ವ್ಯವಸ್ಥೆ ಸರಿಪಡಿಸದಿದ್ದರೇ ಸಮೀಕ್ಷೆ ಮಾಡುವುದಿಲ್ಲ

KannadaprabhaNewsNetwork |  
Published : Sep 24, 2025, 01:04 AM IST
ಶಿಕ್ಷಕರ ಪ್ರತಿಭಟನೆ | Kannada Prabha

ಸಾರಾಂಶ

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಅಂಗವಿಕಲರು, ಗರ್ಭಿಣಿಯರು, ಮೃತ ಶಿಕ್ಷಕರನ್ನು ಗಣತಿದಾರರ ಪಟ್ಟಿಯಲ್ಲಿ ಸೇರಿಸಿರುವುದನ್ನು ಖಂಡಿಸಿ ಬೆಳಗಾವಿ ಶಾಲಾ ಶಿಕ್ಷಕರು ಮಂಗಳವಾರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಅಂಗವಿಕಲರು, ಗರ್ಭಿಣಿಯರು, ಮೃತ ಶಿಕ್ಷಕರನ್ನು ಗಣತಿದಾರರ ಪಟ್ಟಿಯಲ್ಲಿ ಸೇರಿಸಿರುವುದನ್ನು ಖಂಡಿಸಿ ಬೆಳಗಾವಿ ಶಾಲಾ ಶಿಕ್ಷಕರು ಮಂಗಳವಾರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಬೆಳಗಾವಿ ನಗರ ಮತ್ತು ತಾಲೂಕಿನಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕರ್ತವ್ಯದಿಂದ ಗಣತಿದಾರರು ಹಿಂದೆ ಸರಿದಿದ್ದಾರೆ. ಒಂದೆಡೆ ತಂತ್ರಾಂಶ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಮತ್ತೊಂದೆಡೆ ಅಂಗವಿಕಲರು, ಗರ್ಭಿಣಿಯರು, ಮೃತ ಶಿಕ್ಷಕರನ್ನು ಗಣತಿದಾರರ ಪಟ್ಟಿಯಲ್ಲಿ ಸೇರಿಸಿರುವ ಆರೋಪ ಕೇಳಿ ಬಂದಿದೆ. ಅಲ್ಲದೇ ವ್ಯವಸ್ಥೆ ಸರಿಪಡಿಸದಿದ್ದರೆ ನಾವು ಸಮೀಕ್ಷೆ ಮಾಡುವುದಿಲ್ಲ ಎಂದು ಗಣತಿದಾರರು ಎಚ್ಚರಿಸಿದರು.ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಗಣತಿದಾರರು, ಸರ್ಕಾರದ ಆದೇಶದ ಪ್ರಕಾರ ಅಂಗವಿಕಲ ನೌಕರರನ್ನು ಸಮೀಕ್ಷೆಗೆ ಬಳಕೆ ಮಾಡಬಾರದು ಎಂಬ ನಿಯಮ ಇದೆ. ಆದರೆ, ಆ ನಿಯಮ ಗಾಳಿಗೆ ತೂರಿ ವಿಕಲಚೇತನರನ್ನು ನೇಮಕ‌ ಮಾಡಲಾಗಿದೆ‌. ಮೃತ ನೌಕರರು ಮತ್ತು ಸೆ.30ಕ್ಕೆ ನಿವೃತ್ತಿ ಹೊಂದುವವರನ್ನು ಗಣತಿದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. 11 ಪ್ರದೇಶಗಳನ್ನು ಗಣತಿಗೆ ಹಂಚಿಕೆ ಮಾಡಿದ್ದಾರೆ. ಈ ಹಿಂದೆ ಮಾಡಿದ ಎಲ್ಲ ಗಣತಿ ಸಮೀಕ್ಷೆಗಳಲ್ಲಿ ಆಯಾ ಶಿಕ್ಷಕರ ಶಾಲೆಯ ಸುತ್ತ-ಮುತ್ತಲಿನ ಪ್ರದೇಶಕ್ಕೆ ಗಣತಿದಾರರನ್ನಾಗಿ ನೇಮಿಸಲಾಗುತ್ತಿತ್ತು. ಈ ಬಾರಿ ಬೇರೆ ಬೇರೆ ಪ್ರದೇಶಗಳಿಗೆ ನೇಮಕ ಮಾಡಿದ್ದರಿಂದ ಬಹಳಷ್ಟು ತೊಂದರೆ ಆಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಳಗಾವಿ ನಗರ ಘಟಕದ ಅಧ್ಯಕ್ಷ ಬಾಬು ಸೊಗಲನ್ನವರ ಮಾತನಾಡಿ, ಆಯಾ ಶಾಲೆಗಳ ಪ್ರದೇಶದಲ್ಲಿ ನೇಮಕ ಮಾಡಿದ್ದರೇ ಕುಟುಂಬಗಳ ಪರಿಚಯ ಇರುತ್ತದೆ. ಸಮಗ್ರ ಮಾಹಿತಿ ಸಿಕ್ಕು ನಿಗದಿತ ಸಮಯದಲ್ಲಿ ಸಮೀಕ್ಷೆ ಪೂರ್ಣಗೊಳಿಸಬಹುದಾಗಿತ್ತು. ಇನ್ನು ತಂತ್ರಾಂಶ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇನ್ನೂ ಅದು ಓಪನ್ ಕೂಡ ಆಗಿಲ್ಲ. ಇಷ್ಟೇಲ್ಲ ಸಮಸ್ಯೆ ಇಟ್ಟುಕೊಂಡು ಗಣತಿ ಮಾಡುವಂತೆ ಹೇಳಿದರೆ ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದರು.ಸಮೀಕ್ಷೆ ಮಾಡಲು ನಮ್ಮ ವಿರೋಧ ಇಲ್ಲ. ವ್ಯವಸ್ಥೆ ಸರಿಪಡಿಸಿ ಕೊಟ್ಟರೆ ಸಮೀಕ್ಷೆ ಸರಳವಾಗಿ ಮಾಡಬಹುದು. ಇಲ್ಲದಿದ್ದರೆ ನಾವು ಸಮೀಕ್ಷೆ ಮಾಡುವುದಿಲ್ಲ ಎಂದು ಬಾಬು ಸೊಗಲನ್ನವರ ಎಚ್ಚರಿಸಿದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಯಕುಮಾರ ಹೆಬ್ಬಳಿ ಮಾತನಾಡಿ, ಶಿಕ್ಷಕರು ಎಲ್ಲಿ ಕೆಲಸ ಮಾಡುತ್ತಿದ್ದಾರೆ ಅಲ್ಲಿಯೇ ಗಣತಿಗೆ ನೇಮಿಸಬೇಕು. 58 ವರ್ಷ ಮೇಲ್ಪಟ್ಟವರು, ವಿಕಲಚೇತನರು, ಗರ್ಭಿಣಿಯರು, ಆರೋಗ್ಯ ಸಮಸ್ಯೆಯಿಂದ ಬಳಲುವವರನ್ನು ಹೊರತು ಪಡಿಸಿ ಇನ್ನುಳಿದವರನ್ನು ಸಮೀಕ್ಷೆಗೆ ನೇಮಿಸುವಂತೆ ನಾವು ಪಟ್ಟಿ ಕೊಟ್ಟಿದ್ದೇವು. ಆದರೆ, ನಿನ್ನೆ ಸಾಯಂಕಾಲ 6 ಗಂಟೆಗೆ ಪಟ್ಟಿ ಬದಲಿಸಿ ಈ ಮೇಲಿನವರನ್ನೆ ಸಮೀಕ್ಷೆಗೆ ನೇಮಕ ಮಾಡಿದ್ದಾರೆ. ಹೀಗಾದರೆ ನಾವು ಸಮೀಕ್ಷೆ ಮಾಡಲು ಸಾಧ್ಯವಿಲ್ಲ ಅಂತಾ ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್ ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದೇವೆ ಎಂದರು.ತೊಂದರೆಯಲ್ಲಿ ಇದ್ದವರನ್ನು ಬಿಟ್ಟು ಸಮೀಕ್ಷೆ ಮಾಡಲು ಸಮರ್ಥ ಇದ್ದ ಶಿಕ್ಷಕರ ಪಟ್ಟಿಯನ್ನು ಬಿಇಒ ಕಚೇರಿಯಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಕಳಿಸಲಾಗಿತ್ತು. ಆದರೆ, ಅದನ್ನು ಬಿಟ್ಟು ತಮಗೆ ತಿಳಿದಂತೆ ಗಣತಿದಾರರನ್ನು ನೇಮಿಸಿದ್ದಾರೆ. ಹಾಗಾಗಿ, ನಮ್ಮ ಜಿಲ್ಲೆಯಲ್ಲಿ ಯಾವೊಬ್ಬ ಶಿಕ್ಷಕರು ಗಣತಿಗೆ ಹೋಗಿಲ್ಲ. ನಾವು ಹೇಳುವವರೆಗೂ ಯಾರೂ ಹೋಗುವುದಿಲ್ಲ ಎಂದು ಜಯಕುಮಾರ ಹೆಬ್ಬಳಿ ಸ್ಪಷ್ಟಪಡಿಸಿದರು.ಪ್ರತಿಭಟನೆಯಲ್ಲಿ ರಮೇಶ ಗೋಣಿ, ಕೆ.ಎಸ್.ರಾಚಣ್ಣವರ, ಚಂದ್ರು ಕೋಲ್ಕಾರ, ಶಿವಾನಂದ ರೋಡಬಸಣ್ಣವರ, ರೇಖಾ ಅಂಗಡಿ ಸೇರಿ ಮತ್ತಿತರರು ಇದ್ದರು.

PREV

Recommended Stories

ಉಡುಪಿ-ಉಚ್ಚಿಲ ದಸರಾ: ನಿತ್ಯ ಸಾವಿರಾರು ಮಹಿಳೆಯರಿಂದ ಕುಂಕುಮಾರ್ಚನೆ
ಡಾ.ಬಿ.ಆರ್‌.ಅಂಬೇಡ್ಕರ್‌ ಸಭಾಭವನ ಉದ್ಘಾಟನೆ