ಪರಿಷ್ಕೃತ ವೇತನ ನೀಡದೆ ಗುತ್ತಿಗೆದಾರರಿಂದ ನೌಕರರಿಗೆ ಅನ್ಯಾಯ

KannadaprabhaNewsNetwork |  
Published : Jul 09, 2026, 12:15 AM IST
ಪರಿಷ್ಕೃತ ವೇತನ ನೀಡದೆ ಗುತ್ತಿಗೆದಾರರಿಂದ ನೌಕರರಿಗೆ ಅನ್ಯಾಯ | Kannada Prabha

ಸಾರಾಂಶ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರು ಕೆಲಸಗಾರರಿಗೆ ಮೇ ೨೨ ರಿಂದ ಪರಿಷ್ಕೃತ ವೇತನ ಜಾರಿಯಾಗಿದ್ದರೂ ಗುತ್ತಿಗೆದಾರರು ನೀಡದೆ ನೌಕರರನ್ನು ವಂಚಿಸುತ್ತಿದ್ದಾರೆ. ಈ ಸಂಬಂಧ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರು ಕೆಲಸಗಾರರಿಗೆ ಮೇ ೨೨ ರಿಂದ ಪರಿಷ್ಕೃತ ವೇತನ ಜಾರಿಯಾಗಿದ್ದರೂ ಗುತ್ತಿಗೆದಾರರು ನೀಡದೆ ನೌಕರರನ್ನು ವಂಚಿಸುತ್ತಿದ್ದಾರೆ. ಈ ಸಂಬಂಧ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಹೊರಗುತ್ತಿಗೆ ನೌಕರರು ಆರೋಪಿಸಿದ್ದಾರೆ.ನಿಗಮದಲ್ಲಿ ವಿವಿಧ ಸೇವೆಗಳನ್ನು ಕೆಟಿಪಿಪಿ ಕಾಯ್ದೆಯನ್ವಯ ಟೆಂಡರ್‌ ಪ್ರಕ್ರಿಯೆಗೊಳಪಡಿಸಿ ಹೊರಗುತ್ತಿಗೆ ಆಧಾರದ ಮೇಲೆ ಪಡೆಯಲಾಗುತ್ತಿದೆ. ಟೆಂಡರ್ ಸಮಯದಲ್ಲಿ ಹೊರಗುತ್ತಿಗೆ ಸೇವೆಗಳಿಗೆ ಕನಿಷ್ಠ ವೇತನವನ್ನು ಕಾರ್ಮಿಕ ಇಲಾಖೆ ಕನಿಷ್ಠ ವೇತನ ಕಾಯ್ದೆಯನ್ವಯ ಪರಿಷ್ಕೃತ ವೇತನವನ್ನು ಪರಿಗಣಿಸುವಂತೆ ಸುತ್ತೋಲೆ ಹೊರಡಿಸಿದೆ.

ಅದರಂತೆ ಕಾರ್ಮಿಕ ಇಲಾಖೆ ಮೇ ೨೨ ರಂದು ಕೌಶಲ್ಯವಾರು ಅತಿಕುಶಲ, ಕುಶಲ, ಅರೆಕುಶಲ ಹಾಗೂ ಅಕುಶಲ ಎಂದು ನಾಲ್ಕು ಪ್ರವರ್ಗಗಳಾಗಿ ವಿಂಗಡಿಸಿ ಕನಿಷ್ಠ ವೇತನ ದರಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಪರಿಷ್ಕರಿಸಿದೆ. ಅದರಂತೆ ಅತಿ ಕುಶಲ ಪಾಳಿ ಎಂಜಿನಿಯರ್ ಗ್ರೇಡ್-೧ಗೆ ೩೨,೧೨೨ ರು., ಕುಶಲ ಗ್ರೇಡ್-೨ಗೆ ೨೯,೩೧೬ ರು., ಅರೆ ಕುಶಲ ಪಾಳಿ ಸಹಾಯಕರಿಗೆ ೨೬,೭೪೪ ರು. ಡಾಟಾ ಎಂಟ್ರಿ ಆಪರೇಟರ್, ವಾಹನ ಚಾಲಕ, ಸೆಕ್ಯೂಇಟಿ ಸೂಪರ್‌ವೈಸರ್, ಸೆಕ್ಯುರಿಟಿ ಇನ್ಸ್‌ಪೆಕ್ಟರ್, ಅಸಿಸ್ಟೆಂಟ್ ಸೆಕ್ಯುರಿಟಿ ಆಫೀಸರ್, ಅಡುಗೆಯವರಿಗೆ ವಲಯವಾರು ೨೯,೩೧೬ ರು., ೨೬,೭೪೪ ರು., ೨೪,೪೦೭ ರು. ವೇತನ ನಿಗದಿಪಡಿಸಿದೆ. ಸೆಕ್ಯುರಿಟಿ ಗಾರ್ಡ್, ಕ್ಷೇತ್ರ ಪರಿಚಾರಕರು, ಗಾರ್ಡ್‌ನರ್ಸ್, ಹೆಲ್ಪರ್, ರೂಂಬಾಯ್ಸ್, ಕೇರ್‌ಟೇಕರ್, ನಿರ್ವಹಣಾ ಸಿಬ್ಬಂದಿಗೂ ವಲಯವಾರು ವೇತನ ನಿಗದಿಪಡಿಸಿ ಆದೇಶ ಹೊರಡಿಸಿದೆ.

