ಕನ್ನಡಪ್ರಭ ವಾರ್ತೆ ಶಿರಹಟ್ಟಿ
ತಾಲೂಕಿನ ಮಾಗಡಿ ಗ್ರಾಪಂ ವ್ಯಾಪ್ತಿಯ ಹೊಳಲಾಪುರ ಗ್ರಾಮದ ಕೆರೆಯಲ್ಲಿ ವಿಬಿಜಿ-ರಾಮ್‌ಜಿ ಯೋಜನೆಯಡಿ ಕೆರೆ ಪುನಃಶ್ಚೇತನಗೊಳಿಸುವ ಸಮುದಾಯ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಂರಕ್ಷಣೆ ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದಿಂದ ಕೆರೆ ಪುನಶ್ಚೇತನ ಕಾಮಗಾರಿ ಕೈಗೆತ್ತಕೊಳ್ಳಲಾಗಿದೆ ಎಂದರು.
ಗ್ರಾಮದ ಪ್ರಮುಖ ಕೆರೆಯ ಹೂಳು ತೆರವು, ಕೆರೆ ಏರಿ ಬಲಪಡಿಸುವುದು, ನೀರು ಹರಿದುಬರುವ ಕಾಲುವೆಗಳ ಸ್ವಚ್ಛತೆ ಸೇರಿದಂತೆ ಅಗತ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಕೆರೆಯಲ್ಲಿ ಹಲವು ವರ್ಷಗಳಿಂದ ಸಂಗ್ರಹವಾಗಿದ್ದ ಹೂಳು ಹಾಗೂ ತ್ಯಾಜ್ಯ ತೆರವುಗೊಳಿಸುವುದರಿಂದ ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಲು ಅನುಕೂಲವಾಗಲಿದೆ.ಕೆರೆಗಳ ಪುನಃಶ್ಚೇತನದಿಂದ ಮಳೆ ನೀರನ್ನು ಸಂಗ್ರಹಿಸಿ ವ್ಯರ್ಥವಾಗಿ ಹರಿದುಹೋಗುವುದನ್ನು ತಡೆಯಬಹುದಾಗಿದೆ. ಇದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗುವುದರ ಜತೆಗೆ ಬಾವಿ, ಕೊಳವೆಬಾವಿಗಳಲ್ಲಿ ನೀರಿನ ಲಭ್ಯತೆ ಹೆಚ್ಚಲಿದೆ. ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ನೀರಿನ ಸೌಲಭ್ಯ ದೊರೆಯುವ ನಿರೀಕ್ಷೆಯಿದೆ. ಮಳೆ ನೀರು ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಪುನಃಶ್ಚೇತನಗೊಂಡ ಕೆರೆಗಳನ್ನು ಮುಂದಿನ ದಿನಗಳಲ್ಲಿ ಸಂರಕ್ಷಿಸುವುದು ಅತ್ಯಂತ ಅಗತ್ಯ. ಗ್ರಾಮಸ್ಥರು ಕೆರೆಯ ಅಂಗಳದಲ್ಲಿ ತ್ಯಾಜ್ಯ ಹಾಕದಂತೆ ಹಾಗೂ ಅಕ್ರಮ ಒತ್ತುವರಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದರು.