ಜಿಲ್ಲೆಯ ಆಡಳಿತ ವ್ಯವಸ್ಥೆ ಹಾದಿ ತಪ್ಪಿತಾ?

KannadaprabhaNewsNetwork |  
Published : Mar 03, 2025, 01:50 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್ | Kannada Prabha

ಸಾರಾಂಶ

ಚಿತ್ರದುರ್ಗ ನಗರದ ಜೆಸಿಆರ್ ಮೇನ್ ರೋಡ್ ನ ಏಳನೇ ಕ್ರಾಸ್ ನಲ್ಲಿ ಡಿವೈಡರ್ ಕಟ್ ಮಾಡಿ ಸರಪಡಿಸದೇ ಹಾಗೆ ಬಿಟ್ಟಿರುವುದು.

ಯಾರ ನಿಯಂತ್ರಣದಲ್ಲಿಯೂ ಇಲ್ಲದ ಅಧಿಕಾರಿಗಳು । ಜನಪ್ರತಿನಿಧಿಗಳದ್ದು ಕೇವಲ ಕಂಠ ಶೋಷಣೆ ಮಾತ್ರಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗ ಜಿಲ್ಲೆಯ ಆಡಳಿತ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಹಾದಿ ತಪ್ಪಿದೆಯೇ? ಅಧಿಕಾರಿಗಳು ಯಾರ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿ ಇಲ್ಲವೇ? ಅರಚಾಡಿ ಕಂಠ ಶೋಷಣೆ ಮಾಡಿಕೊಳ್ಳುವುದು ಜನ ಪ್ರತಿನಿಧಿಗಳ ಕೆಲಸವಾ?

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಕೆಡಿಪಿ ತ್ರೈಮಾಸಿಕ ಸಭೆ ಇಂತಹದ್ದೊಂದು ಸಂದೇಶ ರವಾನಿಸಿದೆ. ಯಾರೊಬ್ಬ ಅಧಿಕಾರಿಗಳು ಕೆಡಿಪಿಯಂತಹ ಗಂಭೀರ ಸಭೆಗೆ ಹೋಂ ವರ್ಕ್ ಮಾಡಿಕೊಂಡು ಬಂದಿರಲಿಲ್ಲ. ತಮಗೆ ತೋಚಿದ ಅಭಿಪ್ರಾಯಗಳ ಮಂಡಿಸುವ, ಸುಳ್ಳುಗಳ ಹರಹುವ ಕೆಲಸ ಮಾಡಿದರು. ಅಧಿಕಾರಿ ವರ್ಗವ ಎಚ್ಚರಿಸುವ ಹಾಗೂ ಸರಿದಾರಿಗೆ ಕರೆದೊಯ್ಯುವ ಕೆಲಸವ ಸಚಿವರು ಮಾಡಲೇ ಇಲ್ಲ.

ಮೆಡಿಕಲ್ ಕಾಲೇಜಿನ ವೈದ್ಯರ ನೇಮಕಾತಿಯ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಕತ್ತಲಲ್ಲಿ ಇಟ್ಟು ಬೆಂಗಳೂರಿನಲ್ಲಿ ನಡೆಸಲಾಗಿತ್ತು. ಈ ಅಂಶ ಅಷ್ಟಾಗಿ ಜನಪ್ರತಿನಿಧಿಗಳು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಮೆಡಿಕಲ್ ಕಾಲೇಜ್ ಡೀನ್ ನ ತೀವ್ರ ತರಾಟೆಗೆ ತೆಗೆದುಕೊಂಡರು. ಚಿತ್ರದುರ್ಗದ ಬದಲಾಗಿ ಬೆಂಗಳೂರಿನಲ್ಲಿ ಯಾಕೆ ನಡೆಸಿದಿರಿ, ಚಿತ್ರದುರ್ಗದಲ್ಲಿ ನಡೆಸಲು ಏನಾಗಿತ್ತೆಂದು ನೇರವಾಗಿ ಪ್ರಶ್ನಿಸಿದಾಗ ಸಚಿವರು, ಜನಪ್ರತಿನಿಧಿಗಳಿಗೆ ಪ್ರಕರಣದ ಗಂಭೀರತೆ ಆಗ ಅರಿವಾಯಿತು. ಜನ ಪ್ರತಿನಿಧಿಗಳ ಹೋರಾಟದ ಫಲವಾಗಿ ಮೆಡಿಕಲ್ ಕಾಲೇಜು ಮಂಜೂರಾಗಿದ್ದು ನೇಮಕಾತಿ ಪ್ರಕ್ರಿಯೆ ಬೆಂಗಳೂರಿಗೆ ಹೈಜಾಕ್ ಮಾಡಿದ ಉದ್ದೇಶ ಮಾತ್ರ ಆಡಳಿತ ನಿಯಂತ್ರಣದಲ್ಲಿ ಇಲ್ಲವೆಂಬುದ ಸಾಬೀತು ಪಡಿಸಿತ್ತು.

ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಪ್ರತಿ ಬಾರಿಯೂ ಸುಳ್ಳು ಮಾಹಿತಿಗಳು ಕೆಡಿಪಿ ಸಭೆಗೆ ಮಂಡನೆಯಾಗುತ್ತಿವೆ.

ಈ ಬಾರಿ ಕೂಡಾ ಅದೇ ಚಾಳಿ ಮುಂದುವರಿಯಿತು. ಜಿಲ್ಲೆಯಲ್ಲಿ ಒಟ್ಟು 1056 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, 165 ಕೆಟ್ಟಿವೆ ಎಂಬ ಮಾಹಿತಿ ಸ್ವತಹ ಶಾಸಕ ವೀರೇಂದ್ರ ಪಪ್ಪಿ ಅವರ ಕೆರಳಿಸಿತು. ವಾಸ್ತವದಲ್ಲಿ ಇನ್ನೂ ಹೆಚ್ಚಿನ ಘಟಕಗಳು ಕೆಟ್ಟಿವೆ, ಸರಿಯಾಗಿ ಅವಲೋಕಿಸಿಲ್ಲ ಎಂದರು. ಪ್ರತಿಯಾಗಿ ಹೊಸದುರ್ಗ ಶಾಸಕ ಬಿ.ಜಿ ಗೋವಿಂದಪ್ಪ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡುತ್ತಿಲ್ಲ, ಶಾಸಕರಿಗೆ ಯಾವುದೇ ಮಾಹಿತಿ ಕೊಡುತ್ತಿಲ್ಲವೆಂದು ಅಸಮಧಾನ ಹೊರ ಹಾಕಿ ಅಧಿಕಾರಿಗಳು ಹಾದಿ ತಪ್ಪಿರುವುದ ದೃಢಪಡಿಸಿದರು.

ಚಿತ್ರದುರ್ಗದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಡಿವೈಡರ್ ಗಳಿಗೆ ಅಲ್ಲಲ್ಲಿ ಓಪನ್ ನೀಡುವ ಪ್ರಸ್ತಾಪ ಕಳೆದ ಕೆಡಿಪಿ ಮೀಟಿಂಗ್ ಗಳಲ್ಲಿ ಚರ್ಚೆ ಆಗಿವೆ. ಶಾಸಕ ವೀರೇಂದ್ರ ಪಪ್ಪಿ ಪ್ರತಿ ಬಾರಿ ವಿಷಯ ಮಂಡಿಸಿ ಪಾಲಿಸುವಂತೆ ಮನವಿ ಮಾಡಿದ್ದಾರೆ. ಆದರೆ ಅಧಿಕಾರಿಗಳು ಕಿವಿ ಗೊಟ್ಟಿಲ್ಲ. ಶನಿವಾರ ನಡೆದ ಸಭೆಯಲ್ಲಿ ವೀರೇಂದ್ರ ಪಪ್ಪಿ ತುಸು ಕೋಪಗೊಂಡಂತೆ ಕಂಡು ಬಂದರು. ಲೋಕೋಪಯೋಗಿ ಇಲಾಖೆ ಒಂದಿಬ್ಬರು ಅಧಿಕಾರಿಗಳು ನಿವೃತ್ತಿ ಅಂಚಿನಲ್ಲಿದ್ದು ರಿಟೈರ್ಡ್ ಆಗುವುದರ ಒಳಗೆ ಡಿವೈಡರ್ ಗಳ ಓಪನ್ ಮಾಡಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದದ್ದೂ ಕೂಡ ಅಧಿಕಾರಿಗಳ ಕಾರ್ಯವೈಖರಿ ಟ್ರಾಕ್ ಬಿಟ್ಟಿರುವುದ ಎತ್ತಿ ತೋರಿಸಿದಂತಿತ್ತು.

ಡಿವೈಡರ್ ಓಪನ್ ಮಾಡುವುದರ ಕುರಿತು ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಚರ್ಚೆಗಳಾಗಿವೆ. ಕೆಲವು ಕಡೆ ಓಪನ್ ಮಾಡಿದ್ದರೂ ಕಾಮಗಾರಿ ಅರೆಬರೆಯಾಗಿದೆ. ಮತ್ತಷ್ಟು ಅಪಘಾತಗಳಿಗೆ ಅವಕಾಶ ಮಾಡಿಕೊಟ್ಟಂತಾಗಿದೆ. ಡಿವೈಡರ್ ಗಳು ಇಡೀ ಚಿತ್ರದುರ್ಗ ನಗರದ ಸಂಚಾರಿ ವ್ಯವಸ್ಥೆಯನ್ನೇ ಹದಗೆಡಿಸಿದ್ದರೂ ಅಧಿಕಾರಿಗಳು ಮಾತ್ರ ನಮ್ಮದೇನೂ ಪಾತ್ರವಿಲ್ಲವೆಂಬಂತೆ ನಡೆದುಕೊಳ್ಳುತ್ತಿದ್ದಾರೆ. ಜನ ಪ್ರತಿನಿಧಿಗಳ ಸೂಚನೆಗಳಿಗೆ ಕ್ಯಾರೇ ಎನ್ನುತ್ತಿಲ್ಲ.ಚಿತ್ರದುರ್ಗ ನಗರದ ಜೆಸಿಆರ್ ಮೇನ್ ರೋಡ್ ನ ಏಳನೇ ಕ್ರಾಸ್ ನಲ್ಲಿ ಡಿವೈಡರ್ ಕಟ್ ಮಾಡಿ ಓಪನ್ ಬಿಡಲಾಗಿದ್ದು ಸರಿಪಡಿಸುವ ಗೋಜಲಿಗೆ ಹೋಗದ ಕಾರಣ ಯೂಟರ್ನ್ ಮಾಡುವಾಗ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಕಳೆದ ಮೂರು ತಿಂಗಳಿನಿಂದ ಹಾಗೆಯೇ ಇದೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