ಕನ್ನಡ ಇದ್ರೆ ನಾವು ಉಳಿಯಲು, ಬೆಳೆಯಲು ಸಾಧ್ಯ

KannadaprabhaNewsNetwork |  
Published : Nov 04, 2025, 04:00 AM IST
ಕನ್ನಡ ರಾಜ್ಯೋತ್ಸವ ಅಂಗವಾಗಿ ಕರ್ನಾಟಕ ಬಯಲಾಟ ಅಕಾಡೆಮಿ ಹಾಗೂ ಸರಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜು ಸಹಯೋಗದಲ್ಲಿ ನಡೆದ ದೊಡ್ಡಾಟ, ತೊಗಲು ಗೊಂಬೆಯಾಟ ಪ್ರದರ್ಶನವನ್ನು ಖ್ಯಾತ ಕವಿ ಡಾ.ಸತ್ಯಾನಂದ ಪಾತ್ರೋಟ ಉದ್ಘಾಟಿಸಿದರು. | Kannada Prabha

ಸಾರಾಂಶ

ಕನ್ನಡವಿದ್ದಾಗ ಮಾತ್ರ ನಾವು ಉಳಿಯಲು, ಬೆಳೆಯಲು ಸಾಧ್ಯವಾಗುತ್ತದೆ ಎಂದು ಖ್ಯಾತ ಕವಿ ಡಾ.ಸತ್ಯಾನಂದ ಪಾತ್ರೋಟ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕನ್ನಡವು ಬದುಕಿನ ಭಾಗವಾಗಬೇಕು. ಪ್ರಸ್ತುತ ದಿನಮಾನಗಳಲ್ಲಿ ಆಂಗ್ಲ ಭಾಷೆ ವ್ಯಾಮೋಹ ಎಲ್ಲ ಭಾಗದಲ್ಲೂ ಪಸರಿಸುತ್ತಿದೆ ಆದರೆ ಮಾತೃ ಭಾಷೆ ನೀಡಿದಷ್ಟು ಆತ್ಮ ವಿಶ್ವಾಸ ಅನ್ಯ ಭಾಷೆ ನೀಡಲಾರವು. ಕನ್ನಡವಿದ್ದಾಗ ಮಾತ್ರ ನಾವು ಉಳಿಯಲು, ಬೆಳೆಯಲು ಸಾಧ್ಯವಾಗುತ್ತದೆ ಎಂದು ಖ್ಯಾತ ಕವಿ ಡಾ.ಸತ್ಯಾನಂದ ಪಾತ್ರೋಟ ಹೇಳಿದರು.

ಕನ್ನಡ ರಾಜ್ಯೋತ್ಸವ-2025 ಅಂಗವಾಗಿ ಕರ್ನಾಟಕ ಬಯಲಾಟ ಅಕಾಡೆಮಿ ಹಾಗೂ ಸರ್ಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜು ಸಹಯೋಗದಲ್ಲಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ದೊಡ್ಡಾಟ, ತೊಗಲು ಗೊಂಬೆಯಾಟ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಮಾತೃ ಭಾಷೆ ವ್ಯಕ್ತಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಜಾತಿ ವಲಯಗಳನ್ನು ಮೀರಿ ಮಾತೃಭಾಷೆ ಪ್ರೀತಿಸಿ, ಕನ್ನಡವೇ ನಮ್ಮ ಜಾತಿ ಕನ್ನಡವೇ ನಮ್ಮ ಧರ್ಮ ಎನ್ನುವಂತಾಗಬೇಕಿದೆ. ಈ ನಾಡು ಸರ್ವ ಜನಾಂಗದ ಶಾಂತಿತೋಟ. ಸರ್ವ ಜನಾಂಗದವರ ಅಭಿವೃದ್ಧಿಯಾಗಬೇಕು. ಎಲ್ಲ ಸಮುದಾಯದವರು ಪರಸ್ಪರ ಪ್ರೀತಿಸುವಂತಿರಬೇಕು. ಅಲ್ಪಸಂಖ್ಯಾತರೊಂದಿಗೆ ಬಹುಸಂಖ್ಯಾತರು ಬೆರೆಯುವಂತಾಗಬೇಕು. ಕನ್ನಡ ಸಾಹಿತ್ಯಕ್ಕೆ ಅನ್ಯ ಧರ್ಮಿಯರು ಕೂಡ ಕೊಡುಗೆ ನೀಡಿದ್ದಾರೆ. ಇದಕ್ಕೆ ಸಂತ ಶಿಶುನಾಳ ಶರೀಫರು ಉತ್ತಮ ಉದಾಹರಣೆ ಎಂದರು.

