ಕನ್ನಡಪ್ರಭ ವಾರ್ತೆ ಕಾಳಗಿ
ಕಾಳಗಿ ತಾಲೂಕಿನ ಸೂಗುರ(ಕೆ), ಸುಂಠಾಣ, ಹೋಡೆಬೀರನಳ್ಳಿ, ಕೋರವಿ, ಕೊರವಿ ತಾಂಡಾ, ರಾಮನಗರ ತಾಂಡಾ, ಗಡಿಕೇಶ್ವಾರ, ಹೊಸಳ್ಳಿ, ಹಲಚೇರಾ, ಕುಡಹಳ್ಳಿ ಸೇರಿ ಇತರೆ ತಾಂಡಾ ಹಾಗೂ ಗ್ರಾಮಗಳಲ್ಲಿ ಎಗ್ಗಿಲ್ಲದೆ ಅಕ್ರಮ ಸವಳು ಗಣಿಗಾರಿಗೆ ದಂಧೆ ಜೋರಾಗಿ ನಡೆದಿದೆ.
ತಾಲೂಕಿನಲ್ಲಿ ಎಷ್ಟು ಜನ ಗಣಿ ಮಾಲೀಕರು ಭೂಮಿ ಲೀಜ್ ಪಡೆದಿದ್ದಾರೆ ಎಂಬ ನಿಖರ ಮಾಹಿತಿ ದೊರಕುತ್ತಿಲ್ಲ, ಕೆಲವರು ಒಂದು ಕಡೆ ಲೀಜ್ ಪಡೆದು ಸುಮಾರು ಕಡೆ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಯಾವುದೇ ಭೂಮಿ ಲೀಜ್ ಪಡೆಯದೇ ಗಣಿಗಾರಿಕೆ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾದ ಗಣಿ ಮತ್ತು ಭೂ ಇಲಾಖೆಯವರು ಹಾಗೂ ತಾಲೂಕು ಆಡಳಿತ ಗಾಢನಿದ್ರೆಗೆ ಜಾರಿರುವುದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದೆ.ತಾಲೂಕಿನ ಅನೇಕ ಗ್ರಾಮಗಳಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಕಣ್ಣೆದುರೇ ರಾಜರೋಷವಾಗಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆಯನ್ನು ತಡೆಯಬೇಕಾದ ತಾಲೂಕು ಆಡಳಿತ ಹಾಗೂ ತಹಸೀಲ್ದಾರರರು ಹಣದಾಸೆಗೆ ಅಕ್ರಮ ಸವಳು ಗಣಿಗಾರಿಕೆಗೆ ಸಾಥ್ ನೀಡುತ್ತಿದ್ದಾರೆ ಎಂದು ಹಿಂದೂ ಜಾಗೃತಿ ಸೇನೆ ತಾಲೂಕು ಅಧ್ಯಕ್ಷ ಶಂಕರ ಚೌಕ ಆರೋಪಿಸಿದ್ದಾರೆ.
ಹೆಸರಿಗೆ ಮಾತ್ರ ದಂಡ: ಒಂದು ಗ್ರಾಮದಲ್ಲಿ ಕೆಲವರು ಒಂದೆರಡು ಎಕರೆ ಅಥವಾ ಅರ್ಧ ಎಕರೆ ಭೂಮಿಯಲ್ಲಿ ಲೀಜ್ ಪಡೆದಿದ್ದಾರೆ. ಆದರೆ ಒಂದು ಕಡೆ ಲೀಜ್ ಪಡೆದು ಹಲವಾರು ಕಡೆ ಗಣಿಗಾರಿಕೆ ಮಾಡುತ್ತಿದ್ದಾರೆ ಎಂದು ಮೂಲದಿಂದ ತಿಳಿದು ಬಂದಿದೆ. ಅಕ್ರಮ ಗಣಿಗಾರಿಕೆ ಕುರಿತು ದೂರು ನೀಡಿದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹೆಸರಿಗಷ್ಟೇ ದಂಡ ಹಾಕಿ ಕೈತೊಳೆದುಕೊಳ್ಳುತ್ತಿದ್ದಾರೆ.
ತಹಸೀಲ್ದಾರ- ಕಂದಾಯ ನೀರಿಕ್ಷಕರ ಮಧ್ಯೆ ವಾಗ್ವಾದ: ಕಾಳಗಿ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಸವಳು ಗಣಿಗಾರಿಕೆ ಕುರಿತು ಪ್ರಶ್ನಿಸಿಸಲು ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರು ತಹಸೀಲ್ ಕಚೇರಿಗೆ ಹೋದಾಗ ತಹಸೀಲ್ದಾರ್ ಘಮಾವತಿ ರಾಠೋಡ ಅವರು ತಾಲೂಕಿನಲ್ಲಿ ಸವಳು ಗಣಿಗಾರಿಕೆಗೆ ನಡೆಸಲು ತಾಲೂಕು ಆಡಳಿತದಿಂದ ಯಾರು ಪರವಾನಿಗೆ ಪಡೆದುಕೊಂಡಿಲ್ಲ, ಅಕ್ರಮ ಸವಳು ಗಣಿಗಾರಿಕೆಗೆ ನಡೆಯುತ್ತಿರುವುದು ಗಮನಕ್ಕಿಲ್ಲ ಎಂದರು.
- ಘಮಾವತಿ ರಾಠೋಡ, ಗ್ರೇಡ್-1 ತಹಸೀಲ್ದಾರ್ ಕಾಳಗಿಅಕ್ರಮ ಸವಳು ಗಣಿಗಾರಿಕೆ ವಿರುದ್ಧ ಸತತ ಎರಡು ವರ್ಷಗಳಿಂದ ಹೋರಾಟ ಮಾಡುತ್ತಿದ್ದೆನೆ, ಜಿಲ್ಲಾಧಿಕಾರಿ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ತಹಸೀಲ್ದಾರ್ ಗಮನಕ್ಕೂ ತಂದಿದ್ದೆನೆ. ಆದರೆ ಕಡಿವಾಣ ಹಾಕಬೇಕಾದ ಅಧಿಕಾರಿಗಳೇ ಹಣ ಪಡೆದು ಅಕ್ರಮ ಸವಳು ಗಣಿಗಾರಿಕೆಗೆ ಸಾಥ್ ನೀಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಗಮನಿಸಿ ಅಕ್ರಮ ಸವಳು ಗಣಿಗಾರಿಕೆ ಬಂದ್ ಮಾಡಿಸದಿದ್ದರೆ ಬೃಹತ್ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.