ನಮೂನೆ-6 ಮೂಲಕ ಕೆಲಸದ ಬೇಡಿಕೆ ಸಲ್ಲಿಸಿ: ವೀರಭದ್ರಪ್ಪ

KannadaprabhaNewsNetwork |  
Published : Oct 09, 2026, 02:30 AM IST
ಸಭೆಯಲ್ಲಿ ಡಿಐಇಸಿ ವೀರಭದ್ರಪ್ಪ ಸಜ್ಜನ ಮಾತನಾಡಿದರು. | Kannada Prabha

ಸಾರಾಂಶ

ವಿಬಿಜಿ-ರಾಮ್‌ಜಿ ಯೋಜನೆಯಡಿ ಗ್ರಾಮೀಣ ಕುಟುಂಬಗಳಿಗೆ ದೊರೆಯುವ 125 ದಿನಗಳ ಉದ್ಯೋಗಾವಕಾಶವನ್ನು ಅರ್ಹರು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ರೋಣ

ವಿಬಿಜಿ-ರಾಮ್‌ಜಿ ಯೋಜನೆಯಡಿ ಗ್ರಾಮೀಣ ಕುಟುಂಬಗಳಿಗೆ ದೊರೆಯುವ 125 ದಿನಗಳ ಉದ್ಯೋಗಾವಕಾಶವನ್ನು ಅರ್ಹರು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳಬೇಕು. ಕೈಗೆತ್ತಿಕೊಳ್ಳುವ ಕಾಮಗಾರಿಯಲ್ಲಿ ಅಳತೆಗೆ ತಕ್ಕಂತೆ ಕೂಲಿ ಪಾವತಿಯಾಗಲಿದ್ದು, ಕೆಲಸದ ಅಗತ್ಯವಿರುವವರು ನಮೂನೆ-6 ಸಲ್ಲಿಸಿ ತಮ್ಮ ಬೇಡಿಕೆಯನ್ನು ದಾಖಲಿಸಿಕೊಳ್ಳಬೇಕು ಎಂದು ಡಿಐಇಸಿ ವೀರಭದ್ರಪ್ಪ ಸಜ್ಜನ ಹೇಳಿದರು.

ತಾಲೂಕಿನ ಯಾವಗಲ್ ಗ್ರಾಪಂ ವ್ಯಾಪ್ತಿಯಲ್ಲಿ ವಿಬಿಜಿ-ರಾಮ್‌ಜಿ ಯೋಜನೆಯಡಿ ನಡೆಯುತ್ತಿರುವ ಕೆರೆ ಪುನಶ್ಚೇತನ ಕಾಮಗಾರಿಯ ಸ್ಥಳದಲ್ಲಿ ಆಯೋಜಿಸಿದ್ದ ಐಇಸಿ ಸಭೆಯಲ್ಲಿ ಮಾತನಾಡಿದರು.

ಯೋಜನೆಯಡಿ ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸುವುದರ ಜತೆಗೆ ಗ್ರಾಮದ ಅಗತ್ಯಕ್ಕೆ ಅನುಗುಣವಾಗಿ ಕೆರೆ ಪುನಃಶ್ಚೇತನ, ನೀರು ಸಂರಕ್ಷಣೆ ಹಾಗೂ ಸಾರ್ವಜನಿಕ ಬಳಕೆಯ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇಂತಹ ಕಾಮಗಾರಿಗಳಲ್ಲಿ ಸ್ಥಳೀಯ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಉದ್ಯೋಗದ ಅವಕಾಶವನ್ನು ಬಳಸಿಕೊಳ್ಳಬೇಕು ಎಂದರು.

ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರಿಗೆ ಯೋಜನೆಯ ನಿಯಮಗಳು, ಕೆಲಸದ ಬೇಡಿಕೆ ಸಲ್ಲಿಸುವ ವಿಧಾನ, ಹಾಜರಾತಿ, ಕೂಲಿ ಪಾವತಿ ಸೇರಿ ವಿವಿಧ ಅಂಶಗಳ ಕುರಿತು ಮಾಹಿತಿ ನೀಡಲಾಯಿತು. ಕಾರ್ಮಿಕರು ನಿರ್ವಹಿಸುವ ಕೆಲಸದ ಪ್ರಮಾಣಕ್ಕೆ ಅನುಗುಣವಾಗಿ ಅಳತೆ ಕೈಗೊಂಡು ಅದರ ಆಧಾರದ ಮೇಲೆ ಕೂಲಿ ಪಾವತಿಸಲಾಗುತ್ತದೆ. ಹೀಗಾಗಿ ಕಾಮಗಾರಿಯ ವೇಳೆ ನಿಗದಿತ ಅಳತೆಯಂತೆ ಕೆಲಸ ನಿರ್ವಹಿಸುವಂತೆ ತಿಳಿಸಲಾಯಿತು.

ಗ್ರಾಪಂ ಅಭಿವೃದ್ಧಿ ಅಧಿಕಾರಿ ಐ.ಎಫ್. ಬೊದ್ಲೆಖಾನ ಮಾತಾನಾಡಿ, ಕೆಲಸದ ಅವಶ್ಯಕತೆ ಇರುವ ಕುಟುಂಬಗಳು ಗ್ರಾಮ ಪಂಚಾಯಿತಿಗೆ ನಮೂನೆ-6 ಸಲ್ಲಿಸುವ ಮೂಲಕ ಉದ್ಯೋಗದ ಬೇಡಿಕೆ ಇಡಬೇಕು. ಕೇವಲ ಮೌಖಿಕವಾಗಿ ಕೆಲಸ ಕೇಳುವುದಕ್ಕಿಂತ ಅಧಿಕೃತವಾಗಿ ನಮೂನೆ-6 ಸಲ್ಲಿಸಿ ಬೇಡಿಕೆ ದಾಖಲಿಸಿಕೊಳ್ಳುವುದರಿಂದ ಉದ್ಯೋಗ ಕಲ್ಪಿಸುವ ಪ್ರಕ್ರಿಯೆಗೆ ಅನುಕೂಲವಾಗಲಿದೆ ಎಂದರು.

ಕೆರೆ ಪುನಃಶ್ಚೇತನ ಕಾಮಗಾರಿಯಿಂದ ಕಾರ್ಮಿಕರಿಗೆ ಉದ್ಯೋಗ ದೊರೆಯುವುದರ ಜತೆಗೆ ಗ್ರಾಮದ ಪ್ರಮುಖ ಜಲಮೂಲ ಅಭಿವೃದ್ಧಿಯಾಗಲಿದೆ. ಮಳೆಗಾಲದಲ್ಲಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೆಚ್ಚಿಸುವುದು, ಅಂತರ್ಜಲ ಮಟ್ಟ ಸುಧಾರಿಸುವುದು ಹಾಗೂ ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳಿಗೆ ನೀರಿನ ಲಭ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಇಂತಹ ಕಾಮಗಾರಿಗಳು ಮಹತ್ವದ್ದಾಗಿವೆ ಎಂದು ತಿಳಿಸಿದರು.

ಕಾರ್ಮಿಕರು ಹಾಗೂ ಗ್ರಾಮಸ್ಥರು ಕೇಳಿದ ಪ್ರಶ್ನೆಗಳಿಗೆ ಸಿಬ್ಬಂದಿ ಮಾಹಿತಿ ನೀಡಿದರು. ಯೋಜನೆಯಡಿ ದೊರೆಯುವ ಅವಕಾಶಗಳು ಹಾಗೂ ತಮ್ಮ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ತಿಳಿಸಲಾಯಿತು.

ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ತಾಲೂಕ ಐಇಸಿ, ಕೂಲಿ ಕಾರ್ಮಿಕರು ಹಾಗೂ ಗ್ರಾಮಸ್ಥರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೇರ ಪಾವತಿ ಪೌರಕಾರ್ಮಿಕರ ಹುದ್ದೆಗಳ ಆಯ್ಕೆಗೆ ಪರಿಗಣಿಸಿ
ಗಾಂಧಿ ತತ್ವ ಅನುಷ್ಠಾನವೇ ನಿಜವಾದ ಗೌರವ