ಜನರ ಧ್ವನಿಯಾಗಿ ಕನ್ನಡಪ್ರಭ ಕೆಲಸ ಮಾಡುತ್ತಿದೆ: ಡಾ. ಚನ್ನಮಲ್ಲ ಶ್ರೀ

KannadaprabhaNewsNetwork | Published : Jan 2, 2024 2:15 AM

ಸಾರಾಂಶ

ಹೊಸ ವರ್ಷದ ಮೊದಲ ದಿನದ ಪತ್ರಿಕೆ ಬಿಡುಗಡೆ ಹಾಗೂ ಚನ್ನಮಲ್ಲೇಶ್ವರ ಜಾತ್ರೆ, ರಾಮ ಮಂದಿರ ಉದ್ಘಾಟನೆ ಕುರಿತಾದ ಲೇಖನ ಬಿಡುಗಡೆಗೊಳಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚವಡಾಪುರ

ನಾಡಿನ ಹೆಸರಾಂತ ದಿನಪತ್ರಿಕೆಯಾಗಿರುವ ಕನ್ನಡಪ್ರಭ ಪತ್ರಿಕೆ ಜನರ ಧ್ವನಿಯಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಡಾ. ಅಭಿನವ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ಹೇಳಿದರು.

ಅಫಜಲ್ಪುರ ತಾಲೂಕಿನ ಬಡದಾಳ ಗ್ರಾಮದ ಚನ್ನಮಲ್ಲೇಶ್ವರ ಮಠದಲ್ಲಿ ಹೊಸ ವರ್ಷದ ಮೊದಲ ದಿನದ ಪತ್ರಿಕೆ ಬಿಡುಗಡೆ ಹಾಗೂ ಚನ್ನಮಲ್ಲೇಶ್ವರ ಜಾತ್ರೆ, ರಾಮ ಮಂದಿರ ಉದ್ಘಾಟನೆ ಕುರಿತಾದ ಲೇಖನ ಬಿಡುಗಡೆಗೊಳಿಸಿ ಮಾತನಾಡಿದ ಅವರು ಪ್ರತಿಯೊಂದು ವ್ಯವಸ್ಥೆಗಳು ಅಚ್ಚುಕಟ್ಟಾಗಿ, ಜನರಪರವಾಗಿ ನಡೆಯಲು ಮಾಧ್ಯಮಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದರು.

ಮಾಧ್ಯವನ್ನು ಪ್ರಜಾಪ್ರಭುತ್ವದ ನಾಲ್ಕನೇಯ ಅಂಗವಾಗಿಯೂ ನಾವು ನೋಡುತ್ತೇವೆ. ಅದಕ್ಕೆ ತಕ್ಕಂತೆ ಪತ್ರಿಕೆಗಳು ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದ ಅವರು ಸತ್ಯದ ಪರ, ವಾಸ್ತವದ ಪರ, ನೊಂದವರ ಪರ, ರೈತರ, ಶೋಷಿತರ ಪರ ಧ್ವನಿಯಾಗಿ, ಅನ್ಯಾಯಗಳ ವಿರುದ್ದ ಕಹಳೆ ಮೊಳಗಿಸುತ್ತಾ ಜನಮನ ಗೆದ್ದಿರುವ ಕನ್ನಡ ಪ್ರಭ ಪತ್ರಿಕೆ ಸದಾ ಕ್ರೀಯಾಶೀಲವಾಗಿ ಕೆಲಸ ಮಾಡುತ್ತಿದೆ. ನಾಡಿನ ಸಂತರು, ಶರಣರು, ಮಹಾಂತರು, ಮಠ ಮಾನ್ಯಗಳ ಧಾರ್ಮಿಕ ಕ್ಷೇತ್ರಗಳ ಮಹಿಮೆ ಕುರಿತು ಸುದ್ದಿಗಳನ್ನು ಬಿತ್ತರಿಸುವ ಮೂಲಕ ಮಠಾಧೀಶರು, ಮಠಮಾನ್ಯಗಳು ಮಾಡುವ ಸಮಾಜಮುಖಿ ಕೆಲಸಗಳನ್ನು ಗುರುತಿಸಿ ಜನರಿಗೆ ತಲುಪಿಸುವ ಮೂಲಕ ಧಾರ್ಮಿಕತೆಯನ್ನು ಎತ್ತಿಹಿಡಿಯುವ ಕೆಲಸ ಪತ್ರಿಕೆ ಮಾಡುತ್ತಿದೆ. ಅಲ್ಲದೆ ಎಲೆಮರಿಯ ಕಾಯಿಂತೆ ಸಾಧನೆ ಮಾಡಿಕೊಂಡವರನ್ನು ಗುರುತಿಸಿ ಮುಖ್ಯವಾಹಿನಿಗೆ ತರುವ ಮೂಲಕ ಪ್ರೋತ್ಸಾಹ ನೀಡಿ ಸಾಧಕರಿಗೆ ಪ್ರೇರಕ ಶಕ್ತಿಯಯಾಗಿ ಪತ್ರಿಕೆ ಕೆಲಸ ಮಾಡುತ್ತಿದೆ. ಪತ್ರಿಕೆಯ ಏಳಿಗೆ ಇನ್ನಷ್ಟು ಉತ್ತುಂಗಕ್ಕೆ ಏರಲಿ. 2024ರ ಹೊಸ ವರ್ಷ ಎಲ್ಲರಿಗೂ ಹರ್ಷ ತರಲಿ, ಉತ್ತಮ ಮಳೆ ಬೆಳೆಯಾಗಿ ರೈತರು, ದುಡಿಯುವ ವರ್ಗ ಸಂತಸದಲ್ಲಿರುವಂತಾಗಲಿ. ದೇಶದ ಗಡಿ ಕಾಯುವ ಸೈನಿಕರಿಗೆ ಯಾವುದೇ ಕೇಡು ಬಾರದಿರಲಿ ಎಂದು 2024ರ ಶುಭ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ನೀಲೂರಿನ ಬಂಗಾರ ಜಡೆ ಮಲ್ಲಿಕಾರ್ಜುನ ಮಠದ ಶರಣಯ್ಯ ಸ್ವಾಮಿಗಳು, ಚಿಂಚೋಳಿಯ ಗದ್ದುಗೇಶ್ವರ ಮಲ್ಲಿಕಾರ್ಜುನ ಶಿವಾಚಾರ್ಯರು, ಪ್ರಮುಖರಾದ ಶ್ರೀಕಾಂತ ನಿಂಬಾಳ, ಮಲ್ಲಿನಾಥ ಅತನೂರೆ, ರಾಜು ಸಾಣಾಕ, ರಾಜಶೇಖರ ಜಮಾಣಿ, ಗೋರಖನಾಥ ಮಳಗಿ, ಗಿರಿ ಉಡಗಿ, ಸುಭಾಷ ಪೊಲೀಸ್‌ಪಾಟೀಲ, ಗುರು ಹಿರೇಮಠ ಸೇರಿದಂತೆ ಅನೇಕರು ಇದ್ದರು.

Share this article