ಕಸಾಪ ಪರಂಪರೆ ಪುನರುಜ್ಜಿವನಗೊಳಿಸಿ ಕಾಯಕಲ್ಪ ನೀಡುವೆ

KannadaprabhaNewsNetwork |  
Published : Sep 07, 2026, 01:15 AM IST
6ಕೆಆರ್ ಎಂಎನ್ 1.ಜೆಪಿಜಿಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು | Kannada Prabha

ಸಾರಾಂಶ

ರಾಮನಗರ: ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಸ್ವತಂತ್ರ ಸಾಂಸ್ಕೃತಿಕ ಸಂಸ್ಥೆ. ಅದರ ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಕನ್ನಡಪರ ಕಾಳಜಿ ಮುಖ್ಯವಾಗಬೇಕು. ಆದ್ದರಿಂದ ನಿವೃತ್ತ ಅಧಿಕಾರಿಗಳಿಗೆ ಪರಿಷತ್ತು ಆಶ್ರಯ ತಾಣವಾಗಲು ಅವಕಾಶ ನೀಡಬಾರದು ಎಂದು ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಕಸಾಪ ಮತದಾರರಲ್ಲಿ ಮನವಿ ಮಾಡಿದರು

ರಾಮನಗರ: ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಸ್ವತಂತ್ರ ಸಾಂಸ್ಕೃತಿಕ ಸಂಸ್ಥೆ. ಅದರ ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಕನ್ನಡಪರ ಕಾಳಜಿ ಮುಖ್ಯವಾಗಬೇಕು. ಆದ್ದರಿಂದ ನಿವೃತ್ತ ಅಧಿಕಾರಿಗಳಿಗೆ ಪರಿಷತ್ತು ಆಶ್ರಯ ತಾಣವಾಗಲು ಅವಕಾಶ ನೀಡಬಾರದು ಎಂದು ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಕಸಾಪ ಮತದಾರರಲ್ಲಿ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಯಾರೂ ಸಹ ಕಸಾಪವನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡಿರಲಿಲ್ಲ. ಆದರೆ, ಕಳೆದ 10 ವರ್ಷಗಳಲ್ಲಿ ನಿವೃತ್ತ ಅಧಿಕಾರಿಗಳನ್ನು ಕಸಾಪಗೆ ನೇಮಕ ಮಾಡಿದ ಹಿನ್ನಲೆಯಲ್ಲಿ ಅವರು ಕಸಾಪವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ಸರ್ವಾಧಿಕಾರ ನಡೆಸಿ ದುಸ್ಥಿತಿಗೆ ದೂಡಿದರು. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕಸಾಪವನ್ನು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿ 112 ವರ್ಷಗಳು ಸಂದಿದೆ. ಇಂತಹ ಸಂಸ್ಥೆಯ ಘನತೆ ಗೌರವಗಳಿಗೆ ಕಳೆದೆರಡು ಅವಧಿಗಳಲ್ಲಿನ ದುರಾಡಳಿತ ಮತ್ತು ಭ್ರಷ್ಟಾಚಾರದಿಂದ ಕುಂದುಂಟಾಗಿದೆ. ಕನ್ನಡಿಗರ ಸಮಸ್ಯೆಗಳಿಗೆ ಪರಿಷತ್ತು ಧ್ವನಿಯಾಗಲೇ ಇಲ್ಲ ಎಂದು ಹೇಳಿದರು.

ಕಸಾಪ ಮೂಲ ಚಿಂತನೆಗಳನ್ನು ಕೈಬಿಟ್ಟು ಅಧಿಕಾರದ ಗದ್ದುಗೆ ಮಾಡಿಕೊಂಡವರ ಮನಸ್ಥಿತಿಗಳಿಂದ ಕಸಾಪ ಅಧಃಪತನ ಆರಂಭಗೊಂಡಿತ್ತು. ಕಸಾಪ ಕಚೇರಿ ಮುಂಭಾಗದಲ್ಲಿದ್ದ "ಮನುಷ್ಯ ಜಾತಿ ತಾನೊಂದೆ ವಲಂ " ಫಲಕ ತೆರವುಗೊಳಿಸುವ ಜೊತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯನ್ನು ಸ್ಥಳಾಂತರ ಮಾಡಿ ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡಿದರು ಎಂದು ಮಹೇಶ್ ಜೋಶಿ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದರು.

