ಸಮೀಪದ ಕಣವಿ-ಹೊಸೂರ ಗ್ರಾಮದ ವ್ಯಾಪ್ತಿಯ ಗುಡ್ಡದಲ್ಲಿ ಕಳೆದ ಕೆಲವು ದಿನಗಳಿಂದ ಅಕ್ರಮವಾಗಿ ಮಣ್ಣು ಅಗೆದು ಸಾಗಾಟ ಮಾಡಲಾಗುತ್ತಿದೆ.
ಮುಳಗುಂದ: ಸಮೀಪದ ಕಣವಿ-ಹೊಸೂರ ಗ್ರಾಮದ ವ್ಯಾಪ್ತಿಯ ಗುಡ್ಡದಲ್ಲಿ ಕಳೆದ ಕೆಲವು ದಿನಗಳಿಂದ ಅಕ್ರಮವಾಗಿ ಮಣ್ಣು ಅಗೆದು ಸಾಗಾಟ ಮಾಡಲಾಗುತ್ತಿದೆ.
ಸರ್ವೇ ನಂ. 21 ರಲ್ಲಿ ಹಿಟ್ಯಾಚಿ ಯಂತ್ರ ಬಳಸಿ ಗುಡ್ಡವನ್ನು ಅಗೆದು, ಟಿಪ್ಪರ್ ವಾಹನಗಳಲ್ಲಿ ಮಣ್ಣು ಸಾಗಿಸಲಾಗುತ್ತಿದೆ. ಈ ಅಕ್ರಮ ಚಟುವಟಿಕೆಯಿಂದ ಸರ್ಕಾರಿ ಆಸ್ತಿಗೆ ಹಾನಿಯಾಗುತ್ತಿದೆ. ಪರಿಸರ ಸಮತೋಲನಕ್ಕೂ ಧಕ್ಕೆಯಾಗುತ್ತಿದೆ. ಸಣ್ಣಪುಟ್ಟ ಗಿಡಗಳನ್ನು ತೆಗದುಹಾಕಿ ಮಣ್ಣು ಅಗೆಯಲಾಗಿದೆ. ಇದರ ಪರಿಣಾಮ ಗುಂಡಿಗಳು ಸೃಷ್ಟಿಯಾಗಿವೆ.
ಅಕ್ರಮ ಮಣ್ಣು ಸಾಗಾಟ ನಡೆಸುತ್ತಿರುವ ಟಿಪ್ಪರ್ ವಾಹನಗಳು ಗ್ರಾಮದ ರಸ್ತೆಗಳಲ್ಲಿ ನಿರಂತರವಾಗಿ ಸಂಚರಿಸುತ್ತಿರುವುದರಿಂದ ರಸ್ತೆ ಹದಗೆಟ್ಟಿದ್ದು, ಧೂಳಿನಿಂದ ಸಾರ್ವಜನಿಕರು, ಶಾಲಾ ಮಕ್ಕಳು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ತೋಟಗಾರಿಕೆಯ ಹೂ, ಹಣ್ಣು, ತರಕಾರಿ ಬೆಳೆಗಳಿಗೂ ಧೂಳಿನ ದುಷ್ಪರಿಣಾಮ ತಟ್ಟಿದೆ ಎಂದು ರೈತರು ದೂರಿದರು.
ರಸ್ತೆ ಬಿರುಕು
ಕೆಲವೆಡೆ ರಸ್ತೆ ಬಿರುಕು ಬಿಟ್ಟಿದ್ದು, ಅಪಘಾತ ಸಂಭವಿಸುವ ಅಪಾಯ ಎದುರಾಗಿದೆ. ಗುಡ್ಡದ ಮೇಲೆ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆ ನೂತನ ಕಟ್ಟಡವಿದ್ದು, ಪ್ರಸಕ್ತ ವರ್ಷ ಶಾಲೆಯನ್ನು ಇಲ್ಲಿಗೆ ಸ್ಥಳಾಂತರಿಸಲಾಗಿದೆ. ವಸತಿ ಶಾಲೆಗೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದೆ.
ಸ್ಥಳೀಯರು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಇದುವರೆಗೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎನ್ನುವುದು ಸ್ಥಳೀಯರ ದೂರು.
ಹೆಚ್ಚಿದ ಮಣ್ಣಿನ ಬೇಡಿಕೆ
ಮುಳಗುಂದ, ಹರ್ತಿ ಭಾಗದಲ್ಲಿ ಗಾಳಿ ವಿದ್ಯುತ್ ಯಂತ್ರ ಅಳವಡಿಕೆ ಶುರುವಾದ ನಂತರ ಮಣ್ಣಿಗೆ ಬೇಡಿಕೆ ಹೆಚ್ಚಾಗಿದ್ದು, ಸರ್ಕಾರಕ್ಕೆ ರಾಜಧನ ಭರಿಸದೇ ಅಕ್ರಮವಾಗಿ ಗುಡ್ಡ ಅಗೆಯುವ ಮಣ್ಣು ಮಾಫಿಯಾದವರಿಗೆ ಕಣವಿ ಗುಡ್ಡ ವರವಾಗಿ ಪರಿಣಮಿಸಿದೆ.
ಕಣವಿ-ಹೊಸೂರ ಗುಡ್ಡದಲ್ಲಿ ಅಕ್ರಮ ಮಣ್ಣು ಅಗೆಯುತ್ತಿರುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.