ಹೊಸಕೋಟೆ: ಉಚಿತ ಆರೋಗ್ಯ ತಪಾಸಣಾ ಶಿಬಿರಗಳಿಂದ ಬಡ ಜನರು ಆರೋಗ್ಯ ಸಮಸ್ಯೆಗಳ ಸುಧಾರಣೆಗೆ ಉತ್ತಮ ಅವಕಾಶ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೋಭಾರಾಣಿ ಹೇಳಿದರು
ಹೊಸಕೋಟೆ: ಉಚಿತ ಆರೋಗ್ಯ ತಪಾಸಣಾ ಶಿಬಿರಗಳಿಂದ ಬಡ ಜನರು ಆರೋಗ್ಯ ಸಮಸ್ಯೆಗಳ ಸುಧಾರಣೆಗೆ ಉತ್ತಮ ಅವಕಾಶ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೋಭಾರಾಣಿ ಹೇಳಿದರು.
ನಂದಗುಡಿ ಹೋಬಳಿ ನೆಲವಾಗಲು ಗ್ರಾಪಂ ಆವರಣದಲ್ಲಿ ಎಚ್.ಕ್ರಾಸ್‌ನ ಪುರ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಸಾಮಾನ್ಯ ಜನರು ದೂರದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲಾಗದ ಪರಿಸ್ಥಿತಿಯಲ್ಲಿದ್ದು, ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರಗಳಲಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು. ಇಲ್ಲವಾದರೆ ದುಡಿದ ಹಣವನ್ನು ಆಸ್ಪತ್ರೆಗೆ ಖರ್ಚು ಮಾಡಬೇಕಾಗುತ್ತದೆ. ಆದ್ದರಿಂದ ರೋಗದ ಲಕ್ಷಣ ಕಾಣುವ ಮುನ್ನವೇ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರು ನೀಡುವ ಸಲಹೆ ಪಾಲಿಸಬೇಕು ಎಂದರು.
ಇಂದಿನ ಯಾಂತ್ರಿಕ ದಿನಗಳಲ್ಲಿ ನಮ್ಮೆಲ್ಲರ ಚಟುವಟಿಕೆಗಳು ಹಾಗೂ ಜೀವನ ಶೈಲಿ ಮುಂತಾದ ಕಾರಣಗಳಿಂದ ಪರಿಸರ ನಾಶ ಮಾಡಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೇವೆ. ಇದನ್ನು ತಡೆಗಟ್ಟಬೇಕಾದರೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡಿಕೊಂಡು ಗುಣಮಟ್ಟದ ಜೀವನವನ್ನು ನಿರ್ವಹಣೆ ಮಾಡಬೇಕೆಂದು ಸದೃಢ ರಾಷ್ಟ್ರ ನಿರ್ಮಾಣವಾಗಬೇಕಾದರೆ ಹಾಗೂ ದೇಶ ಪ್ರಗತಿ ಸಾಧಿಸಲು ಅಲ್ಲಿನ ಜನರ ಜೀವನಮಟ್ಟ ಕಾರಣವಾಗುತ್ತದೆ. ಜನರ ಜೀವನಮಟ್ಟ ಸುಧಾರಣೆಗೊಳಿಸಲು ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಉಪಯುಕ್ತ ಎಂದು ಹೆಳಿದರು.
ವೈದ್ಯಾಧಿಕಾರಿ ಡಾ.ವಿಜಯಕಾಂತ್ ಮಾತನಾಡಿ, ಹಿಂದಿನ ದಿನಗಳಲ್ಲಿ ಹಣವಂತರು ಮಾತ್ರ ಆರೋಗ್ಯ ಹದಗೆಟ್ಟಾಗ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದರು. ಪ್ರಸ್ತುತ ದಿನಗಳಲ್ಲಿ ದೊಡ್ಡ ದೊಡ್ಡ ಆಸ್ಪತ್ರೆಯವರೇ ಗ್ರಾಮೀಣ ಪ್ರದೇಶಕ್ಕೆ ಬಂದು ಆರೋಗ್ಯ ಶಿಬಿರಗಳನ್ನು ಮಾಡುತ್ತಿರುವುದರಿಂದ ಈ ಭಾಗದ ರೈತರು, ಬಡವರಿಗೆ ಕೂಲಿ ಕಾರ್ಮಿಕರಿಗೆ ಆರೋಗ್ಯ ಸುಧಾರಿಸಿಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಶಿಬಿರದಲ್ಲಿ ಸುಮಾರು 170ಕ್ಕೂ ಹೆಚ್ಚು ಜನರಿಗೆ ಸಾಮಾನ್ಯ ತಪಾಸಣೆ ಮಾಡಲಾಯಿತು. ನುರಿತ ತಜ್ಞರ ಜೊತೆ ಸಮಾಲೋಚನೆ, ಮಧುಮಹ ತಪಾಸಣೆ ಮತ್ತು ನುರಿತ ತಜ್ಞರ ಜೊತೆ ಆಂತರಿಕ ಔಷಧ ಅರ್ಥಾಪೆಟಿಕ್ಸ್, ಬೆನ್ನುಮೂಳೆ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಿಂದ ಸಾಮಾನ್ಯ ಶಸ್ತ್ರ ಚಿಕಿತ್ಸೆ ತಪಾಸಣೆಗಳು ನಡೆಯಿತು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಡಾ.ಶಿವಕುಮಾರ್. ಡಾ.ರಾಘವೇಂದ್ರ ಡಾ.ಪ್ರಜ್ವಲ್, ಡಾ.ವಂದನ, ಶಿಬಿರ ಸಂಯೋಜಕರಾದ ಸುಧೀರ್, ನವೀನ್, ಸುಜನ್ ಹರ್ಷಿತ, ಜೀವನ್ ನರ್ಸಿಂಗ್ ಸಿಬ್ಬಂದಿಗಳಾದ ನಂದಿನಿ, ಮಾಲಿನಿ, ಭವ್ಯ, ಗ್ರಾಪಂ ಕರ ವಸೂಲಿಗಾರ ರವಿಚಂದ್ರ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.
ಫೋಟೋ: 28 ಹೆಚ್‌ಎಸ್‌ಕೆ 3
ಹೊಸಕೋಟೆ ತಾಲೂಕಿನ ನೆಲವಾಗಲು ಗ್ರಾಮ ಪಂಚಾಯತಿ ಆವರಣದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಪಿಡಿಒ ಶೋಭಾರಾಣಿ ಚಾಲನೆ ನೀಡಿದರು. ವೈದ್ಯಾಧಿಕಾರಿಗಳಾದ ಡಾ.ವಿಜಯಕಾಂತ್, ಡಾ.ಶಿವಕುಮಾರ್. ಡಾ.ರಾಘವೇಂದ್ರ ಡಾ.ಪ್ರಜ್ವಲ್, ಡಾ.ವಂದನ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.