ಸರ್ವಾಧಿಕಾರಿ ವ್ಯವಸ್ಥೆಯಿಂದ ಕಸಾಪವನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ನಾಡಿನ ಸಾಹಿತಿಗಳು ಸೇರಿದಂತೆ ಸಮಾನ ಮನಸ್ಕರನ್ನು ಒಳಗೊಂಡಂತೆ ನಡೆಸಿದ "ಕಸಾಪ ಉಳಿಸಿ ಹೋರಾಟ " ಯಶಸ್ವಿಯಾಯಿತು. ದುರಾಡಳಿತ ನಡೆಸಿದವರು ಪರಿಷತ್ತಿನಿಂದ ದೂರ ಹೋಗಿದ್ದಾರೆ. ಇದೀಗ ಕಸಾಪವನ್ನು ಮರಳಿ ಕಟ್ಟಬೇಕಾಗಿದೆ ಎಂದು ತಿಳಿಸಿದರು.

ವಸೂಲಿ ಮತ್ತು ಶಿಕ್ಷೆಯಾಗಲಿ:

ಕಸಾಪದಲ್ಲಿ 7-8 ಕೋಟಿ ರುಪಾಯಿಗಳಷ್ಟು ಸರ್ಕಾರದ ಅನುದಾನ ದುರ್ಬಳಕೆಯಾಗಿದೆ. ಈಗಾಗಲೇ ಮಹೇಶ್ ಜೋಷಿ ಮೇಲೆ 17 ಗುರುತರ ಆರೋಪಗಳಿದ್ದು, ಅವೆಲ್ಲವೂ ಸಾಬೀತಾಗಿದೆ. ದುರ್ಬಳಸಿರುವ ಹಣವನ್ನು ಸರ್ಕಾರ ವಸೂಲಿ ಮಾಡಬೇಕು ಮತ್ತು ಅಗತ್ಯ ಶಿಕ್ಷೆಯೂ ಅವರಿಗೆ ಆಗಬೇಕೆಂದು ಆಗ್ರಹಿಸಿದ ಅವರು, ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಸಂಭವವಿದೆ. ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಆಯ್ಕೆಯಾದರೆ ಪರಿಷತ್ತಿನ ಘನತೆಯನ್ನು ಮರು ಸ್ಥಾಪಿಸಿ, ಆ ಪರಂಪರೆಯನ್ನು ಪುನರುಜ್ಜಿವನಗೊಳಿಸುವ ಜೊತೆಗೆ ಕಾಯಕಲ್ಪ ನೀಡುತ್ತೇನೆ ಎಂದರು.

ಕಸಾಪ ಪ್ರಸ್ತುತ 4.50 ಲಕ್ಷ ಸದಸ್ಯತ್ವ ಹೊಂದಿದೆ. ರಾಜ್ಯದ ಕನ್ನಡಿಗರ ಸಂಖ್ಯೆಗೆ ಹೋಲಿಸಿದಲ್ಲಿ ಸದಸ್ಯತ್ವ ಅತ್ಯಂತ ಸಣ್ಣ ಪ್ರಮಾಣದ್ದು. ನಾಡಿನ ಕನ್ನಡಿಗರ ಪ್ರತಿ ಕುಟುಂಬದಿಂದ ಸದಸ್ಯತ್ವ ಪಡೆದುಕೊಳ್ಳಬೇಕು ಮತ್ತು ಆ ಮೂಲಕ ಕಸಾಪ ಕನ್ನಡಿಗರ ಸಂಸ್ಥೆಯಾಗಿ ರೂಪ ತಾಳಬೇಕೆನ್ನುವ ಆಶಯ ತಮ್ಮದೆಂದು ಜಾಣಗೆರೆ ವೆಂಕಟರಾಮಯ್ಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಸು.ತಾ.ರಾಮೇಗೌಡ, ನಂಜೇಗೌಡ, ನಾಗಭೂಷಣ್, ಚಿಕ್ಕಪುಟ್ಟೇಗೌಡ ಇತರರಿದ್ದರು.ಬಾಕ್ಸ್‌..............

ಕಸಾಪ ಅಧ್ಯಕ್ಷ ಸ್ಥಾನಕ್ಕೆ ಜಾಣಗೆರೆ ವೆಂಕಟರಾಮಯ್ಯ ಸೂಕ್ತ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

ರಾಮನಗರ: ಕಸಾಪ ಸ್ವಾಯತ್ತ ಸಂಸ್ಥೆಯಾಗಿ ಉಳಿಯಬೇಕಾದರೆ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಜಾಣಗೆರೆ ವೆಂಕಟರಾಮಯ್ಯ ಸೂಕ್ತ ವ್ಯಕ್ತಿಯಾಗಿದ್ದಾರೆ. ಅವರಿಗೆ ಅಧ್ಯಕ್ಷ ಸ್ಥಾನ ಸೇವೆಗಾಗಿ ಬೇಕಿದೆಯೇ ಹೊರತು ಅಧಿಕಾರಕ್ಕಾಗಿ ಅಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿಕಟಪೂರ್ವ ಅಧ್ಯಕ್ಷ ಹಾಗೂ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಅಧ್ಯಕ್ಷ ಮಹೇಶ್ ಜೋಶಿ ಅವರಂತೆ ಸರ್ವಾಧಿಕಾರಿ ವ್ಯಕ್ತಿಗಳು ಮತ್ತೆ ಕಸಾಪಗೆ ಕಾಲಿಡಬಾರದೆನ್ನುವ ಕಾರಣಕ್ಕಾಗಿ ಜಾಣಗೆರೆ ವೆಂಕಟರಾಮಯ್ಯ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಕೂರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಅವರ ಬದುಕು ತೆರೆದ ಪುಸ್ತಕ. ನೈತಿಕ ಶಕ್ತಿಗೆ ಗೆಲುವು ತಂದುಕೊಂಡಿ ಎಂದು ಮನವಿ ಮಾಡಿದರು.

ಸಾಹಿತ್ಯ ಪರಿಷತ್ತು ಕೇವಲ ಸಾಹಿತಿಗಳಿಗೆ ಮಾತ್ರವಲ್ಲ ಸಮಸ್ತ ಕನ್ನಡಿಗರಿಗೆ ಸಂಬಂಧಿಸಿದ್ದು. ಪರಿಷತ್ತಿನ ಒಳಗೆ ಆಡಳಿತ ಶಾಹಿಗಳು ಬಂದು ದಿಕ್ಕು ತಪ್ಪಿಸುವುದನ್ನು ನಿಲ್ಲಿಸಬೇಕು. ಸೇವಾ ಮನೋಭಾವ ಇದ್ದವರು ಮಾತ್ರವೇ ಪರಿಷತ್ತಿಗೆ ಬರಬೇಕು‌. ಮಹೇಶ್‍ ಜೋಶಿ ಅಧಿಕಾರವಧಿಯಲ್ಲಿ ಅಧಿಕಾರಿಗಳು ಪರಿಷತ್‍ಗೆ ಬಂದು ವಿಶ್ರಾಂತಿ ಪಡೆಯುವಂತಾಗಿತ್ತು. ಇದರಿಂದ ಮೂಲ ಆಶಯಕ್ಕೆ ಭಂಗವಾಯಿತು. ಮೂರು ವರ್ಷವಿದ್ದ ಅಧಿಕಾರಾವಧಿಯನ್ನು ಆರು ವರ್ಷಕ್ಕೆ ಹೆಚ್ಚಿಸಿಕೊಂಡರು. ಬೈಲಾ ತಿದ್ದುಪಡಿ ಮಾಡಿ ಕಸಾಪವನ್ನು ದುರ್ಬಲಗೊಳಿಸಿದರು. ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಸ್ಥಾಪಿಸಿದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ವೇದಿಕೆಯನ್ನು ಅರಮನೆಯ ತಮಟೆಯನ್ನಾಗಿ ಮಾಡಿಕೊಂಡು ಅಧಿಕಾರ ದುರುಪಯೋಗಪಡಿಸಿಕೊಂಡ ಪರಿಣಾಮ ಈಗ ಅಮಾನತುಗೊಂಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

6ಕೆಆರ್ ಎಂಎನ್ 1.ಜೆಪಿಜಿ

ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರು ಪೂರೈಸಲು ಒತ್ತಾಯಿಸಿ ರಸ್ತೆ ತಡೆ ಚಳುವಳಿ
ಹೋರಾಟದ ಹಾದಿ ಹಿಡಿದಾದರು ಬರ ಪರಿಹಾರ ಪಡೆಯುತ್ತೇವೆ: ಸಚಿವ ಯತೀಂದ್ರ ಸಿದ್ದರಾಮಯ್ಯ