-ಲಕ್ಯಾ ಗ್ರಾಮದಲ್ಲಿ ನೂತನ ಪಶು ಚಿಕಿತ್ಸಾಲಯ ಉದ್ಘಾಟನೆ
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ 7 ತಿಂಗಳಲ್ಲಿ ಸುಮಾರು 40 ಕೋಟಿ ರು. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕ್ಷೇತ್ರದ ಲಕ್ಯಾ ಹೋಬಳಿ ಒಂದರಲ್ಲೇ ಪ್ರಾರಂಭಿಸಿದ್ದೇವೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ಸೋಮವಾರ ಕ್ಷೇತ್ರದ ಲಕ್ಯಾ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ನೂತನ ಪಶು ಚಿಕಿತ್ಸಾಲಯ ಉದ್ಘಾಟಿಸಿ ಮಾತನಾಡಿದರು.ಬಹಳ ವರ್ಷಗಳ ಕನಸಾಗಿದ್ದ ಪಶು ಆಸ್ಪತ್ರೆ ಇಂದು ನೆರವೇರಿದೆ. ಜಿಲ್ಲೆಗೆ ಮಂಜೂರಾಗಿ ಬಂದಿರುವುದು ಒಂದೇ ಆಸ್ಪತ್ರೆ. ಅದು ಚಿಕ್ಕಮಗಳೂರು ಕ್ಷೇತ್ರದ ಲಕ್ಯಾ ಗ್ರಾಮಕ್ಕೆ ಈ ಹೋಬಳಿ ಜನರು ಕೊಟ್ಟ ಜವಾಬ್ದಾರಿ ಶಾಸಕರಾಗಿ ಶಕ್ತಿ ಕೊಟ್ಟಿದ್ದರಿಂದ ಇದು ಕಾರ್ಯರೂಪಕ್ಕೆ ಬಂದಿದೆ ಎಂದರು.
ಅಧಿಕಾರಕ್ಕೆ ಬಂದ 7 ತಿಂಗಳಲ್ಲಿ ಸರ್ಕಾರ ವಾರ್ಷಿಕ 59 ಸಾವಿರ ಕೋಟಿ ರು. ವೆಚ್ಚದಲ್ಲಿ ಚುನಾವಣಾ ಪೂರ್ವದಲ್ಲಿ ಮತದಾರರಿಗೆ ಕೊಟ್ಟಿದ್ದ 5 ಗ್ಯಾರಂಟಿ ಭರವಸೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಇನ್ನು ಮುಂದೆ ಅಭಿವೃದ್ಧಿ ಕಡೆಗೆ ಗಮನಹರಿಸುತ್ತೇವೆ ಎಂದು ತಿಳಿಸಿದರು.
ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ. ಮೋಹನ್‌ಕುಮಾರ್ ಮಾತನಾಡಿ, ಹೋಬಳಿ ಕೇಂದ್ರ ದಲ್ಲಿ ಇಂದು ಪಶುಚಿಕಿತ್ಸಾ ಆಸ್ಪತ್ರೆ ಉದ್ಘಾಟನೆಗೊಂಡಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಮನವಿ ಮಾಡಿದರು.
ಚಿಕ್ಕಮಗಳೂರಿನ ಲಕ್ಯಾ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪಶು ಚಿಕಿತ್ಸಾಲಯವನ್ನು ಶಾಸಕ ಎಚ್.ಡಿ. ತಮ್ಮಯ್ಯ ಉದ್ಘಾಟಿಸಿದರು.