ಶೋಷಿತರ ನಡುವಿನ ಅಸಹನೆ ಹೋಗಬೇಕು

KannadaprabhaNewsNetwork |  
Published : Oct 06, 2024, 01:19 AM IST
ಕರ್ನಾಟಕ ದಸಂಸ ಅಂಬೇಡ್ಕರ್ ವಾದ ವತಿಯಿಂದ ರಾಜ್ಯ ಸರ್ವ ಸದಸ್ಯರ ಮಹಾ ಅಧಿವೇಶನ  | Kannada Prabha

ಸಾರಾಂಶ

ತುಮಕೂರು: ದಲಿತ ಸಂಘರ್ಷ ಸಮಿತಿ ಹುಟ್ಟಿದ ಕಾಲಕ್ಕು,ಇಂದಿಗೂ ಅಜಗಜಾಂತರ ವ್ಯತ್ಯಾಸವಿದ್ದು, ಶೋಷಿತರ ನಡುವೆ ಇರುವ ಅಸಹನೆಯನ್ನು ಹೋಗಲಾಡಿಸಿ, ಸೌಹಾರ್ದತೆ ಮೂಡಿಸದಿದ್ದರೆ, ಸಮ ಸಮಾಜ ನಿರ್ಮಾಣದ ದಲಿತ ಸಂಘರ್ಷ ಸಮಿತಿಯ ಕನಸು ನನಸಾಗಲು ಸಾಧ್ಯವಿಲ್ಲ ಎಂದು ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ತುಮಕೂರು: ದಲಿತ ಸಂಘರ್ಷ ಸಮಿತಿ ಹುಟ್ಟಿದ ಕಾಲಕ್ಕು,ಇಂದಿಗೂ ಅಜಗಜಾಂತರ ವ್ಯತ್ಯಾಸವಿದ್ದು, ಶೋಷಿತರ ನಡುವೆ ಇರುವ ಅಸಹನೆಯನ್ನು ಹೋಗಲಾಡಿಸಿ, ಸೌಹಾರ್ದತೆ ಮೂಡಿಸದಿದ್ದರೆ, ಸಮ ಸಮಾಜ ನಿರ್ಮಾಣದ ದಲಿತ ಸಂಘರ್ಷ ಸಮಿತಿಯ ಕನಸು ನನಸಾಗಲು ಸಾಧ್ಯವಿಲ್ಲ ಎಂದು ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ನಗರದ ಎಂಪ್ರೆಸ್ ಕೆಪಿಎಸ್ ಶಾಲಾ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ವಾದ ವತಿಯಿಂದ ಆಯೋಜಿಸಿದ್ದ ರಾಜ್ಯ ಸರ್ವ ಸದಸ್ಯರ ಮಹಾ ಅಧಿವೇಶನ ಉದ್ಘಾಟಿಸಿ ಮಾತನಾಡಿ, ಎಲ್ಲರನ್ನು ಒಳಗೊಂಡಾಗ ಮಾತ್ರ ಸಮಾನತೆಯ ರಥ ಮುಂದೆ ಸಾಗಲು ಸಾಧ್ಯ. ಇದೇ ಅಂಬೇಡ್ಕರ್ ಅವರ ಆಶಯವೂ ಆಗಿತ್ತು. ಮೀಸಲಾತಿಯನ್ನು ಕೆಲವೇ ಜಾತಿಗಳ ಕಬಳಿಸುತ್ತಿವೆ. ಪರಿಶಿಷ್ಟರ 101 ಜಾತಿಗಳಲ್ಲಿ 101ನೇ ಜಾತಿಗೂ ಅದರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಲಭ್ಯವಾಗಬೇಕು. ಹಾಗೆಯೇ ಹಿಂದುಳಿದ ವರ್ಗ, ಪರಿಶಿಷ್ಟ ಪಂಗಡಗಳಲ್ಲಿಯೂ ಮೀಸಲಾತಿ ಅಲ್ಲಿನ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಇದನ್ನೇ ಅಂಬೇಡ್ಕರ್ ಎಲ್ಲರನ್ನು ಒಳಗೊಂಡ ಅಭಿವೃದ್ದಿ ಎಂದು ಪ್ರತಿಪಾದಿಸಿದ್ದರು ಎಂದು ಹೇಳಿದರು.

