ರಾಜ್ಯದಲ್ಲಿ ಬರದ ವಾಸ್ತವ ಸ್ಥಿತಿ ಅರಿಯಲು ಅ.3ರಿಂದ ಅ.6 ರವರೆಗೆ 4 ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿದ ಕೇಂದ್ರದ ಬರ ಅಧ್ಯಯನ ತಂಡ ತನ್ನ ಕ್ಷೇತ್ರ ಸಮೀಕ್ಷೆ ಪೂರ್ಣಗೊಳಿಸಿದೆ. ಆದರೆ, ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಿಸಿರುವ ಗದಗ ಜಿಲ್ಲೆಗೆ ಕೇಂದ್ರದ ತಂಡ ಭೇಟಿ ನೀಡದಿರುವುದು ಜಿಲ್ಲೆಯ ರೈತರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಇದು ಕಾಟಾಚಾರದ ಬರ ಘೋಷಣೆಯೇ?, ಕೇಂದ್ರದ ತಂಡದ ಕಣ್ಣಿಗೆ ಬೀಳದ ಗದಗ ಜಿಲ್ಲೆಯ ಒಣಗಿದ ಹೊಲಗಳು
ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ ಗದಗ
ರಾಜ್ಯದಲ್ಲಿ ಬರದ ವಾಸ್ತವ ಸ್ಥಿತಿ ಅರಿಯಲು ಅ.3ರಿಂದ ಅ.6 ರವರೆಗೆ 4 ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿದ ಕೇಂದ್ರದ ಬರ ಅಧ್ಯಯನ ತಂಡ ತನ್ನ ಕ್ಷೇತ್ರ ಸಮೀಕ್ಷೆ ಪೂರ್ಣಗೊಳಿಸಿದೆ. ಆದರೆ, ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಿಸಿರುವ ಗದಗ ಜಿಲ್ಲೆಗೆ ಕೇಂದ್ರದ ತಂಡ ಭೇಟಿ ನೀಡದಿರುವುದು ಜಿಲ್ಲೆಯ ರೈತರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಕೇಂದ್ರ ತಂಡಕ್ಕೆ ರಾಜ್ಯ ಸರ್ಕಾರ ಸಲ್ಲಿಸಿರುವ ಬರದ ಮಾಹಿತಿಯ ಆಧಾರದ ಮೇಲೆ ಗದಗ ಸೇರಿದಂತೆ ಹಲವು ಜಿಲ್ಲೆಗಳು ಪರಿಹಾರದ ನಿರೀಕ್ಷೆಯಲ್ಲಿವೆ. ಆದರೆ, ಕೇಂದ್ರ ತಂಡ ಕಣ್ಣಾರೆ ಪರಿಶೀಲಿಸಿದ ಜಿಲ್ಲೆಗಳು ಮತ್ತು ಕೇವಲ ದಾಖಲೆಗಳ ಆಧಾರದ ಮೇಲೆ ಪರಿಗಣಿಸಲ್ಪಡುವ ಜಿಲ್ಲೆಗಳ ನಡುವೆ ಪರಿಹಾರ ಹಂಚಿಕೆಯಲ್ಲಿ ವ್ಯತ್ಯಾಸವಾಗಲಿದೆಯೇ ? ಎಂಬ ಆತಂಕ ಇದೀಗ ಗದಗ ರೈತರನ್ನು ಕಾಡುತ್ತಿದೆ.
ಕೇಂದ್ರ ತಂಡದ ಪ್ರಮುಖ ಉದ್ದೇಶವೇ ರಾಜ್ಯ ಸರ್ಕಾರದ ಬೆಳೆಹಾನಿ, ಮಳೆ ಕೊರತೆ, ಜಲಮೂಲಗಳ ಸ್ಥಿತಿ ಹಾಗೂ ರೈತರ ಸಂಕಷ್ಟದ ಅಂಕಿ, ಅಂಶಗಳನ್ನು ಸ್ಥಳದಲ್ಲೇ ಪರಿಶೀಲಿಸುವ ತಂಡವು ತುಮಕೂರು, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಹಾಸನ, ಮೈಸೂರು, ಚಾಮರಾಜನಗರ, ಮಂಡ್ಯ, ಯಾದಗಿರಿ, ರಾಯಚೂರು, ಬಾಗಲಕೋಟೆ ಮತ್ತು ಕೊಪ್ಪಳ ಭಾಗಗಳಲ್ಲಿ ಈಗಾಗಲೇ ಪರಿಶೀಲನೆ ನಡೆಸಿದೆ. ಗದಗ ಜಿಲ್ಲೆ ಮಾತ್ರ ಹೊರಗುಳಿದಿದೆ.
ಪರಿಹಾರ ಸಿಗುತ್ತದೆಯೇ?:
ಕೇಂದ್ರ ತಂಡ ಭೇಟಿ ನೀಡದಿರುವುದರಿಂದ ಆ ಜಿಲ್ಲೆಗಳಿಗೆ ಪರಿಹಾರವೇ ಸಿಗುವುದಿಲ್ಲ ಎನ್ನಲು ಸಾಧ್ಯವಿಲ್ಲ. ಏಕೆಂದರೆ ರಾಜ್ಯ ಸರ್ಕಾರವು ಜಿಲ್ಲಾಡಳಿತ, ಕೃಷಿ, ಕಂದಾಯ ಹಾಗೂ ಇತರ ಇಲಾಖೆಗಳ ಸಮೀಕ್ಷೆಯ ಆಧಾರದ ಮೇಲೆ ಕೇಂದ್ರಕ್ಕೆ ನಷ್ಟದ ಪ್ರಸ್ತಾವನೆ ಸಲ್ಲಿಸಿದೆ. ಕೇಂದ್ರ ತಂಡವು ರಾಜ್ಯದ ಒಟ್ಟಾರೆ ವರದಿ, ಮಳೆ ಕೊರತೆ, ಬೆಳೆಹಾನಿ ಮತ್ತು ರಾಜ್ಯ ಸರ್ಕಾರದ ಅಂಕಿ, ಅಂಶಗಳನ್ನೂ ಪರಿಶೀಲಿಸಲಿದೆ. ಆದರೆ, ಕಣ್ಣಾರೆ ಪರಿಶೀಲನೆ ನಡೆದ ಜಿಲ್ಲೆಗಳ ನೈಜ ಪರಿಸ್ಥಿತಿಗೆ ಸಿಗುವಷ್ಟು ತೂಕ ಗದಗದ ದಾಖಲೆಗಳಿಗೆ ಸಿಗುತ್ತದೆಯೇ? ಎಂಬುದೇ ಪ್ರಶ್ನೆ. ಕೇಂದ್ರ ತಂಡದ ವರದಿಯೇ ಪರಿಹಾರ ಪ್ರಮಾಣ ನಿರ್ಧಾರದಲ್ಲಿ ಪ್ರಮುಖ ಆಧಾರವಾಗುವುದರಿಂದ ಗದಗದ ರೈತರ ಆತಂಕ ಸಹಜವಾಗಿದೆ.ಶೇ. 31 ಮಳೆ ಕೊರತೆ, 218 ಕೋಟಿಗೂ ಅಧಿಕ ಬೆಳೆಹಾನಿ:
ಮುಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರತೆ ಹಾಗೂ ಬೆಳೆಹಾನಿಯಿಂದ ರೈತರು ತತ್ತರಿಸಿದ್ದು ಜೂ.1ರಿಂದ ಆ.7ರವರೆಗೆ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. 31ರಷ್ಟು ಮಳೆ ಕೊರತೆ ದಾಖಲಾಗಿದ್ದು, ನಂತರದ ಅವಧಿಯಲ್ಲೂ ಕೊರತೆ ಮುಂದುವರಿದ ಹಿನ್ನೆಲೆ ಜಿಲ್ಲಾದ್ಯಂತ ಬರದ ಛಾಯೆ ಆವರಿಸಿದೆ. ಜಿಲ್ಲೆಯ 7 ತಾಲೂಕುಗಳ ಬಹುತೇಕ ಭಾಗಗಳಲ್ಲಿ ಹೆಸರು, ಶೇಂಗಾ, ಮೆಕ್ಕೆಜೋಳ, ಹತ್ತಿ, ಸೂರ್ಯಕಾಂತಿ, ಈರುಳ್ಳಿ, ಮೆಣಸಿನಕಾಯಿ ಸೇರಿದಂತೆ ಪ್ರಮುಖ ಬೆಳೆಗಳು ಮಳೆ ಕೊರತೆಯಿಂದ ಒಣಗಿದ್ದು, ಶೇ.80ರಷ್ಟು ಬೆಳೆ ಹಾನಿಗೊಳಗಾಗಿದೆ. ಆ 11 ರಂದು ಜಿಲ್ಲಾಧಿಕಾರಿ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ 218 ಕೋಟಿಗೂ ಅಧಿಕ ಬೆಳೆ ನಷ್ಟವಾಗಿದೆ ಎಂದು ತಿಳಿಸಿದೆ. ಸೆಪ್ಟೆಂಬರ್ ತಿಂಗಳಲ್ಲಿಯೂ ತೀವ್ರ ಮಳೆ ಕೊರತೆ ಮತ್ತಷ್ಟು ಮುಂದುವರಿದಿದ್ದು, ಒಟ್ಟು ಶೇ. 49 ಕೊರತೆ ಉಂಟಾಗಿದೆ ಎಂದು ಗದಗ ಶಾಸಕ ಎಚ್.ಕೆ. ಪಾಟೀಲ ಸದನದಲ್ಲಿಯೇ ಸರ್ಕಾರದ ಗಮನ ಸೆಳೆದಿದ್ದರು. ಆದರೂ ಕೇಂದ್ರ ಬರ ಅಧ್ಯಯನ ತಂಡ ಗದಗ ಜಿಲ್ಲೆಗೆ ಭೇಟಿ ನೀಡದೇ ಹೋಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.