ನಾಲ್ಕನೇ ದಿನದ ಸಂಕಲ್ಪ ಉತ್ಸವಕ್ಕೆ ಚಾಲನೆ ನೀಡಿದ ನೆಲೆಮಾವು ಮಠದ ಶ್ರೀಗಳು
ಮನಸ್ಸು ಅತಿ ಚಂಚಲವಾದುದು. ಅದನ್ನು ನಿಯಂತ್ರಿಸಬೇಕಾದರೆ ಭಗವದ್ಗೀತೆಯ ಪುರಾಣಗಳು ಔಷಧಿಯಾಗಬಲ್ಲದು. ಯಾವ ವ್ಯಕ್ತಿ ಧರ್ಮದ ದಾರಿಯಲ್ಲಿ ಸಾಗುತ್ತಾನೋ ಆತ ಶ್ರೇಷ್ಠ ವ್ಯಕ್ತಿಯಾಗಿ ರೂಪುಗೊಳ್ಳುತ್ತಾನೆ. ನಾವು ಮಕ್ಕಳನ್ನು ಅತಿಯಾಗಿ ಪ್ರೀತಿಸಿ ಅವರ ಮೇಲೆ ನಿಗಾ ಇಡದೇ ಅವರು ದಾರಿ ತಪ್ಪಿದ ಮೇಲೆ ಚಿಂತೆಗೊಳಗಾಗುತ್ತೇವೆ. ಅದಕ್ಕಾಗಿ ಪ್ರಾರಂಭದಿಂದಲೇ ಸರಿಯಾದ ಸಂಸ್ಕಾರ ನೀಡಬೇಕು ಎಂದು ನೆಲೆಮಾವು ಮಠದ ಜಗದ್ಗುರು ಶ್ರೀಮದ್ ಮಾಧವಾನಂದ ಭಾರತೀ ಮಹಾಸ್ವಾಮಿಗಳು ನುಡಿದರು.
ಸೋಮವಾರ ಪಟ್ಟಣದ ಗಾಂಧೀ ಕುಟೀರದಲ್ಲಿ ೪ನೇ ದಿನದ ಸಂಕಲ್ಪ ಉತ್ಸವಕ್ಕೆ ಚಾಲನೆ ನೀಡಿ, ಸಂಕಲ್ಪ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದರು.ಇಂದು ಅನೇಕರು ಅಧರ್ಮದ ದಾರಿಯಲ್ಲಿ ಸಾಗುತ್ತಿದ್ದಾರೆ. ನಮ್ಮ ಮಕ್ಕಳು ದಾರಿ ತಪ್ಪಿದ ಮೇಲೆ ಸರಿ ದಾರಿಗೆ ತರುವುದು ಕಷ್ಟ. ಹಾಗಾಗಿ ಅವರಿಗೆ ಚಿಕ್ಕಂದಿನಿಂದಲೇ ಸರಿಯಾದ ಸಂಸ್ಕಾರ ನೀಡಬೇಕು. ಹಿಂದೆ ಮಕ್ಕಳಿಗೆ ನೀತಿ, ಪುರಾಣ ಕಥೆಗಳನ್ನು ಹೇಳಲಾಗುತ್ತಿತ್ತು. ಇಂದು ಪಾಲಕರಿಗೆ ಮಕ್ಕಳ ಬಗ್ಗೆ ಗಮನ ಹರಿಸಲು ಸಮಯವೇ ಇಲ್ಲ. ಹಾಗಾಗಿ ಅವರು ಸಮಾಜಘಾತುಕ ವ್ಯಕ್ತಿಗಳಾಗುವುದಕ್ಕೆ ಕಾರಣವಾದೀತು. ಆ ನೆಲೆಯಲ್ಲಿ ಸಂಕಲ್ಪ ಸಂಸ್ಥೆ ಇಷ್ಟೊಂದು ಸುದೀರ್ಘ ಸಮಯದಿಂದ ಇಂತಹ ಉತ್ತಮ ಉತ್ಸವ ಆಚರಿಸಿಕೊಂಡು ಬಂದಿದ್ದಾರೆ. ಇಂದು ಧರ್ಮದ ಚೌಕಟ್ಟಿನಲ್ಲಿ ಕಲಾರಾಧನೆ ನಡೆಯುತ್ತಿದೆ. ಅದರಲ್ಲೂ ಯಕ್ಷಗಾನ ಪ್ರಭಾವೀ ಕಲೆ. ಇಂತಹ ಉತ್ಸವದಲ್ಲಿ ಮಕ್ಕಳನ್ನು ಹೆಚ್ಚೆಚ್ಚು ತೊಡಗಿಸಿಕೊಳ್ಳುವಂತೆ ಪಾಲಕರು ಗಮನಹರಿಸಬೇಕು ಎಂದ ಅವರು, ಇಂದು ಜನರ ಬಳಿ ಹಣವಿದೆ. ನೆಮ್ಮದಿಯಿಲ್ಲ, ಶಾಂತಿಯಿಲ್ಲ ಎಂಬುದನ್ನು ಹೇಳುತ್ತಾರೆ. ಇದೆಲ್ಲದಕ್ಕೂ ಭಗವದ್ಗೀತೆ ಪರಿಹಾರ ನೀಡಬಲ್ಲದು.
ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗೃತ ಮಾತನಾಡಿ, ಈ ಉತ್ಸವ ಅತ್ಯಂತ ಪ್ರಭಾವಪೂರ್ಣವಾದುದು ನೇರಪ್ರಸಾರದಲ್ಲಿ ಉತ್ಸವವನ್ನು ಜನ ಜಗತ್ತಿನಾದ್ಯಂತ ನೋಡುತ್ತಿದ್ದಾರೆ. ಇದು ಕೂಡ ಮಹತ್ವದ ಅಂಶ ಎಂದರು.
ದಿ.ರಾಮಕೃಷ್ಣ ಹೆಗಡೆ ಟ್ರಸ್ಟ್ ಅಧ್ಯಕ್ಷ ಡಾ.ಶಶಿಭೂಷಣ ಹೆಗಡೆ ಮಾತನಾಡಿ, ಉತ್ತರಕನ್ನಡವನ್ನು ವ್ಯವಸ್ಥಿತವಾಗಿ ಪ್ರವಾಸೋದ್ಯಮ ಕೇಂದ್ರವಾಗಿ ಮಾಡುವ ಮೂಲಕ ಜಿಲ್ಲೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಲು ಸಾಧ್ಯವಿದೆ. ಇಲ್ಲಿಯ ಪ್ರಕೃತಿ, ಸಂಸ್ಕೃತಿ, ವೈವಿಧ್ಯತೆ ರಾಷ್ಟ್ರದಲ್ಲೇ ಗಮನಸೆಳೆದಿದೆ ಎಂದರು.
ಮಾವಿನಮನೆ ಸಹಕಾರಿ ಸಂಘದ ಅಧ್ಯಕ್ಷ ಸುಬ್ಬಣ್ಣ ಬೋಳನೆ, ನಿವೃತ್ತ ಶಿಕ್ಷಕ ಸತೀಶ ಯಲ್ಲಾಪುರ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಆರ್.ಎಸ್.ಭಟ್ಟ ಚಿಂತಕ ಕಾಶ್ಯಪ ಪರ್ಣಕುಟಿ, ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ ಅಲ್ಪಯ್ಯನವರಮಠ, ಗೀತಭಿಯಾನದ ಮಾತೆಯರಾದ ಮಹಾದೇವಿ ಭಟ್ಟ ವಿನುತಾ ಕೋಟೆಮನೆ ಉಪಸ್ಥಿತರಿದ್ದರು. ಶಾರದಾಂಬಾ ಪಾಠಶಾಲೆಯ ಕಾರ್ತಿಕೇಯ ಭಟ್ಟ ಶ್ರೀಹರಿ ಮೆಣಸುಮನೆ ವೇದಘೋಷ ಪರಿಸಿದರು. ಪದ್ಮಾ ಪ್ರಮೋದ ಹೆಗಡೆ ಪ್ರಾರ್ಥಿಸಿದರು. ಸರೋಜಾ ಮತ್ತು ಸಂಕಲ್ಪದ ಉಪಾಧ್ಯಕ್ಷ ಪ್ರಶಾಂತ ಹೆಗಡೆ ಶ್ರೀಗಳಿಗೆ ಫಲಪುಷ್ಪ ಸಮರ್ಪಿಸಿದರು. ಸಂಚಾಲಕ ಪ್ರಸಾದ ಹೆಗಡೆ ಪ್ರಾಸ್ತಾವಿಕ ಮಾತನಾಡಿ, ವಂದಿಸಿದರು. ಸಾಮಾಜಿಕ ಕಾರ್ಯಕರ್ತ ಬಾಬು ಬಾಂದೇಕರ ಸ್ವಾಗತಿಸಿದರು. ಯೋಗ ಶಿಕ್ಷಕ ಸುಬ್ರಾಯ ಭಟ್ಟ ಆನೆಜಡ್ಡಿ ನಿರ್ವವಹಿಸಿದರು. ಶ್ರೀಪಾದ ಸಾತೊಡ್ಡಿ ಸನ್ಮಾನಪತ್ರ ವಾಚಿಸಿದರು.