ದಸಂಸ ಹುಟ್ಟಿದ 1976ರ 20ನೇ ಶತಮಾನದಲ್ಲಿ ಸಾಮಾಜಿಕ ಸಮಸ್ಯೆಗಳಾದ ಅಸ್ಪೃಷ್ಯತೆ, ಮಹಿಳಾ ದೌರ್ಜನ್ಯ, ವರದಕ್ಷಿಣೆ ಇಂತಹ ಸಾಮಾಜಿಕ ಪಿಡುಗುಗಳ ವಿರುದ್ದ ಹೋರಾಟ ಮಾಡಬೇಕಾಗಿತ್ತು. ಆದರೆ 21 ಶತಮಾನದಲ್ಲಿ ಜಾಗತೀಕರಣದ ಫಲವಾಗಿ ಅರ್ಥಿಕ ಸುಧಾರಣೆಯತ್ತ ಹೋರಾಟ ರೂಪಿಸಬೇಕಾಗಿದೆ. ಬಂಡವಾಳಶಾಹಿಗಳ ವಿರುದ್ದ ಸಂಘಟಿತರಾಗಿ ಹೋರಾಟ ರೂಪಿಸಬೇಕಾಗಿದೆ. ಮಾನವೀಯತೆಯನ್ನು ನುಂಗಿ ಹಾಕಿ, ಮತೀಯತೆ, ಮಠೀಯತೆ ವಿರುದ್ದ ಹೋರಾಡಬೇಕಿದೆ. ಜಾತಿ ವಿನಾಶದ ಪರವಾಗಿ ಹೋರಾಡುತ್ತಿದ್ದ ಜನರು, ಜಾತೀಯತೆಯ ವಿರುದ್ದ ಗಟ್ಟಿಯಾದ ಹೆಜ್ಜೆ ಇಡಬೇಕಾದ ಅನಿವಾರ್ಯತೆ ಇದೆ. 20ನೇ ಶತಮಾನ ಸಂಘಟನೆಯ ಯುಗವಾದರೆ, 21ನೇ ಶತಮಾನ ವಿಘಟನೆಯ ಯುಗವಾಗಿದೆ. ಬಂಡವಾಳಶಾಹಿ, ಪುರೋಹಿತಶಾಹಿ ವಿರುದ್ದ ಹೋರಾಟ ನಡೆಸುವುದರ ಜತೆಗೆ ಸಮೂಹ ಪ್ರಜ್ಞೆಯಿಂದ ವ್ಯಕ್ತಿ ಪ್ರಜ್ಞೆಯತ್ತ ಜಾರುತ್ತಿರುವ ಯುವ ಸಮುದಾಯವನ್ನು ತಡೆಯುವ ಪ್ರಯತ್ನಗಳ ನಡೆಯಬೇಕಾಗಿದೆ ಎಂದು ನುಡಿದರು.

ಪ್ರಜಾಪ್ರಭುತ್ವದ ಮೇಲೆ ಸರ್ವಾಧಿಕಾರ ಸವಾರಿ ಮಾಡುತ್ತಿರುವ ಈ ಕಾಲದಲ್ಲಿ ಎಲ್ಲರನ್ನು ಒಳಗೊಂಡ ಸಂಘಟನೆ ಕಟ್ಟುವುದು ನಿಜಕ್ಕೂ ಸವಾಲಿನ ಕೆಲಸ ಎಂದರು.

ಗಾಂಧಿ ಮತ್ತು ಅಂಬೇಡ್ಕರ್ ಎರಡು ನಮ್ಮ ಮುಂದಿರುವ ಪ್ರಜ್ಞೆಗಳು. ಗಾಂಧಿ ಸೂಟು, ಬೂಟು ಹಾಕುವ ಸಮುದಾಯದಲ್ಲಿ ಹುಟ್ಟಿ, ತನ್ನಂತಹವರಿಂದ ಅನ್ಯಾಯಕ್ಕೆ ಒಳಗಾದ ಜನರ ಜೊತೆ ಅರೆ ಬೆತ್ತಲೆಯಾಗಿ ನಿಂತು ಪಾಪ ಕಳೆದುಕೊಂಡರೆ, ಅರೆಬೆತ್ತಲೆ ಸಮುದಾಯದಲ್ಲಿ ಹುಟ್ಟಿದ ಅಂಬೇಡ್ಕರ್ ಸೂಟು ಬೂಟು ಹಾಕುವ ಮೂಲಕ ಸಮುದಾಯದ ಜಾಗೃತ ಪ್ರಜ್ಞೆಯ ಪ್ರತೀಕವಾಗಿ ಕಂಗೊಳಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.

ಬುದ್ದ, ಬಸವಣ್ಣ, ನಾಲ್ಮುಡಿ ಕೃಷ್ಣರಾಜ ಒಡೆಯರ್, ಕುದ್ಮಲ್ ರಂಗರಾವ್ ಇವರು ಗಾಂಧಿಯ ಸಾಲಿಗೆ ಸೇರುತ್ತಾರೆ. ಸಾಮಾಜಿಕ ಶ್ರೇಣೀಕರಣ ಹಾಗೂ ಸಂಪತ್ತಿನ ಕ್ರೋಢೀಕರಣದ ವಿರುದ್ದ ಹೋರಾಡಲು ದಸಂಸ ತನ್ನಲ್ಲಿನ ದಲಿತ ಪ್ರಜ್ಞೆಯನ್ನು ಮರು ವ್ಯಾಖ್ಯಾನಿಸಿಕೊಳ್ಳಬೇಕಿದೆ ಎಂದರು.

ದಲಿತ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಅವರ ಪತ್ನಿ ಇಂದಿರಾ ಕೃಷ್ಣಪ್ಪ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಹಿರಿಯರಾದ ಕೆ.ದೊರೆರಾಜು, ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಚಾಲಕ ರಾಮಚಂದ್ರಪ್ಪ, ಕುಂದೂರು ತಿಮ್ಮಯ್ಯ, ಡಾ.ಬಸವರಾಜು, ವಿರೂಪಾಕ್ಷ ಡ್ಯಾಗೇರಹಳ್ಳಿ, ,ಮುರುಳಿ ಕುಂದೂರು, ಚೇಳೂರು ಶಿವನಂಜಪ್ಪ, ಗಾನ ಅಶ್ವಥ್, ಮಲ್ಲೇಶ್ ಅಂಬುಗ, ನಾಗಣ್ಣ ಬಡಿಗೇರ, ಅರ್ಜುನ್ ಗೊಬ್ಬುರ್, ತಾಯಪ್ಪ, ನಿರ್ಮಲ, ರವೀಂದ್ರ ಹೊಸಕೋಟೆ, ಚಂದ್ರಪ್ಪ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