ಕನ್ನಡಪ್ರಭ ವಾರ್ತೆ ಮಂಡ್ಯ
ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ವಿಚಿತ್ರಕಾರಕ ಶಕ್ತಿಗಳು ನಡೆಸಿದ ಕಲ್ಲು ತೂರಾಟ ಪ್ರಕರಣದಲ್ಲಿ ಗುಪ್ತಚರ ಇಲಾಖೆ ವೈಫಲ್ಯ ಮತ್ತು ಪೊಲೀಸ್ ಇಲಾಖೆಯ ನಿರ್ಲಕ್ಷ್ಯ ಕಾರಣ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.ಗಣೇಶೋತ್ಸವ ಸಮಯದಲ್ಲಿ ಹಿಂಸೆ ಸೃಷ್ಟಿಸುತ್ತಿರುವವರು ಹೊರಗಿನವರು ಎಂದು ಹೇಳಲಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಮದ್ದೂರು ಪ್ರಕರಣದಲ್ಲಿ ರಾಮನಗರ ಚನ್ನಪಟ್ಟಣ ಹಾಗೂ ಕೋಲಾರ ವ್ಯಕ್ತಿಗಳ ಕೈವಾಡವಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕಳೆದ ವರ್ಷ ನಾಗಮಂಗಲದಲ್ಲಿ ನಡೆದ ಕೋಮು ಘರ್ಷಣೆಗೆ ಕೇರಳ ನಿಂತಿರುವುದು ಪತ್ತೆಯಾಗಿತ್ತು. ಆದರೆ, ಆ ಪ್ರಕರಣದ ತನಿಖೆ ಹಳ್ಳ ಹಿಡಿದೇ ಹೊರತು ಯಾರೊಬ್ಬರಿಗೂ ಶಿಕ್ಷೆ ಆಗಲಿಲ್ಲ.
ಆ ಪ್ರಕರಣದಿಂದ ಪಾಠ ಕಲಿಯದ ಪೊಲೀಸ್ ಹಾಗೂ ಗುಪ್ತಚರ ಇಲಾಖೆ ಪೊಲೀಸರು ಗಣೇಶೋತ್ಸವ ಸಮಯದಲ್ಲಿ ಹೊರಗಿನಿಂದ ಗಲಭೆ ಸೃಷ್ಟಿಸಲು ಬರುವವರ ಮೇಲೆ ಕಣ್ಣಿಡುವಲ್ಲಿ ಬೇಜವಾಬ್ದಾರಿತನ ತೋರಿಸುತ್ತಿರುವುದು ಇಂತಹ ಪ್ರಕರಣಗಳು ಮರುಕಳಿಸಲು ಕಾರಣ ಎಂದು ಹೇಳಲಾಗುತ್ತಿದೆ.ಈದ್ ಮಿಲಾದ್ ಮೆರವಣಿಗೆ ವೇಳೆ ನೂರಾರು ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಿದ್ದ ಪೊಲೀಸ್ ಇಲಾಖೆ ಗಣೇಶ ವಿಸರ್ಜನೆ ವೇಳೆ ಅಷ್ಟೇ ಪ್ರಮಾಣದ ಪೊಲೀಸರನ್ನು ಭದ್ರತೆಗೆ ನಿಯೋಜಿಸದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಹೊರಗಿನಿಂದ ಸದ್ದಿಲ್ಲದೆ ಬಂದು ಗಲಭೆ ಸೃಷ್ಟಿಸಿ ಪರಾರಿ ಯಾಗುತ್ತಿರುವ ವಿಚಿಧ್ರಕಾರಕ ಶಕ್ತಿಗಳನ್ನು ದಮನ ಮಾಡುವಲ್ಲಿ ಪೊಲೀಸರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಕರಾವಳಿಗಷ್ಟೇ ಸೀಮಿತವಾಗಿದ್ದ ಕೋಮು ಘರ್ಷಣೆಗಳು ಇತ್ತೀಚಿನ ವರ್ಷಗಳಲ್ಲಿ ಬಯಲು ಸೀಮೆಗೂ ಹರಡುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಲಾಗುತ್ತಿದೆ.ಈದ್ ಮಿಲಾದ್ ಮೆರವಣಿಗೆ ಡಿಜೆ ಯೊಂದಿಗೆ ಸಾಗುವುದಾದರೆ ಗಣೇಶೋತ್ಸವ ಮೆರವಣಿಗೆಗೆ ಡಿಜೆ ನಿಷೇಧ ಏಕೆ ಎಂಬ ಹಿಂದೂಪರ ಸಂಘಟನೆಗಳ ಪ್ರಶ್ನೆಗೆ ಪೊಲೀಸ್ ಅಧಿಕಾರಿಗಳ ಬಳಿಯೂ ಉತ್ತರವಿಲ್ಲ.
