ಮಂಡ್ಯದಲ್ಲಿ 50 ಬಸ್ ತಂಗುದಾಣ ನಿರ್ಮಾಣಕ್ಕೆ ಈಶ್ವರ ಖಂಡ್ರೆ ಸೂಚನೆ

KannadaprabhaNewsNetwork |  
Published : Nov 05, 2026, 01:30 AM IST
4ಕೆಎಂಎನ್‌ಡಿ-3ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಈಶ್ವರ ಖಂಡ್ರೆ ಕಾರಿನಲ್ಲೇ ಜಿಪಂ ಸಿಇಓ ಅವರೊಂದಿಗೆ ಮಾಹಿತಿ ಪಡೆದುಕೊಂಡರು. | Kannada Prabha

ಸಾರಾಂಶ

ಅಕ್ಕ ಕೆಫೆಗಳು ಲಾಭದಾಯಕವಾಗಿದ್ದು ಮಹಿಳೆಯರಿಗೆ ಜೀವನೋಪಾಯ ಕಲ್ಪಿಸುತ್ತಿವೆ ಎಂಬ ಮಾಹಿತಿ ಪಡೆದ ಸಚಿವರು, ವಿಬಿಜಿ ರಾಮ್ ಜಿ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ಅಕ್ಕ ಕೆಫೆ ತೆರೆದು ಮಹಿಳಾ ಸ್ವಸಹಾಯ ಗುಂಪುಗಳಿಗೆ ನಿರ್ವಹಣೆ ಮಾಡಲು ಅವಕಾಶ ಕಲ್ಪಿಸಿ.

- ನಕಲಿ ದಾಖಲೆ ಆಧರಿಸಿ ನೀಡಿದ ಇ-ಸ್ವತ್ತುಗಳ ರದ್ದಿಗೆ ಸೂಚನೆ

- ಕೆರೆಗಳ ಪುನಶ್ಚೇತನ, ಸಂಪನ್ಮೂಲದ ಸದುಪಯೋಗಕ್ಕೆ ಸಲಹೆ

- ಸಮಯದ ಸದುಪಯೋಗ: ಕಾರಿನಲ್ಲೇ ಮಂಡ್ಯ ಸಿಇಒ ಜೊತೆ ಖಂಡ್ರೆ ಸಭೆಕನ್ನಡಪ್ರಭ ವಾರ್ತೆ ಮಂಡ್ಯ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ.ಖಂಡ್ರೆ ಅವರು ಮಂಡ್ಯ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಕಾರಿನಲ್ಲೇ ಗ್ರಾಮಗಳ ಅಭಿವೃದ್ಧಿ ಕುರಿತಂತೆ ಸಮಾಲೋಚನೆ ನಡೆಸಿ ಸಮಯದ ಸದುಪಯೋಗ ಪಡೆದುಕೊಂಡರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೈಸೂರು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಗೆ ತೆರಳುವ ಮಾರ್ಗದಲ್ಲಿ ಮಂಡ್ಯ ಗಡಿಯಿಂದ ಮೈಸೂರು ಗಡಿಯವರೆಗೆ ಸಿಇಒ ಕೆ.ಆರ್.ನಂದಿನಿ ಅವರೊಂದಿಗೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ ಸಚಿವರು, ಜಿಲ್ಲೆಯಲ್ಲಿ ಹೆಚ್ಚು ಜನ ಸಂಚಾರ ಇರುವ 50 ಹಳ್ಳಿಗಳ ಬಸ್ ನಿಲುಗಡೆ ಗುರುತಿಸಿ ಅಲ್ಲಿ ವಿಬಿಜಿ ರಾಮ್ ಜಿ ಅಡಿ ಸುಸಜ್ಜಿತ ಬಸ್ ತಂಗುದಾಣ ನಿರ್ಮಿಸಲು ಸೂಚನೆ ನೀಡಿದರು.

