೆಲಸ ನಿರ್ವಹಿಸಿ ಎಂದು ಕಿವಿಮಾತು ಹೇಳಿದರು.

ದೇಶಕ್ಕಾಗಿ ಯೋಧರು ಪ್ರಾಣ ಕೊಡುತ್ತಾರೆ:

ದೇಶದಲ್ಲಿ ಯೋಧರು ಒಂದು ಕ್ಷಣವೂ ಚಿಂತಿಸದೆ ದೇಶಕ್ಕಾಗಿ ಪ್ರಾಣವನ್ನೇ ತೊರೆದು ಬಿಡುತ್ತಾರೆ. ನಾವು ಅವರಂತೆ ಜೀವಿಸಲು ಅಸಾಧ್ಯವಾದರೂ ಕನಿಷ್ಠ ಪಕ್ಷ ಭ್ರಷ್ಟಾಚಾರವನ್ನಾದರೂ ವಿರೋಧಿಸಿ ರಾಜ್ಯವನ್ನು ಭ್ರಷ್ಟಾಚಾರ ಮುಕ್ತ ಮಾಡೋಣ ಎಂದು ಸಲಹೆ ನೀಡಿದರು.

ಸಂವಿಧಾನದ ಹಕ್ಕುಗಳನ್ನು ಪಡೆಯುವುದರ ಜೊತೆಗೆ ಕರ್ತವ್ಯವನ್ನು ಸಹ ಪಾಲಿಸಬೇಕು. ಹಕ್ಕುಗಳು ದೊರೆಯದಿದ್ದಲ್ಲಿ ಹೇಗೆ ಪ್ರಶ್ನಿಸುತ್ತೀರಿ. ಹಾಗೆಯೇ ನಿಮ್ಮ ಕರ್ತವ್ಯಗಳನ್ನು ನಿಭಾಯಿಸಬೇಕು ಎಂದು ಹೇಳಿದರು.

ಇಂಗುಗುಂಡಿ ಮಾಡಿಕೊಳ್ಳಿ:

ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಸರಿಯಾಗಿ ವಿದ್ಯುತ್ ದೀಪಗಳನ್ನು ಅಳವಡಿಸುತ್ತಿಲ್ಲ ಎಂಬುದೇ ವಿಪರ್ಯಾಸ, ಪ್ರತಿಯೊಬ್ಬ ಪಂಚಾಯಿತಿ ಅಧಿಕಾರಿಗಳು ವಿದ್ಯುತ್ ದೀಪ, ಒಳ ಚರಂಡಿ ಹಾಗೂ ಕಸ ವಿಲೇವಾರಿ ಮಾಡಿಸುವ ವ್ಯವಸ್ಥೆಗಳನ್ನು ಉತ್ತಮಗೊಳಿಸಬೇಕು ಹಾಗೂ ಪ್ರತಿ ಪಂಚಾಯಿತಿಗಳಲ್ಲಿ ಪ್ರತ್ಯೇಕ ಇಂಗುಗುಂಡಿಗಳನ್ನು ನಿರ್ಮಾಣ ಮಾಡಬೇಕು. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒಗೆ ಸೂಚನೆ ನೀಡಿದ್ದೇನೆ. ಒಂದೆರಡು ದಿನಗಳಲ್ಲಿ ಅವರು ಎಲ್ಲ ಪಿಡಿಒಗಳಿಗೆ ನೋಟಿಸ್ ನೀಡಲಿದ್ದಾರೆ ಎಂದು ತಿಳಿಸಿದರು.

ಲೋಕಾಯುಕ್ತದ ಅಪರ ನಿಬಂಧಕ ಶ್ರೀನಿವಾಸ್, ಅರವಿಂದ, ಮಿಲನ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ, ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸುರೇಶ್ ಬಾಬು, ಹಾಗೂ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ ಪಾಲ್ಗೊಂಡಿದ್ದರು.

ಮಂಡ್ಯ ಮಾದರಿ ಜಿಲ್ಲೆ ಆಗಬೇಕು:

ಜಿಲ್ಲೆಯಲ್ಲಿ ೨ ದಿನಗಳಿಂದ ಅನೇಕ ತಾಲೂಕು, ಗ್ರಾಮ ಹಾಗೂ ಜಿಲ್ಲಾ ಪಂಚಾಯಿತಿ, ವಿವಿಧ ಸ್ಥಳಗಳನ್ನು ಭೇಟಿ ನೀಡಿ ಪರಿಶೀಲಿಸಲಾಯಿತು. ಅದರಲ್ಲಿ ವೆಲ್ಲೆಸ್ಲಿ ಬ್ರಿಡ್ಜ್ ಬಳಿ ಚರಂಡಿ ನೀರು ಕಾವೇರಿ ನದಿಯ ಒಡಲು ಸೇರುತ್ತಿದೆ. ಮಂಡ್ಯದವರು ಆ ನೀರನ್ನೇ ಕುಡಿಯಬೇಕು. ನಂತರ ನಾವು ಬೆಂಗಳೂರಿಗರೂ ಸಹ ಅದೇ ನೀರನ್ನು ಕುಡಿಯಬೇಕು. ಕಲುಷಿತ ನೀರು ನದಿಗೆ ಸೇರದಂತೆ ತಡೆಗೋಡೆ ನಿರ್ಮಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೆ. ಈಗ ಆ ಕಾಮಗಾರಿ ಪ್ರಾರಂಭವಾಗಿದೆ. ಸಮಸ್ಯೆ ಬಂದ ಕೂಡಲೇ ಜಿಲ್ಲಾಡಳಿತ ಸರಿಪಡಿಸಿರುವ ಕೆಲಸ ಶ್ಲಾಘನೀಯ ಎಂದರು.

ಸಂವಿಧಾನೋ ರಕ್ಷತಿ ರಕ್ಷಿತಃ:

ಸ್ವಾತಂತ್ರ ಪೂರ್ವದಲ್ಲಿ ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಉತ್ತಮವಾಗಿರಲಿಲ್ಲ. ಆದರೆ, ಇಂದು ದೇಶದಲ್ಲಿ ಶೇಕಡಾ ನೂರಕ್ಕೆ ೮೦ ರಷ್ಟು ಜನ ವಿದ್ಯಾವಂತರಿದ್ದಾರೆ. ಆದರೆ ಅವರಲ್ಲಿ ಎಷ್ಟು ಜನರಿಗೆ ಸಂವಿಧಾನ ತಿಳಿದಿದೆ ಎಂಬ ಪ್ರಶ್ನೆ ಉದ್ಭವಿಸಿದಾಗ ದೊರೆಯುವ ಉತ್ತರ ಕಡಿಮೆ. ದೇಶದ ಪ್ರಜೆಗಳಾದ ನಾವು ಸಂವಿಧಾನವನ್ನು ಅರಿತುಕೊಳ್ಳಬೇಕಾಗಿದೆ. ನಾವು ಸಂವಿಧಾನವನ್ನು ರಕ್ಷಿಸಿದರೆ ಸಂವಿಧಾನವು ನಮ್ಮನ್ನು ರಕ್ಷಿಸುತ್ತದೆ. ಸಂವಿಧಾನೋ ರಕ್ಷತಿ ರಕ್ಷಿತಃ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