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಸಂಸ್ಕೃತಿ ಚಿಂತಕ ಡಾ.ಸರ್ಜಾಶಂಕರ ಹರಳಿಮಠ ಮಾತನಾಡಿ, ಕನ್ನಡ ಸಾಹಿತ್ಯ ಎಂದರೆ ಅದು ಬದುಕಿನ ಭಾವನೆ. ಕನ್ನಡ ಸಾಹಿತ್ಯ ಕೇವಲ ಬರಹ ರೂಪಕ್ಕೆ ಸೀಮಿತವಾಗದೆ ಹೃದಯದ ದ್ವನಿಯಾಗಿದೆ. ಕೆ.ಶಿವರಾಂ ಕಾರಂತರ ಚೋಮನ ದುಡಿ ಕಾದಂಬರಿಯೇ ಮುಂದೆ ಉಳುವವನೇ ಭೂಮಿಯ ಒಡೆಯ ಕಾಯಿದೆ ಜಾರಿಗೆ ಪ್ರೇರಣೆಯಾಗಿದ್ದಿದೆ. ಪಂಪ, ರನ್ನ, ಕುಮಾರವ್ಯಾಸ, ದ.ರಾ. ಬೇಂದ್ರೆ, ಕುವೆಂಪು ಮುಂತಾದ ಮಹನೀಯರು ಸಾಹಿತ್ಯ ಕ್ಷೇತ್ರದಲ್ಲಿ ಉಳಿಯುವಂತೆ ಮಾಡಿದ್ದೆ ಕನ್ನಡ ಭಾಷೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಕೆ.ಆರ್.ದುರ್ಗಾದಾಸ ಮಾತನಾಡಿ, ಕಲೆ ಸಾಹಿತ್ಯ ಕೇವಲ ಒಂದು ಜಾತಿಗೆ ಅಥವಾ ವರ್ಣಕ್ಕೆ ಸೀಮಿತವಾಗಿಲ್ಲ. ದೊಡ್ಡಾಟ, ಬಯಲಾಟಗಳೆಲ್ಲ ಸಂತ್ರಸ್ತರ ಧ್ವನಿಯಾಗಿದ್ದವು ಆದರೆ ಆಧುನಿಕತೆಯ ಭರಾಟೆಯಲ್ಲಿ ಕಲೆಗಳು ಮುಳುಗುತ್ತಿವೆ. ಇಂದು ಕನ್ನಡ ನಾಡಿನ ಕಲೆಗಳನ್ನು ಸಂರಕ್ಷಣೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿಯು ದೊಡ್ಡಾಟ, ಬಯಲಾಟ, ಪಾರಿಜಾತ ದಂತಹ ಕಲೆಗಳ ಪರಂಪರೆ ಮುಂದಿನ ಪೀಳಿಗೆಯತ್ತ ಕೊಂಡೊಯುತ್ತಿದೆ. ಇದರ ಸದುಪಯೋಗವನ್ನು ಕಾಲೇಜು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಬಾದಾಮಿ ತಾಲೂಕಿನ ಕಾಕನೂರ ದುರ್ಗಾ ಶಕ್ತಿ ಕಲಾ ಸಂಘದ ಕಲಾವಿದರು ಪ್ರದರ್ಶಿಸಿದ ತೊಗಲು ಗೊಂಬೆಯಾಟ ಜನಮನ ಸೂರೆಗೊಂಡರೆ, ಹುಬ್ಬಳ್ಳಿ ಸಂಕಲ್ಪ ಪ್ರದರ್ಶಕ ಕಲೆಗಳ ಹಾಗೂ ಸಂಶೋಧನಾ ಕೇಂದ್ರದ, ವಿದ್ಯಾರ್ಥಿಗಳಾದ ವರ್ಷ ಬೀಳಗಿ, ಸೌಮ್ಯಾ ಹರಿಶೆಟ್ಟರ, ವಿನುತ ಹಿರೇಮಠ, ಜಾನ್ವಿ ಅಚ್ನುರಮಠ, ಸುಷ್ಮಿತಾ ಸುರಪುರ, ಸ್ವಾತಿ ಬಡಿಗೇರ, ಸೌಜನ್ಯಾ ಅತಡ್ಕರ, ಪಾವನಿ ಪಾಟೀಲ, ದೃತಿ ಬಗಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಪ್ರದರ್ಶಿಸಿದ ದೊಡ್ಡಾಟದ ಗಿರಿಜಾ ಕಲ್ಯಾಣ ಪ್ರಸಂಗವು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.

ಕಾರ್ಯಕ್ರಮದಲ್ಲಿ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶಿವಾನಂದ ಪಟ್ಟಣಶೆಟ್ಟಿ, ಬಯಲಾಟ ಅಕಾಡೆಮಿ ರಿಜಿಸ್ಟ್ರಾರ್ ಕಸ್ತೂರಿ ಪಾಟೀಲ, ಸದಸ್ಯ ಲಕ್ಷ್ಮಣ ದೇಸಾರಟ್ಟಿ, ನವನಗರ ಸರಕಾರಿ ಅಲ್ಪ ಸಂಖ್ಯಾತರ, ಮೊರಾರ್ಜಿದೇಸಾಯಿ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜಿನ ಪ್ರಾಚಾರ್ಯ ಎಂ ಎನ್ ಗರಗ, ಅಬ್ದುಲ್ ಕಲಾಂ ವಸತಿ ಶಾಲೆ ಪ್ರಾಚಾರ್ಯ ಆನಂದ ದದ್ದೂರ, ಇತಿಹಾಸ ಉಪನ್ಯಾಸಕ ಕೇಶವ ಸಾಲಮಂಟಿ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ರಾಜಶೇಖರ ಬುಳ್ಳಾ ಕಾರ್ಯಕ್ರಮ ನಿರೂಪಿಸಿದರು. ಶಿವಪ್ಪಾ ಬಿಂಗಿ ವಂದಿಸಿದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