ಅಕ್ಕ ಕೆಫೆಗಳು ಲಾಭದಾಯಕವಾಗಿದ್ದು ಮಹಿಳೆಯರಿಗೆ ಜೀವನೋಪಾಯ ಕಲ್ಪಿಸುತ್ತಿವೆ ಎಂಬ ಮಾಹಿತಿ ಪಡೆದ ಸಚಿವರು, ವಿಬಿಜಿ ರಾಮ್ ಜಿ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ಅಕ್ಕ ಕೆಫೆ ತೆರೆದು ಮಹಿಳಾ ಸ್ವಸಹಾಯ ಗುಂಪುಗಳಿಗೆ ನಿರ್ವಹಣೆ ಮಾಡಲು ಅವಕಾಶ ಕಲ್ಪಿಸುವಂತೆಯೂ ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಇಲಾಖೆಯ ಅನುದಾನ, ತೆರಿಗೆ ರೂಪದಲ್ಲಿ ಸಂಗ್ರಹವಾಗುವ ಹಣ ಸೇರಿದಂತೆ ಎಲ್ಲ ಸಂಪನ್ಮೂಲದ ಸದ್ಬಳಕೆಯಾಗಬೇಕು ಎಂದು ಸೂಚಿಸಿದ ಈಶ್ವರ ಖಂಡ್ರೆ, ವಿಬಿಜಿ ರಾಮ್ ಜಿ ಅಡಿ 375 ಕಾಮಗಾರಿ ಕೈಗೊಳ್ಳಲು ಅವಕಾಶವಿದ್ದು, ಗ್ರಾಮಗಳಲ್ಲಿ ಶಾಶ್ವತ ಮತ್ತು ಉಪಯುಕ್ತ ಆಸ್ತಿಗಳ ಸೃಜನೆಗೆ ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು.

ನಕಲಿ ದಾಖಲೆ ಆಧರಿಸಿ ಇ-ಸ್ವತ್ತು ರದ್ದು:

ಗ್ರಾಮಠಾಣಾ ವ್ಯಾಪ್ತಿಯಲ್ಲಿ ದಾಖಲೆ ಇರುವ ಮತ್ತು ದಾಖಲೆ ಇಲ್ಲದ ಆಸ್ತಿಗಳಿಗೆ ಇ-ಸ್ವತ್ತು ನೀಡುವ ಅಭಿಯಾನ ಆರಂಭಿಸಿದ್ದು, ಅರ್ಜಿಗಳು ಬಂದ ಕೂಡಲೇ ಪಿಡಿಒಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ ಯಾವುದೇ ವಿಳಂಬವಿಲ್ಲದಂತೆ ಇ-ಸ್ವತ್ತು ವಿತರಿಸಲು ಕ್ರಮ ವಹಿಸುವಂತೆ ಎಲ್ಲ ಪಿಡಿಒಗಳಿಗೆ ಸೂಚಿಸಲು ತಿಳಿಸಿದರು.

ಮಂಡ್ಯ ನಗರಕ್ಕೆ ಹೊಂದಿಕೊಂಡಂತಿರುವ ಇಂಡುವಾಳು ಪಂಚಾಯ್ತಿ ವ್ಯಾಪ್ತಿಯಲ್ಲಿ ಅಕ್ರಮ ಬಡಾವಣೆ ನಿರ್ಮಾಣಕ್ಕೆ ಅವಕಾಶ ನೀಡಿ 1881 ಅಕ್ರಮ ಇ-ಸ್ವತ್ತು ನೀಡಲಾಗಿದೆ ಎಂಬ ಆರೋಪ ಬಂದಿದ್ದ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಈಗ ಸರ್ಕಾರ ನಡೆಸುತ್ತಿರುವ ಇ-ಸ್ವತ್ತು ಅಭಿಯಾನದಲ್ಲಿ ಯಾವುದೇ ಲೋಪ, ಭ್ರಷ್ಟಾಚಾರಕ್ಕೆ ಆಸ್ಪದ ಇಲ್ಲದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು. ಯಾವುದೇ ಪಂಚಾಯತಿಯಲ್ಲಿ ನಕಲಿ ದಾಖಲೆ ಆಧಾರದಲ್ಲಿ ಅಕ್ರಮವಾಗಿ ಇ-ಸ್ವತ್ತು ನೀಡಿದ್ದರೆ ರದ್ದು ಪಡಿಸುವಂತೆಯೂ ಸೂಚಿಸಿದರು.

