ಮಾನವ ಧರ್ಮ ಉಳಿದರೆ ಎಲ್ಲ ಧರ್ಮಗಳಿಗೆ ಹೆಚ್ಚಿನ ಬಲ

KannadaprabhaNewsNetwork | Published : Mar 29, 2025 12:35 AM

ಸಾರಾಂಶ

ಇವತ್ತು ಎಲ್ಲ ಧರ್ಮಗಳ ಮೇಲೆ ಮಾನವ ಧರ್ಮ ಇದ್ದರೆ ಎಲ್ಲರೂ ಸೌಹಾರ್ದತೆಯಿಂದ ಬಾಳಲು ಸಾಧ್ಯ. ಮಾನವ ಧರ್ಮ ಉಳಿಯಬೇಕು, ಬೆಳೆಯಬೇಕು. ಮಾನವ ಧರ್ಮ ಉಳಿದರೆ ಎಲ್ಲ ಧರ್ಮಗಳಿಗೆ ಹೆಚ್ಚಿನ ಬಲ, ಶಕ್ತಿ ಬರಲು ಸಾಧ್ಯವಾಗುತ್ತದೆ ಎಂದು ಶ್ರೀಮದ್ ವೀರಸಿಂಹಾಸನಾಧೀಶ್ವರ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಮುಂಡರಗಿ: ಇವತ್ತು ಎಲ್ಲ ಧರ್ಮಗಳ ಮೇಲೆ ಮಾನವ ಧರ್ಮ ಇದ್ದರೆ ಎಲ್ಲರೂ ಸೌಹಾರ್ದತೆಯಿಂದ ಬಾಳಲು ಸಾಧ್ಯ. ಮಾನವ ಧರ್ಮ ಉಳಿಯಬೇಕು, ಬೆಳೆಯಬೇಕು. ಮಾನವ ಧರ್ಮ ಉಳಿದರೆ ಎಲ್ಲ ಧರ್ಮಗಳಿಗೆ ಹೆಚ್ಚಿನ ಬಲ, ಶಕ್ತಿ ಬರಲು ಸಾಧ್ಯವಾಗುತ್ತದೆ ಎಂದು ಶ್ರೀಮದ್ ವೀರಸಿಂಹಾಸನಾಧೀಶ್ವರ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಅವರು ಗುರುವಾರ ಸಂಜೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವದ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು.

ಅವರವರ ಧರ್ಮಕ್ಕೆ, ಅವರವರ ಜಾತಿಗೆ ಒಳ್ಳೆಯದಾಗಲಿ ಎಂದು ಹೇಳುವವರೇ ಹೆಚ್ಚಾಗಿರುವ ಸಂದರ್ಭದಲ್ಲಿ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವ ವಿಶ್ವಬಂಧುತ್ವದ ಸಂದೇಶವನ್ನು ಕರುಣಿಸಿದವರು ರಂಭಾಪುರಿ ವೀರಗಂಗಾಧರನಾಥ ಸ್ವಾಮೀಜಿಯವರು ಎನ್ನುವುದನ್ನು ಎಲ್ಲರೂ ನೆನಪಿಸಿಕೊಳ್ಳುತ್ತಾರೆ ಎಂದರು. ಈ ನಾಡು ಸರ್ವ ಜನಾಂಗದ ಶಾಂತಿಯ ತೋಟ. ಈ ರಾಷ್ಟ್ರದಲ್ಲಿ ಕೇವಲ ಒಂದು ಸಮುದಾಯದ ಜನ ಇಲ್ಲ. ಒಂದು ಧರ್ಮ ಪರಂಪರೆಯ ಜನ ಇಲ್ಲ. ಈ ನಾಡಿನಲ್ಲಿ ಹಲವು ಧರ್ಮಗಳಿವೆ. ಧರ್ಮ, ಧರ್ಮದ ಆಚರಣೆಗಳು ಬೇರೆಯಾಗಿದ್ದರೂ ಎಲ್ಲ ಧರ್ಮಗಳ ಗುರಿ ಮಾನವರ ಉದ್ಧಾರವೇ ಆಗಿದೆ ಎಂದರು.