ಗುಪ್ತಚರ ಇಲಾಖೆ ಹಾಗೂ ಪೊಲೀಸ್ ಭದ್ರತಾ ವೈಫಲ್ಯ ಪದೇ ಪದೇ ಸಾಬೀತಾಗುತ್ತಿದ್ದರೂ ಇಲಾಕ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಂತೆ ಕಂಡು ಬರುತ್ತಿಲ್ಲ. ಪೊಲೀಸರು ಕೂಡ ತಮ್ಮ ತನಿಕಾ ಶೈಲಿ, ಭದ್ರತಾ ವ್ಯವಸ್ಥೆಯನ್ನು ಬಲಗೊಳಿಸುವ ಪ್ರಯತ್ನವನ್ನು ನಡೆಸಿಲ್ಲ. ಭದ್ರತೆಯಲ್ಲಿ ತೋರುತ್ತಿರುವ ದಿವ್ಯ ನಿರ್ಲಕ್ಷವೇ ಇಂತಹ ಘಟನೆಗಳಿಗೆ ಪದೇಪದೇ ಕಾರಣವಾಗುತ್ತಿವೆ ಎಂದು ಆರೋಪಗಳು ಕೇಳಿಕೊಳ್ಳುತ್ತಿವೆ. ಈ ತಪ್ಪನ್ನು ಸರಿಪಡಿಸಿಕೊಂಡು ಗಲಭೆಗಳು ಸೃಷ್ಟಿಯಾಗದಂತೆ ತಡೆಯುವಲ್ಲಿ ಪೊಲೀಸರು ಎಡವುತ್ತಿರುವುದರಿಂದ ಇಲಾಖೆಯನ್ನು ಅನುಮಾನದಿಂದ ನೋಡುವಂತಹ ಪರಿಸ್ಥಿತಿಗೆ ಕಾರಣರಾಗಿದ್ದಾರೆ.ಆರೋಪಿಗಳು 14 ದಿನ ನ್ಯಾಯಾಂಗ ಬಂಧನಕ್ಕೆ
ಮದ್ದೂರು: ಪಟ್ಟಣದಲ್ಲಿ ಭಾನುವಾರ ರಾತ್ರಿ ನಡೆಸಿದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ 21 ಆರೋಪಿಗಳನ್ನು ಪೊಲೀಸರು ಪಟ್ಟಣದ ನ್ಯಾಯಾಲಯಕ್ಕೆ ಕರೆತಂದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು.ಎರಡನೇ ಅಪರ ಸಿವಿಲ್ ನ್ಯಾಯಾಧೀಶರಾದ ಗೋಪಾಲಕೃಷ್ಣ ಅವರ ಮುಂದೆ ಆರೋಪಿಗಳನ್ನು ಹಾಜರು ಪಡಿಸಿದ ನಂತರ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಮಾಧ್ಯಮಗಳನ್ನು ಕಂಡು ಮುಖ ಮುಚ್ಚಿಕೊಂಡು ಆರೋಪಿಗಳು ತೆರಳಿದರು.ಇಂದು ಮದ್ದೂರು ಬಂದ್
ಮದ್ದೂರು:ಗಣೇಶ ಮೂರ್ತಿ ವಿಸರ್ಜನೆ ವೇಳೆ ನಡೆಸಲಾದ ಕಿಡಿಗೇಡಿಗಳು ನಡೆಸಿದ ಕಲ್ಲುತೂರಾಟವನ್ನು ಖಂಡಿಸಿ ಮಂಗಳವಾರ (ಸೆ.9) ಮದ್ದೂರು ಬಂದ್‌ಗೆ ಹಿಂದೂಪರ ಸಂಘಟನೆಗಳು ಕರೆ ನೀಡಿವೆ. ಶಾಂತಿಯುತವಾಗಿ ನಡೆಯುತ್ತಿದ್ದ ಗಣೇಶಮೂರ್ತಿ ಮೆರವಣಿಗೆಗೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಲು ಸಂಚು ರೂಪಿಸಿ ಕಲ್ಲು ತೂರಿ, ಮಾರಕಾಸ್ತ್ರಗಳನ್ನು ಝಳಪಿಸಿರುವುದಾಗಿ ಹಿಂದೂ ಕಾರ್ಯಕರ್ತರು ಆರೋಪಿಸಿದ್ದಾರೆ. ಇಂತಹ ಅಹಿತಕರ ಘಟನೆಗಳಿಗೆ ಕಾರಣರಾಗಿರುವ ವಿಚ್ಛಿದ್ರಕಾರಕ ಶಕ್ತಿಗಳನ್ನು ಅಡಗಿಸಲು ಮದ್ದೂರು ಬಂದ್‌ಗೆ ಕರೆ ನೀಡಲಾಗಿದ್ದು, ವರ್ತಕರು, ವ್ಯಾಪಾರಿಗಳು, ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.ಘರ್ಷಣೆ ಹಿನ್ನೆಲೆ: ನಿಷೇಧಾಜ್ಞೆ ಜಾರಿ
ಗಣೇಶ ಮೂರ್ತಿಯ ವಿಸರ್ಜನೆಯ ಮೆರವಣಿಗೆ ವೇಳೆ ಹಿಂದೂ ಮುಸ್ಲಿಂ ಕೋಮುಗಳ ನಡುವೆ ಘರ್ಷಣೆ ಉಂಟಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಮದ್ದೂರು ತಾಲೂಕು ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ ೧೬೩ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದರು. ಈ ನಡುವೆಯೂ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಮಸೀದಿ ಬೀದಿ ರಸ್ತೆ ಕಡೆಯಿಂದ ಮೆರವಣಿಗೆ ತೆರಳುತ್ತಿದ್ದವರ ಮೇಲೆ ಕಲ್ಲು ತೂರಾಟ ನಡೆದಿದ್ದು, ಮದ್ದೂರು ಟೌನ್ ವ್ಯಾಪ್ತಿಯಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿತ್ತು. ಎರಡು ಕೋಮಿನ ನಡುವೆ ಘರ್ಷಣೆ ಮಾಡಿಕೊಂಡು ಸಾರ್ವಜನಿಕ ಆಸ್ತಿ ಪಾಸ್ತ, ಪ್ರಾಣ ಹಾನಿ ಮತ್ತು ಸಾರ್ವಜನಿಕರ ಶಾಂತಿಗೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವುದರಿಂದ ಕೂಡಲೇ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕಲ-೧೬೩ ಭಾರತೀಯ ನಾಗರೀಕ ಸಂಹಿತೆಯಡಿ ನಿರ್ಬಂದಕಾಜ್ಞೆ ಆದೇಶ ಜಾರಿಗೊಳಿಸಿ ಆದೇಶಿಸಿದ್ದಾರೆ.
೧೦೦೦ ಪೊಲೀಸ್ ಸಿಬ್ಬಂದಿ ನಿಯೋಜನೆ:ಕಲ್ಲು ತೂರಾಟ ಪ್ರಕರಣದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ೧೦೦೦ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಯಿತ್ತು. ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.