ಮೇ ತಿಂಗಳಲ್ಲೇ ಆದೇಶ ಹೊರಡಿಸಿದ್ದರೂ ಕಳೆದ ಮೂರು ತಿಂಗಳಿಂದ ಪರಿಷ್ಕೃತ ವೇತನವನ್ನು ನೀಡದೆ ಗುತ್ತಿಗೆದಾರರು ಸರ್ಕಾರದ ಆದೇಶವನ್ನೇ ಗಾಳಿಗೆ ತೂರಿದ್ದಾರೆ. ಪರಿಷ್ಕೃತ ವೇತನವನ್ನು ನೀಡಲಾಗುವುದಿಲ್ಲ. ವೇತನ ಹೆಚ್ಚಿಸುವಂತೆ ಹಠ ಹಿಡಿದರೆ ಕೆಲಸದಿಂದಲೇ ತೆಗೆದುಹಾಕುವ ಬೆದರಿಕೆ ಹಾಕುತ್ತಿದ್ದಾರೆ. ಪರಿಷ್ಕೃತ ವೇತನದಂತೆ ಹಣ ನೀಡಬೇಕಾದರೆ ಹೆಚ್ಚುವರಿ ವೇತನದ ಹಣವನ್ನು ತಮಗೆ ಹಣ ನೀಡುವಂತೆ ಪೀಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ಪರಿಷ್ಕೃತ ವೇತನವನ್ನು ಹೊರಗುತ್ತಿಗೆ ನೌಕರರಿಗೆ ನೀಡದಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ನೌಕರರೂ ಕೂಡ ಈ ವಿಚಾರವನ್ನು ನನಗೆ ತಿಳಿಸಿಲ್ಲ. ಗುತ್ತಿಗೆದಾರರ ಟೆಂಡರ್ ಷರತ್ತುಗಳು, ನಿಯಮಗಳನ್ನು ಪರಿಶೀಲಿಸಿ ಹೊಸ ಆದೇಶದಂತೆ ಹೊರಗುತ್ತಿಗೆ ನೌಕರರಿಗೆ ಪರಿಷ್ಕೃತ ವೇತನ ದೊರಕಿಸುವ ಬಗ್ಗೆ ಕ್ರಮ ವಹಿಸುವೆ.

- ರಘುರಾಮ್, ಸೂಪರಿಂಟೆಂಡೆಂಟ್ ಎಂಜಿನಿಯರ್, ಸೆಸ್ಕಾಂ, ಮಂಡ್ಯಪರಿಷ್ಕೃತ ವೇತನ ನೀಡುವುದಕ್ಕೆ ಗುತ್ತಿಗೆದಾರರು ನಿರಾಕರಿಸುತ್ತಿದ್ದಾರೆ. ಕೆಲಸದಿಂದಲೇ ತೆಗೆದುಹಾಕುವ ಬೆದರಿಕೆಯನ್ನೂ ಹಾಕುತ್ತಿದ್ದಾರೆ. ಕಾರ್ಮಿಕ ಇಲಾಖೆ ವೇತನ ಪರಿಷ್ಕರಿಸಿದ್ದರೂ ಗುತ್ತಿಗೆದಾರರು ನೀಡದೆ ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಇದು ಅಧಿಕಾರಿಗಳ ಗಮನಕ್ಕಿದ್ದರೂ ಪರಿಷ್ಕೃತ ವೇತನ ಕೊಡಿಸುವ ವಿಚಾರದಲ್ಲಿ ಮೌನ ವಹಿಸಿದ್ದಾರೆ.

- ಸಚಿನ್, ಹೊರಗುತ್ತಿಗೆ ನೌಕರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಂಬಳಗೂಡು ಪಿಡಿಒ ಮನೆ ಮೇಲೆ ಲೋಕಾ ದಾಳಿ
ನಾಳೆ ನೀರಾವರಿ ಸಲಹಾ ಸಮಿತಿ ಸಭೆ: ಶಾಸಕ ಪಿ.ರವಿಕುಮಾರ್