ಕಲಕೇರಿಯಲ್ಲಿ ಜರುಗಿದ ಈ ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ ಎಲ್ಲ ವರ್ಗದ ಭಕ್ತ ಸಮೂಹ ಪಾಲ್ಗೊಂಡಿದ್ದರು. ವಿಶೇಷವಾಗಿ ಇಸ್ಲಾಂ ಬಾಂಧವರು ತಮ್ಮ ಮಸೀದಿಯ ಹತ್ತಿರ ಅಡ್ಡಪಲ್ಲಕ್ಕಿ ಆಗಮಿಸಿದಾಗ ಹೂ ಹಾಕಿ, ಹೂ ಮಳೆಗರೆದು ಸ್ವಾಗತಿಸಿಕೊಂಡಿರುವುದು ಸಂತಸ ಮೂಡಿಸಿತು. ಇದೆ ನಿಜವಾದ ಭಾವೈಕ್ಯತೆಯಾಗಿದೆ. ಹಿಂದೆ ಎಲ್ಲರೂ ಸೌಹಾರ್ದತೆಯಿಂದ ಕೂಡಿ ಬದುಕುತ್ತಿದ್ದರು. ಇಂದು ಅಂತಹ ಮನೋಭಾವನೆ ಕಡಿಮೆಯಾಗಿವೆ. ಸಿದ್ದಯ್ಯ ಪುರಾಣಿಕರು ಹೇಳಿದಂತೆ ಎಲ್ಲರೂ ಮೊದಲು ಮಾನವನಾಗಬೇಕು ಎಂದರು. 1994ರಲ್ಲಿ ಮುಂಡರಗಿಯಲ್ಲಿ ಜರುಗಿದ ದಸರಾ ದರ್ಬಾರ್ ಉತ್ಸವದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಮುಂದೆ ಕುಳಿತುಕೊಳ್ಳುತ್ತಿದ್ದ ಎಸ್.ಎಸ್.ಪಾಟೀಲರು ಕೆಲವೇ ದಿನಗಳಲ್ಲಿ ಜರುಗಿದ ಚುನಾವಣೆಗೆ ಸ್ಪರ್ಧಿಸಿ ಅದರಲ್ಲಿ ಜಯಭೇರಿ ಬಾರಿಸಿ ಸರ್ಕಾರದಲ್ಲಿ ಸಹಕಾರ ಸಚಿವರಾದರು. ಆ ಸಹಕಾರ ಖಾತೆಗೆ ಹೆಚ್ಚಿನ ಬಲವನ್ನು, ಶಕ್ತಿಯನ್ನು ತಂದು ಕೊಟ್ಟವರು ಎಸ್.ಎಸ್.ಪಾಟೀಲರು. ಬಸವಣ್ಣನವರ ಮಾತುಗಳನ್ನು ಹೇಳುವುದಷ್ಟೇ ಅಲ್ಲ, ಅವುಗಳನ್ನು ತಮ್ಮ ನಡೆನುಡಿಗಳಲ್ಲಿ ಪರಿಪಾಲಿಸಿಕೊಂಡು ಬಂದವರು ಎಂದರು. ರಾಜ್ಯ ಕಸಾಪ ಮಾಜಿ ಅಧ್ಯಕ್ಷ ಡಾ.ಮನು ಬಳಿಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಸಮಾಜದಲ್ಲಿನ ಓರೆಕೋರೆಗಳನ್ನು ತಿದ್ದುವುದಕ್ಕೆ ಇಂತಹ ಕಾರ್ಯಕ್ರಮಗಳು ಮಾದರಿಯಾಗಿವೆ ಎಂದರು.

ವಿರೂಪಾಪುರ-ಕಲಕೇರಿ ಮುದುಕೇಶ್ವರ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಹಂಪಸಾಗರದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯರು ನುಡಿ ನೈವೇದ್ಯ ಸಲ್ಲಿಸಿದರು. ಮಾಜಿ ಸಚಿವ ಎಸ್.ಎಸ್. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಂಕಾಪುರ ರೇವಣಸಿದ್ಧೇಶ್ವರ ಶಿವಾಚಾರ್ಯರು, ಹಿರೇವಡ್ಡಟ್ಟಿ ವೀರೇಶ್ವರ ಶಿವಾಚಾರ್ಯರು, ಬನ್ನಿಕೊಪ್ಪದ ಡಾ.ಸುಜ್ಞಾನದೇವ ಶಿವಾಚಾರ್ಯರು, ಸೂಡಿ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು, ಸಿದ್ಧರಬೆಟ್ಟ-ಅಬ್ಬಿಗೇರಿ ವೀರಭದ್ರ ಶಿವಾಚಾರ್ಯರು, ಮಾನೆಹಳ್ಳಿ ಮಳಿಯೋಗೇಶ್ವರ ಶಿವಾಚಾರ್ಯರು, ಹರಪನಹಳ್ಳಿ ವರಸದ್ಯೋಜಾತ ಶಿವಾಚಾರ್ಯರು ಶಾಸಕ ಡಾ. ಚಂದ್ರು ಲಮಾಣಿ, ಚಂದ್ರು ಬಾಳಿಹಳ್ಳಿಮಠ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ವೀರೇಶ ಕೂಗು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಕುಮಾರಗೌಡ ಎಸ್.ಪಾಟೀಲ ಸ್ವಾಗತಿಸಿದರು. ಸವಣೂರಿನ ಡಾ.ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.

Share this article