158 ಎಕರೆ ಕೆರೆ ಒತ್ತುವರಿ ಬಾಕಿ:

ಜಿಲ್ಲೆಯ ಗ್ರಾಪಂ ವ್ಯಾಪ್ತಿಯಲ್ಲಿ 417 ಕೆರೆಗಳಿದ್ದು, 155 ಕೆರೆಗಳ 319 ಎಕರೆ ಭೂಮಿ ಒತ್ತುವರಿಯಾಗಿತ್ತು. ಈ ಪೈಕಿ 133 ಕೆರೆಗಳ 162 ಎಕರೆ ಒತ್ತುವರಿ ತೆರವು ಮಾಡಲಾಗಿದ್ದು, ಇನ್ನೂ 22 ಕೆರೆಗಳ 158 ಎಕರೆ ಭೂಮಿ ಒತ್ತುವರಿ ತೆರವು ಮಾಡಬೇಕಾಗಿದೆ. ಮನೆಗಳ ಹೊರತು ಪಡಿಸಿ, ಉಳಿದ ಒತ್ತುವರಿ ತೆರವುಗೊಳಿಸಿ ಕೆರೆಗಳ ಸಂರಕ್ಷಣೆ ಮಾಡಿ, ರಾಜಕಾಲುವೆ ಅಡೆತಡೆ ನಿವಾರಿಸಿ, ನೀರು ತುಂಬಿಸಿ, ಅಂತರ್ಜಲಮಟ್ಟ ಹೆಚ್ಚಿಸುವಂತೆ ಹಾಗೂ ಸರ್ಕಾರಿ ಭೂಮಿ ಭೂಗಳ್ಳರ ಪಾಲಾಗದಂತೆ ರಕ್ಷಿಸಲು ಸೂಚಿಸಿದರು.

ವಿಬಿಜಿ ರಾಮ್ ಜಿ ಅಡಿ ಸಮುದಾಯ ಮತ್ತು ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ಗ್ರಾಮ ಸಭೆ ನಡೆಸಿ ಅರ್ಹ ಫಲಾನುಭವಿಗಳಿಗೆ ದನದ ಕೊಟ್ಟಿಗೆ, ಕುರಿ, ಮೇಕೆ ಕೊಟ್ಟಿಗೆ, ಕೊಳವೆ ಬಾವಿ ಮರುಪೂರಣ ಪಿಟ್, ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸುವಂತೆಯೂ ಸೂಚಿಸಿದರು.

ವಾರದಲ್ಲಿ 2 ದಿನ 4 ಗ್ರಾಮಗಳಿಗೆ ಸಿಇಒ ಕಡ್ಡಾಯ ಭೇಟಿ:

ಜಿಲ್ಲಾ ಪಂಚಾಯ್ತಿ ಸಿಇಒ ಕಡ್ಡಾಯವಾಗಿ ವಾರದಲ್ಲಿ 2 ದಿನ ಕನಿಷ್ಠ 4 ಗ್ರಾಮಗಳಿಗೆ ಭೇಟಿ ನೀಡಿ, ರಸ್ತೆ, ನೀರು, ಬೀದಿ ದೀಪ, ಇ-ಸ್ವತ್ತು, ನಕ್ಷೆ ಮಂಜೂರಾತಿ, ನೈರ್ಮಲ್ಯ, ಕೆರೆ ಅಭಿವೃದ್ಧಿ, ವಿಬಿಜಿ ರಾಮ್ ಜಿ ಪ್ರಗತಿ ಕುರಿತಂತೆ ಸಾರ್ವಜನಿಕರ ಅಹವಾಲು ಆಲಿಸಿ ಸ್ಥಳದಲ್ಲೇ ಪರಿಹಾರ ಒದಗಿಸುವಂತೆಯೂ ಸೂಚಿಸಿದರು.

ನೀರಿಗೆ ತೀವ್ರ ಸಮಸ್ಯೆ ಎದುರಾಗುವ ಆತಂಕ:

ಎಲ್ ನಿ ನೋ ಪ್ರಭಾವದಿಂದ ಮಳೆ ಕೊರತೆ ಆಗಿದ್ದು, ಮುಂದಿನ ಬೇಸಿಗೆಯಲ್ಲಿ ನೀರಿನ ತೀವ್ರ ಸಮಸ್ಯೆ ಎದುರಾಗುವ ಸಾಧ್ಯತೆಗಳಿದ್ದು, ಜಲ ಬಜೆಟಿಂಗ್ ಮಾಡಿ, ಯಾವ ಗ್ರಾಮದಲ್ಲಿ ಸಮಸ್ಯೆ ಎದುರಾಗಬಹುದು ಎಂದು ಅಂದಾಜು ಮಾಡಿ, ಈಗಿನಿಂದಲೇ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ, ಜಲ ಮೂಲಗಳನ್ನು ಗುರುತಿಸುವಂತೆ ಸೂಚಿಸಿದರು.

