ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಉಲಾಖಡ ಹಾಗೂ ಜಿಲ್ಲಾ ಗೊಲ್ಲರ (ಯಾದವ) ಸಂಘ ಸಹಯೋಗದಲ್ಲಿ ಏರ್ಪಡಿಸಿದ್ದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಗತ್ತಿಗೇ ಒಳ್ಳೆಯದು ಮಾಡಿದ ಶ್ರೀ ಕೃಷ್ಣನನ್ನು ಎಲ್ಲರೂ ಒಪ್ಪುತ್ತಾರೆ ಹಾಗೂ ಇಷ್ಟಪಡುತ್ತಾರೆ. ಧರ್ಮ ಸ್ಥಾಪನೆ ಮತ್ತು ಸಮಾಜ ಸ್ವಾಸ್ಥ್ಯ ಕೃಷ್ಣನ ತತ್ವವಾಗಿದ್ದು, ಇದು ನಮ್ಮ ಜೀವನದ ಗುರಿಯಾಗಬೇಕು ಎಂದರು.
ಶ್ರೀ ಕೃಷ್ಣ ಭಗವಾನ್ ನಮಗೆ ಮಾತ್ರ ಸೀಮಿತವಲ್ಲ, ಆತ ಸರ್ವವ್ಯಾಪಿ, ಸರ್ವಶ್ರೇಷ್ಠ. ಲೋಕ ಕಲ್ಯಾಣ ಮಾಡಿದ ಲೋಕಮಾನ್ಯ. ಅಧರ್ಮ ಅವನತಿಯಾಗಿ ಧರ್ಮ ಸ್ಥಾಪನೆ ಆಗಬೇಕು, ರಾಕ್ಷಸತನ ದೂರ ಆಗಬೇಕೆಂದು ಕಾರ್ಯಪ್ರವೃತ್ತರಾದವರು. ಸಮಾಜಕ್ಕೆ ಅಧರ್ಮ ಸೃಷ್ಟಿಯಾದಾಗಲೆಲ್ಲಾ ನಾನು ಮತ್ತೆ ಅವತರಿಸಿ ಧರ್ಮ ಸ್ಥಾಪಿಸುತ್ತೇನೆ ಎಂದಿದ್ದ ಶ್ರೀ ಕೃಷ್ಣ, ಅರ್ಜುನರ ಅಗತ್ಯವಿದೆ. ಶ್ರೀಕೃಷ್ಣನ ಮಾರ್ಗದಲ್ಲಿ ನಡೆದಾಗ ಮಾತ್ರ ಅಧರ್ಮ ನಾಶವಾಗಿ, ಧರ್ಮ ಸ್ಥಾಪನೆ ಸಾಧ್ಯ ಎಂದು ಹೇಳಿದರು.ಶಾಸಕಿ ಶಾರದಾ ಪೂರ್ಯಾನಾಯ್ಕ ಮಾತನಾಡಿ, ಅಧರ್ಮ ನಾಶಪಡಿಸಿ, ಧರ್ಮ ಸ್ಥಾಪಿಸಿದವರು ಶ್ರೀ ಕೃಷ್ಣ. ಧರ್ಮದ ಪರವಾಗಿ ನಿಂತು ಸಮಾಜಕ್ಕೆ ಉತ್ತರ ನೀಡಿದ ಶ್ರೀಕೃಷ್ಣನ ಆದರ್ಶಗಳನ್ನು ಅಳವಡಿಸಿಕೊಂಡು ಭಗವದ್ಗೀತೆ ಪಠಣ ಮಾಡಿದರೆ ನಮ್ಮ ಗೊಂದಲಗಳಿಗೆ ಉತ್ತರ ಸಿಗುತ್ತದೆ ಎಂದರು. ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಮಾತನಾಡಿ, ಕೃಷ್ಣ ಎಂದರೆ ಸ್ನೇಹ, ಸಂತೋಷ ಎಲ್ಲ ಜನಾಂಗದಲ್ಲಿ ಮೂಡುತ್ತದೆ. ಅಂತಹ ಕೃಷ್ಣನ ನಡೆ-ನುಡಿ ಜೀವನದಲ್ಲಿ ಅಳಡಿಸಿಕೊಳ್ಳೋಣ ಎಂದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ್ ಮಾತನಾಡಿ, ವಿಶ್ವವ್ಯಾಪಿಯಾಗಿ ಪೂಜಿಸಲ್ಪಡುವವನು ಶ್ರೀ ಕೃಷ್ಣ. ಅವರ ಆದರ್ಶಗಳನ್ನು ನಾವೆಲ್ಲ ಅನುಸರಿಸಬೇಕು. ರಾಜ್ಯ ಸರ್ಕಾರ ಬಡವರ, ಹಿಂದುಳಿದವರ ಆರ್ಥಿಕ ಸಬಲೀಕರಣಕ್ಕಾಗಿ 5 ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದು, ಫಲಾನುಭವಿಗಳು ಈ ಯೋಜನೆಗಳ ಫಲವನ್ನು ಪಡೆಯಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಸ್ವಾಗತಿಸಿದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಶ್ರೀ ಕೃಷ್ಣ ಭಾವಚಿತ್ರಕ್ಕೆ ಪುಷ್ಪಾರ್ಚಿಸಿದರು. ತಾಲೂಕು ಗೊಲ್ಲರ (ಯಾದವ)ಸಂಘದ ಅಧ್ಯಕ್ಷ ಎಸ್.ಎಚ್.ಜಗದೀಶ್ ಮತ್ತಿತರರು ಇದ್ದರು.