ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿಯ ಬೆಳವಣಿಗೆ ಸಹಿಸದ ಕೆಲ ಪಟ್ಟಬದ್ಧ ಹಿತಾಸಕ್ತಿಗಳು ಹೆಸರು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಸಹಕಾರಿಯ ಎಲ್ಲ ವ್ಯವಹಾರಗಳು ಕಾನೂನುಬದ್ಧವಾಗಿದ್ದು, ಠೇವಣಿದಾರರು ಆತಂಕ ಪಡುವ ಅವಶ್ಯಕತೆ ಇಲ್ಲ. ಠೇವಣಿಗಿಂತ ಹೆಚ್ಚಿನ ಸಾಲ ನೀಡಲಾಗಿದೆ. ಸಹಕಾರಿ ನೀಡಿದ ಸಾಲಗಳಿಗೆ ನಿಯಮಾವಳಿ ಪ್ರಕಾರ ಸಾಕಷ್ಟು ಮೌಲ್ಯದ ಆಸ್ತಿ ಹೊಂದಿದೆ ಎಂದು ಸಂಯುಕ್ತ ಸೌಹಾರ್ದ ಸಹಕಾರಿ ಬೆಂಗಳೂರು ನಿರ್ದೇಶಕ ಜಗದೀಶ ಕವಟಗಿಮಠ ಹೇಳಿದರು.ಪಟ್ಟಣದ ಹಳೇ ಪ್ರೇರಣಾ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಠೇವಣಿದಾರರ ಸಭೆಯಲ್ಲಿ ಮಾತನಾಡಿದರು. ಠೇವಣಿದಾರರ ಪ್ರಶ್ನೆಗಳಿಗೆ ಉತ್ತರಿಸಿ ಸದಸ್ಯರಲ್ಲಿಯ ಆತಂಕ ಪರಿಹರಿಸಿದ ಅವರು, ಕೆಎಲ್‌ಇ ಸಂಸ್ಥೆಯ ಚೇರಮನ್ ಡಾ.ಪ್ರಭಾಕರೆ ಕೋರೆ ಅವರು ಸಂಸ್ಥೆಯ ಬೆಳವಣಿಗೆಗೆ ಬೆನ್ನೆಲುಬಾಗಿ ನಿಲ್ಲುವ ಭರವಸೆ ನೀಡಿದ್ದಾರೆ. ಸಹಕಾರಿ ಜೊತೆಗೆ ತಮ್ಮ ವ್ಯವಹಾರವನ್ನು ಮೊದಲಿನಂತೆ ಮುಂದುವರಿಸಲು ಯಾವುದೇ ಹಿಂಜರಿಕೆ ಮಾಡಬೇಡಿ. ಠೇವು ಮುದ್ದತ್ ಮೀರುವ ಮೊದಲೇ ಹಣ ಹಿಂಪಡೆಯಬೇಡಿ. ನಿಮ್ಮ ಹಣ ಸುರಕ್ಷಿತವಾಗಿದೆ ಎಂದು ಭರಸವೆ ನೀಡಿದರು.
