ಸಮಾನತೆಯ ಹರಿಕಾರ ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತೀಯರ ದೇಹಕ್ಕೆ ಅಂಟಿದ ಜಾತಿಯನ್ನು ವಿನಾಶ ಮಾಡಲು ತಮ್ಮ ಬದುಕನ್ನೇ ಮುಡುಪಾಗಿಟ್ಟರು.
ಗದಗ: ಭಾರತದ ಸಂವಿಧಾನ ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆಗಳನ್ನು ಒಳಗೊಂಡ ಒಂದು ಅಪರೂಪದ ಶಾಸನ ಗ್ರಂಥ. ಸಂವಿಧಾನವನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ತಿಳಿಸಿದರು.
ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಅಡಿಯಲ್ಲಿ ಜರುಗಿದ 2753ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಸಮಾನತೆಯ ಹರಿಕಾರ ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತೀಯರ ದೇಹಕ್ಕೆ ಅಂಟಿದ ಜಾತಿಯನ್ನು ವಿನಾಶ ಮಾಡಲು ತಮ್ಮ ಬದುಕನ್ನೇ ಮುಡುಪಾಗಿಟ್ಟರು. ಪ್ರತಿಭೆ ಯಾರ ಸ್ವತ್ತು ಅಲ್ಲ. ಪ್ರತಿಭೆಯೊಂದಿಗೆ ಪರಿಶ್ರಮ ಬೆರೆತಾಗ ಯಶ ಎಂಬುದು ದಕ್ಕುತ್ತದೆ. ಆದ್ದರಿಂದ ಮನುಷ್ಯ ಪ್ರತಿಭೆ ಪರಿಶ್ರಮ ಮತ್ತು ಪ್ರಯತ್ನಗಳ ಮೂಲಕ ಹೊಸದನ್ನು ಸೃಷ್ಟಿಸಲು ಸಾಧ್ಯವಿದೆ. ಇದಕ್ಕೆ ಅಂಬೇಡ್ಕರ್ ಸಾಕ್ಷಿಯಾಗಿದ್ದಾರೆ ಎಂದರು. ಶಿರಹಟ್ಟಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಅನುಷಾ ಎಚ್.ಸಿ. ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಅವರು ಕಾಲಾತೀತ, ಧರ್ಮಾತೀತ ಮತ್ತು ತತ್ವಾತೀತರು. ಅವರನ್ನು ಕೇವಲ ಒಂದು ಸಿದ್ಧಾಂತಕ್ಕೆ ಅಂಟಿಸುವುದು ತರವಲ್ಲ. ಅಂಬೇಡ್ಕರ್ ಅವರಿಗೆ ಬುದ್ಧನ ವಿಚಾರಧಾರೆಗಳು ಸ್ಪಷ್ಟವಾಗಿ ಗೊತ್ತಿದ್ದವು. ಆದರೆ ಕನ್ನಡದ ಶರಣರ, ಅವರ ವಚನಗಳ ಅರಿವು ಅಂಬೇಡ್ಕರ್ ಅವರಿಗೆ ಇರಲಿಲ್ಲ. ಆದರೂ ವಚನಗಳ ಸಾರ ಸಂಗ್ರಹವೇ ಸಂವಿಧಾನದಲ್ಲಿದೆ ಎಂದರು. ಪ್ರೊ. ಕೆ.ಎಚ್. ಬೇಲೂರು ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬುದ್ಧ, ಬಸವಣ್ಣನವರ ಸಿದ್ಧಾಂತಗಳೆಲ್ಲವನ್ನು ಗದುಗಿನ ಜಗದ್ಗುರು ತೋಂಟದಾರ್ಯ ಮಠ ಹಾಗೂ ಮಠದ ಶ್ರೀಗಳು ನಿಜಾಚರಣೆಯಲ್ಲಿ ತರುತ್ತಿರುವುದು ನಿಜಕ್ಕೂ ನನ್ನಂತಹ ಅನೇಕ ವ್ಯಕ್ತಿಗಳಿಗೆ ಅದ್ಭುತವಾಗಿ ಬದುಕನ್ನು ಕಟ್ಟಿಕೊಳ್ಳಲು ಪ್ರೇರಣೆಯನ್ನು ನೀಡಿದಂತಾಗಿದೆ ಎಂದರು. ಈ ವೇಳೆ 2025- 26ನೇ ಸಾಲಿನ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿಜ್ಞಾನ ವಿಭಾಗದ ಸಮೃದ್ಧಿ ಸದ್ಧಲಿಂಗ, ಕಲಾ ವಿಭಾಗದ ಹುