ಭದ್ರಾವತಿ: ಕ್ಷೇತ್ರದ ಮತದಾರರಿಗೆ ನೀಡಿರುವ ಭರವಸೆಯಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದ್ದು, ಇವುಗಳ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಮುಂದಿನ ಅಭಿವೃದ್ಧಿ ಕಾರ್ಯಗಳಿಗೂ ಇದೇ ರೀತಿಯ ಸಹಕಾರ ನೀಡಬೇಕೆಂದು ಶಾಸಕ ಬಿ.ಕೆ.ಸಂಗಮೇಶ್ವರ್ ಮನವಿ ಮಾಡಿದರು.
ಕ್ಷೇತ್ರದ ಮತದಾರರಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ. ಅಭಿವೃದ್ಧಿ ಕಾರ್ಯಗಳಿಗಾಗಿ ಹೆಚ್ಚಿನ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ಲಭ್ಯವಾಗಲಿದ್ದು, ನೀಡಿರುವ ಭರವಸೆಯಂತೆ ಬಹುತೇಕ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಮತದಾರರ ಋಣ ತೀರಿಸುವುದು ನಮ್ಮ ಜವಾಬ್ದಾರಿಯಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಶಕ್ತಿ ಮೀರಿ ಶ್ರಮಿಸುವುದಾಗಿ ಭರವಸೆ ನೀಡಿದರು.
ನಗರಸಭೆ ಹಿರಿಯ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ಶಾಸಕರು ಕ್ಷೇತ್ರದ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರು. ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ. ಮೂಲ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಅಭಿವೃದ್ಧಿ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳಿಂದ ಜನರು ನೆಮ್ಮದಿ ಜೀವನ ನಡೆಸುವಂತಾಗಬೇಕೆಂಬುದು ಶಾಸಕರ ಆಶಯವಾಗಿದೆ. ಮುಂದಿನ ದಿನಗಳಲ್ಲಿ ಸುಮಾರು ೬೦೦ ರಿಂದ ೭೦೦ ಕೋಟಿ ರು. ಗಳಷ್ಟು ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ಕ್ಷೇತ್ರಕ್ಕೆ ಆಹ್ವಾನಿಸಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.ಇದೇ ವೇಳೆನಗರಸಭೆ ೨೦೨೫-೨೬ನೇ ಸಾಲಿನ ೧೫ನೇ ಹಣಕಾಸು ಮತ್ತು ಎಸ್‌ಎಫ್‌ಸಿ ಅನುದಾನದ ಸುಮಾರು ೨೦ ಲಕ್ಷ ರು. ವೆಚ್ಚದಲ್ಲಿ ವಾರ್ಡ್ ನಂ.೯ರ ಸೀಗೆಬಾಗಿ ಬಾಲಕರ ವಿದ್ಯಾರ್ಥಿ ನಿಲಯ ಪಕ್ಕದಲ್ಲಿ ಗಣಪತಿ ದೇವಸ್ಥಾನದ ರಸ್ತೆ ಡಾಂಬರೀಕರಣಕ್ಕೆ, ಅಮೃತ್-೨ ಯೋಜನೆಯಡಿ ವಾರ್ಡ್ ನಂ.೨೩ರ ಉಜ್ಜನಿಪುರ ಬೈಪಾಸ್ ರಸ್ತೆ, ಶಂಕ್ರಪ್ಪ ಕಟ್ಟೆ ಪಕ್ಕದಲ್ಲಿ ಉದ್ಯಾನವನದಲ್ಲಿ ಸುಮಾರು ೪೦ ಲಕ್ಷ ರು. ವೆಚ್ಚದಲ್ಲಿ ಮಕ್ಕಳ ಆಟಿಕೆ, ವ್ಯಾಯಾಮ ಉಪಕರಣಗಳು ಮತ್ತು ವಾಯು ವಿಹಾರ ಪಥ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ೧೫ನೇ ಹಣಕಾಸು ಯೋಜನೆಯಡಿ ೩.೪೮ ಕೋಟಿ ರು. ವೆಚ್ಚದಲ್ಲಿ ವಾರ್ಡ್ ನಂ. ೧೯ರ ಬೈಪಾಸ್ ರಸ್ತೆ, ನೀರು ಶುದ್ಧೀಕರಣ ಘಟಕದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಜಾಕ್ವೆಲ್ ಮತ್ತು ಇಂಟೆಕ್ ವೆಲ್ ಹಾಗೂ ವಾರ್ಡ್ ನಂ.೭ರ ಹೊಳೆಹೊನ್ನೂರು ರಸ್ತೆ, ಹಿಂದೂ ರುದ್ರಭೂಮಿಯಲ್ಲಿ ಸುಮಾರು ೧.೨೦ ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಗ್ಯಾಸ್ ಬರ್ನಿಂಗ್ ಚಿತಾಗಾರ ಉದ್ಘಾಟಿಸಲಾಯಿತು. ನಗರಸಭೆ ಅಧ್ಯಕ್ಷೆ ಜೆ.ಸಿ.ಗೀತಾ ರಾಜಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಪೌರಾಯುಕ್ತ ಕೆ.ಎನ್.ಹೇಮಂತ್, ಸದಸ್ಯರಾದ ಚನ್ನಪ್ಪ, ಬಿ.ಎಂ.ಮಂಜುನಾಥ್, ವಿಜಯ, ಕೆ.ಪಿ.ಪ್ರೇಮಾ, ಬಸವರಾಜ ಬಿ.ಆನೇಕೊಪ್ಪ, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಬಿ.ಬಿ.ಶಿವಪ್ರಸಾದ್, ಕಿರಿಯ ಅಭಿಯಂತರ ಕೆ.ಪ್ರಸಾದ್, ಪರಿಸರ ಅಭಿಯಂತರ ಪ್ರಭಾಕರ್, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಚ್.ರವಿಕುಮಾರ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ನಗರಸಭೆ ಮಾಜಿ ಸದಸ್ಯ ಬದರಿನಾರಾಯಣ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ತಿಮ್ಮಪ್ಪ, ಜಿ.ರಾಜು, ರಾಜಕುಮಾರ್ ಇತರರಿದ್ದರು.