ಸಹಕಾರಿ ಸಂಸ್ಥಾಪಕ ಅಧ್ಯಕ್ಷ ಡಾ.ವಿ.ಎಸ್. ಸಾಧುನವರ ಮಾತನಾಡಿ, ಸಹಕಾರಿಯು 32 ವರ್ಷಗಳಿಂದ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಠೇವಣಿದಾರರೇ ಸಹಕಾರಿಯ ನಿಜವಾದ ಮಾಲೀಕರಾಗಿದ್ದು, ಈ ಸಂಸ್ಥೆಯನ್ನು ಬೆಳೆಸುವ ಜವಾಬ್ದಾರಿ ಸದಸ್ಯರು, ಠೇವಣಿದಾರದ್ದಾಗಿದೆ. ಇಲ್ಲಿಯವರೆಗಿನ ಬೆಳವಣಿಗೆಗೆ ಅವರ ಸಹಕಾರವೇ ಮುಖ್ಯ ಕಾರಣವಾಗಿದೆ. ಠೇವಣಿದಾರರ ಹಣವು ಸುರಕ್ಷಿತವಾಗಿದ್ದು, ಅವರ ಹಿತರಕ್ಷಣೆಗೆ ಬದ್ಧ ಇರುವುದಾಗಿ ತಿಳಿಸಿದರು.ಸಂಯುಕ್ತ ಸಹಕಾರಿಯ ಟಾಸ್ಕ್ ಫೋರ್ಸ್ ವಿಭಾಗದ ಶೋಭಾ ಕಿತ್ತೂರ ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿಯ ಬೆಳವಣಿಗೆಯ ಬಗ್ಗೆ ಹೇಳುತ್ತ ಸಹಕಾರಿಯು ₹810 ಕೋಟಿಯಷ್ಟು ಠೇವಣಿ ಹೊಂದಿದೆ ಮತ್ತು ಸದಸ್ಯರಿಂದ ₹963 ಕೋಟಿಗಳ ಬರುವ ಸಾಲಗಳನ್ನು ಹೊಂದಿ ಸುಸ್ಥಿತಿಯಲ್ಲಿದೆ ಎಂದರು. ಸಹಕಾರಿಯ ಮುಖ್ಯಕಾರ್ಯನಿರ್ವಾಹಕ ಈರಪ್ಪ ನಾನನ್ನವರ ಸಹಕಾರಿ ಬೆಳವಣಿಗೆಯ ಕುರಿತು ವಿವರಿಸಿದರು.
ಸಹಕಾರಿಯ ಉಪಾಧ್ಯಕ್ಷ ಅರವಿಂದ ಕಲಕುಟಕರ, ನಿರ್ದೇಶಕರಾದ ಎಂ.ಜಿ. ಪಾಟೀಲ, ಬಾಬು ಹರಕುಣಿ, ಕಿರಣ ಸಾಧುನವರ, ಶಿವಪುತ್ರಪ್ಪ ತಟವಟಿ, ಧೀರಜ ಸಾಧುನವರ, ರಾಜು ರಾಮನ್ನವರ, ರಾಜು ಹೊಸಮನಿ, ರಾಮನ್ನ ಜಕ್ಕನ್ನವರ ಹಾಗೂ ಸಿಬ್ಬಂದಿ ಮತ್ತು ಸಾವಿರಾರು ಠೇವಣಿದಾರರು ಇದರು.ಆಡಳಿತ ಮಂಡಳಿಗೆ ಠೇವಣಿದಾರರ ಅಭಯ:
ಕಿತ್ತೂರು ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿಯ ಬೆಳವಣಿಗೆ ಸಹಿಸದ ಕೆಲ ಪಟ್ಟಬದ್ಧ ಹಿತಾಸಕ್ತಿಗಳು ಹೆಸರು ಹಾಳು ಮಾಡಲು ಪ್ರಯತ್ನಿಸುತ್ತಿದ್ದು, ಇದಕ್ಕೆ ನಾವು ಮನ್ನಣೆ ನೀಡದೆ ಸಹಕಾರಿಯೊಂದಿಗೆ ನಮ್ಮ ವ್ಯವಹಾರ ಮುಂದುವರೆಸುತ್ತೇವೆ. ಎಲ್ಲರೂ ಸೇರಿ ಸಹಕಾರಿಯನ್ನು ಅಭಿವೃದ್ದಿಪಡಿಸೋಣ ಎಂದು ಠೇವಣಿದಾರರು ಆಡಳಿತ ಮಂಡಳಿಗೆ ಭರವಸೆ ನೀಡಿದರು.ನಮ್ಮ ಠೇವಣಿ ಸುರಕ್ಷಿತವಾಗಿದೆ ಎಂಬುದು ನಮಗೂ ತಿಳಿದಿದೆ. ಸಹಕಾರಿಯ ಹೆಸರು ಹಾಳು ಮಾಡಲು ಪ್ರಯತ್ನಿಸಿದವರ ಮೇಲೆ ಕಾನುನೂ ಕ್ರಮ ಜರುಗಿಸಿ ಎಂದು ಆಗ್ರಹಿಸಿದರು.