ಕೆತ್ತಿಕಲ್‌ ಗುಡ್ಡ ಮಣ್ಣು ಕುಸಿತ ಭೀತಿ ಪ್ರಕರಣ ತಿಂಗಳಾಂತ್ಯಕ್ಕೆ ತನಿಖಾ ವರದಿ: ದಿನೇಶ್‌ ಗುಂಡೂರಾವ್‌

KannadaprabhaNewsNetwork |  
Published : Aug 16, 2024, 12:52 AM IST
ಸಚಿವ ದಿನೇಶ್ ಗುಂಡೂರಾವ್‌  | Kannada Prabha

ಸಾರಾಂಶ

ಕೆತ್ತಿಕಲ್‌ ಗುಡ್ಡದಲ್ಲಿ ಅವ್ಯಾಹತವಾಗಿ ಮಣ್ಣು ತೆಗೆದ ಕಾರಣ ಉಂಟಾಗಿರುವ ಕುಸಿತ ಭೀತಿ ಕುರಿತಂತೆ ಪೊಲೀಸ್‌ ಇಲಾಖೆಯ ಸೆಂಟ್ರಲ್‌ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಈ ತಿಂಗಳಾಂತ್ಯಕ್ಕೆ ವರದಿ ಸಿಗಲಿದ್ದು, ವರದಿ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕೆತ್ತಿಕಲ್‌ ಗುಡ್ಡದಲ್ಲಿ ಅವ್ಯಾಹತವಾಗಿ ಮಣ್ಣು ತೆಗೆದ ಕಾರಣ ಉಂಟಾಗಿರುವ ಕುಸಿತ ಭೀತಿ ಕುರಿತಂತೆ ಪೊಲೀಸ್‌ ಇಲಾಖೆಯ ಸೆಂಟ್ರಲ್‌ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಈ ತಿಂಗಳಾಂತ್ಯಕ್ಕೆ ವರದಿ ಸಿಗಲಿದ್ದು, ವರದಿ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಕೆತ್ತಿಕಲ್‌ ಗುಡ್ಡ ಕುಸಿತ ಭೀತಿ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, 2018-19 ರಿಂದಲೇ ಅಲ್ಲಿಂದ ಮಣ್ಣು ಅಲ್ಲಿಂದ ತೆಗೆದಿರುವ ಬಗ್ಗೆ ವರದಿ ಇದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳವರು ಏನು ಮಾಡಿದ್ದಾರೆ ಎಂಬ ಬಗ್ಗೆ ತನಿಖಾ ತಂಡ ನೀಡುವ ವರದಿ ಆಧಾರದಲ್ಲಿ ಕ್ರಮ ವಹಿಸಲಾಗುವುದು. ಇದೇ ವೇಳೆ ಅಲ್ಲಿರುವ 9 ಮನೆಗಳವರಿಗೆ ಸ್ಥಳಾಂತರ ಮಾಡಿ ರಕ್ಷಣೆ ಒದಗಿಸಬೇಕಾಗಿದೆ ಎಂದರು.

ಕೆತ್ತಿಕಲ್‌ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿ ಜಿಯಾಲಜಿಕಲ್‌ ಸರ್ವೇ ಆಫ್‌ ಇಂಡಿಯಾದ ತಂಡ ಬಂದು ಪರಿಶೀಲನೆ ನಡೆಸಿದೆ. ಅವರು ನೀಡಿರುವ ಸಲಹೆಗಳನ್ನು ಪಾಲಿಸಲು ಜಿಲ್ಲಾಡಳಿತ ಕ್ರಮ ವಹಿಸಲಿದೆ. ಎನ್‌ಐಟಿಕೆ ತಂಡವೂ ಪರಿಶೀಲನೆ ನಡೆಸಿದ್ದು, ವರದಿ ನೀಡಲಿದೆ. ಎನ್‌ಎಚ್‌ಎಐ ವತಿಯಿಂದಲೂ ಪರಿಶೀಲನೆ ನಡೆದಿದೆ ಎಂದು ಸಚಿವರು ಹೇಳಿದರು.