ವಿಬಿಜಿ ರಾಮ್ ಜಿ ಅಡಿಯಲ್ಲಿ ಕೆಲಸ ಮಾಡಿದ ಅಕುಶಲ ಕಾರ್ಮಿಕರಿಗೆ 15 ದಿನಗಳ ಒಳಗಾಗಿ ಕೂಲಿ ಹಣ ಪಾವತಿ ಆಗಬೇಕು. ಈ ಬಗ್ಗೆ ತಾಲೂಕು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ, ಮೇಲ್ವಿಚಾರಣೆ ನಡೆಸಿ ಕೂಲಿ ಪಾವತಿ ಆಗುತ್ತಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವಂತೆ ಉಪ ಕಾರ್ಯದರ್ಶಿ ಮತ್ತು ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆಯೂ ಈಶ್ವರ ಖಂಡ್ರೆ ತಿಳಿಸಿದರು.ನೆಲ್ಲಿಗೆರೆ ಗ್ರಾಪಂಗೆ ಸಚಿವ ಈಶ್ವರ್ ಖಂಡ್ರೆ ಧಿಡೀರ್ ಭೇಟಿಕನ್ನಡಪ್ರಭ ವಾರ್ತೆ ಮಂಡ್ಯನಾಗಮಂಗಲ ತಾಲೂಕಿನ ನೆಲ್ಲೀಗೆರೆ ಗ್ರಾಪಂಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಈಶ್ವರ್ ಖಂಡ್ರೆ ಅವರು ದಿಢೀರನೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ನೌಕರರು ಕಚೇರಿಯಲ್ಲಿ ಇಲ್ಲದೇ ಇರುವುದು ಕಂಡುಬಂದಿದೆ .

ಅಂಚೆ ಚಿಟ್ಟನಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ನೆಲ್ಲೀಗೆರೆ ಗ್ರಾಪಂ ಪ್ರಭಾರವನ್ನು ನೀಡಲಾಗಿದ್ದು, ಅವರು ಬುಧವಾರ ಅಂಚೆ ಚಿಟ್ಟನಹಳ್ಳಿಯಲ್ಲಿ ಕರ್ತವ್ಯದಲ್ಲಿದ್ದರು ಎನ್ನಲಾಗಿದೆ. ಗ್ರಾಮ ಪಂಚಾಯ್ತಿ ಕಾರ್ಯದರ್ಶಿಯು ಸಚಿವರನ್ನು ಸ್ವಾಗತಿಸಲು ಜಿಲ್ಲೆಯ ಗಡಿಗೆ ಹೋಗಿದ್ದರು.ಜಿಲ್ಲೆಯ ಗಡಿಯಲ್ಲಿ ಸಚಿವರನ್ನು ಸ್ವಾಗತಿಸಿದ ನಂತರ ಸಚಿವರು ದಾರಿ ಮಧ್ಯದಲ್ಲಿ ನೆಲ್ಲೀಗೆರೆ ಗ್ರಾಮ ಪಂಚಾಯ್ತಿಗೆ ದಿಢೀರನೆ ಭೇಟಿ ನೀಡಿದ್ದಾರೆ. ಆ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿಯಲ್ಲಿ ಅಟೆಂಡರ್‌ನ್ನು ಹೊರತುಪಡಿಸಿ ಯಾವುದೇ ನೌಕರರು ಕಚೇರಿಯಲ್ಲಿ ಇಲ್ಲದೇ ಇರುವುದು ಸಚಿವರ ಗಮನಕ್ಕೆ ಬಂದಿದೆ. ಕೂಡಲೇ ಸಚಿವ ಈಶ್ವರ್ ಖಂಡ್ರೆ ಅವರು ಮಂಡ್ಯ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಈ ಬಗ್ಗೆ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳನ್ನು ಲವ್‌ ಮಾಡಿದ್ದಕ್ಕೆ ಕೆಲಸಗಾರನ ಹತ್ಯೆ
ಡೇಟಿಂಗ್‌ ಆ್ಯಪಲ್ಲಿ ಪರಿಚಯವಾದಯುವಕನ ದರೋಡೆ: ನಾಲ್ವರ ಸೆರೆ