ಗದಗ: ಗದಗ-ಬೆಟಗೇರಿ ಭಾಗದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹರಿದು ಹಾಕುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಬಡವರಿಗೆ ಒಳ್ಳೆಯದಾಗುವುದನ್ನು ನಿಲ್ಲಿಸುವುದು, ಅದನ್ನು ಹರಿದು ಹಾಕುವುದನ್ನು ಮಾಡಿದರೆ ಪರಿಣಾಮ ನೆಟ್ಟಗೆ ಇರುವುದಿಲ್ಲ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಎಚ್ಚರಿಕೆ ನೀಡಿದರು.
ನಗರದ ೬ನೇ ವಾರ್ಡ್‌ನ ಶರಣಬಸವೇಶ್ವರ ನಗರದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪ್ರಚಾರಾರ್ಥವಾಗಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಬಡವರಿಗೆ ಒಳ್ಳೆಯದಾಗುವುದನ್ನು ನೋಡಲಾಗದೇ ಸಂಕಟಪಡುತ್ತಿರುವವರು ಮಾತ್ರ ಗ್ಯಾರಂಟಿ ಕಾರ್ಡ್‌ಗಳನ್ನು ಹರಿದು ಹಾಕುವ ಕೆಲಸ ಮಾಡಿರುತ್ತಾರೆ. ಅವರಿಗೆ ನೀವು ಮಾತಿನ ಮೂಲಕ ಬುದ್ದಿ ಕಲಿಸಿ ತಕ್ಕ ಶಾಸ್ತಿ ಮಾಡಬೇಕು ಎಂದರು.
ಭಾರತದಲ್ಲಿ ಗ್ಯಾರಂಟಿ ಯೋಜನೆಗಳ ಒಂದು ದೊಡ್ಡ ಕ್ರಾಂತಿಯಾಗಿದೆ.ಮಹಿಳೆಯರು ಸಂಸಾರವನ್ನು ಸುಗಮವಾಗಿ ನಿರ್ವಹಿಸಲು ಸಹಕಾರಿಯಾಗಿದೆ.ಇನ್ನೂ ಹೆಚ್ಚಿನ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮಹಿಳೆಗೆ ಒಂದು ಲಕ್ಷ ನೀಡುವ ಯೋಜನೆಯ ಕೇಂದ್ರ ಗ್ಯಾರಂಟಿ ಕಾರ್ಡ್ ವಿತರಿಸಲಾಗಿದೆ. ಮಹಿಳೆಯರಿಗೆ ವಾರ್ಷಿಕ ಒಂದು ಲಕ್ಷ, ನಿರುದ್ಯೋಗಿ ಯುವಕರಿಗೆ ಉದ್ಯೋಗ ಹುಡುಕಿಕೊಳ್ಳಲು ಒಂದು ಲಕ್ಷ, ರೈತರ ಸಾಲ ಮನ್ನಾ ಮಾಡುವುದು, ಎನ್‌ಆರ್‌ಇಜಿ ₹೪೦೦ ಏರಿಕೆ ಸೇರಿ ಹಾಗೂ ಜಾತಿ ಗಣತಿ ಮಾಡುತ್ತೇವೆ ಎಂದು ವಿವರಿಸಿದರು.
ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರಕ್ಕೆ ಮತ ಹಾಕುವ ಮೂಲಕ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಗೆಲ್ಲಿಸಬೇಕು. ನಮಗೊಂದು ಆತ್ಮವಿಶ್ವಾಸ ಮೂಡಿದ್ದು, ಪ್ರತಿಯೊಂದು ಮನೆಯಲ್ಲಿ ಯಜಮಾನಿ ಸ್ವಾಭಿಮಾನದ ಪ್ರತೀಕವಾಗಿದ್ದಾಳೆ. ಕಾಂಗ್ರೆಸ್‌ಗೆ ಬೆಂಬಲಿಸುವುದಾಗಿ ಮಹಿಳೆಯರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಮುಂದೆ ಬರುತ್ತಿದ್ದು ನಮಗೆಲ್ಲ ಆತ್ಮವಿಶ್ವಾಸ ಮೂಡಿಸಿದೆ ಎಂದರು.
ಈ ವೇಳೆ ೬ನೇ ವಾರ್ಡಿನ ಸದಸ್ಯೆ ಲಕ್ಷ್ಮವ್ವ ಭಜಂತ್ರಿ ಅಧ್ಯಕ್ಷತೆ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಬಾಲರಾಜ ಅರಬರ, ಲಕ್ಷ್ಮಣ ಭಜಂತ್ರಿ ಸೇರಿ ಹಲವರಿದ್ದರು.