ಪೊಲೀಸ್‌ ಕ್ವಾಟರ್ಸ್‌ ಹೊಸ ಕಟ್ಟಡಗಳ ಕಳಪೆ ಕಾಮಗಾರಿ ಬಗ್ಗೆ ವರದಿ ನೀಡಲು ತಿಳಿಸಲಾಗಿದೆ. ಪಡೀಲ್‌ನ ಜಿಲ್ಲಾಧಿಕಾರಿ ಕಚೇರಿ ಕಾಮಗಾರಿ ಪೂರ್ಣಗೊಳಿಸಲು ಸ್ಮಾರ್ಟ್‌ ಸಿಟಿಯಡಿ 20 ಕೋಟಿ ರು. ಮಂಜೂರು ಆಗಿದೆ. ಶೀಘ್ರವೇ ಕೆಲಸ ಮುಗಿಸಿ ಉದ್ಘಾಟನೆ ನಡೆಸಲಾಗುವುದು ಎಂದು ಸಚಿವರು ಈ ಸಂದರ್ಭ ತಿಳಿಸಿದರು.

ಸೇತುವೆ ಗುಣಮಟ್ಟ ಪರಿಶೀಲನೆಗೆ ಸೂಚನೆ: ಕಾಳಿ ಸೇತುವೆ ಕುಸಿತದ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲೂ ವಿವಿಧ ಇಲಾಖೆಗೆ ಒಳಪಟ್ಟ ಸೇತುವೆಗಳ ಪರಿಶೀಲನೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಕೂಳೂರಿನಲ್ಲಿ ಎನ್‌ಎಚ್‌ಎಐನಿಂದ ನಿರ್ಮಾಣ ಹಂತದಲ್ಲಿರುವ ಹೊಸ ಸೇತುವೆ ಮಾರ್ಚ್‌ ಅಂತ್ಯಕ್ಕೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಗಡುವು ನೀಡಿರುವುದಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಈ ಸಂದರ್ಭ ಮಾಹಿತಿ ನೀಡಿದರು.......................ಗ್ಯಾರಂಟಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ

ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಆದರೆ ಈ ಯೋಜನೆಗಳನ್ನು ಇನ್ನಷ್ಟುಜನರಿಗೆ ಮುಟ್ಟಿಸುವ ಪ್ರಯತ್ನದೊಂದಿಗೆ ಸೋರಿಕೆ ಆಗದೆ ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಕ್ರಮ ವಹಿಸಲಾಗುವುದು ಎಂದು ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಆಯುಷ್ಮಾನ್‌ ಭಾರತ್‌ ಯೋಜನೆಯಲ್ಲಿ ಶೇ. 75 ರಾಜ್ಯ ಸರ್ಕಾರದ ಹಣವಾದರೆ, ಶೇ. 25ರಷ್ಟು ಮಾತ್ರವೇ ಕೇಂದ್ರದ್ದು. ಹಾಗಿದ್ದರೂ ಅದನ್ನು ಕೇಂದ್ರದ ಯೋಜನೆಯಾಗಿ ಬಿಂಬಿಸಲಾಗುತ್ತಿದೆ. ಗ್ಯಾರಂಟಿ ಯೋಜನೆಗಳು ಅನರ್ಹರಿಗೂ ಸಿಗುತ್ತಿದೆ ಎಂಬ ನೆಲೆಯಲ್ಲಿ ಅದು ದುರ್ಬಳಕೆ ಆಗದಂತೆ ಕ್ರಮ ವಹಿಸಬೇಕಾಗಿದೆ. ಶಕ್ತಿ ಯೋಜನೆಗೆ ಮಹಿಳೆಯರಿಗಾಗಿಯೇ ಮಾಡಲಾದ ಯೋಜನೆಯಾಗಿದ್ದು, ಅದಕ್ಕೆ ಮಾನದಂಡವಿಲ್ಲ. ಗೃಹ ಲಕ್ಷ್ಮಿ ಬಡ ಕುಟುಂಬದ ಮಹಿಳೆಯರಿಗೇ ಸಿಗಬೇಕಾಗಿದೆ. ಅದಕ್ಕಾಗಿ ಸಮೀಕ್ಷೆ ನಡೆಸಿ, ವರದಿ ಆಧಾರದಲ್ಲಿ ಕ್ರಮ ವಹಿಸಬೇಕಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

PREV

Recommended Stories

ಜಾತಿಗಣತಿ ಈಗ ಕಗ್ಗಂಟು : ತಡರಾತ್ರಿವರೆಗೆ ಸಭೆ
ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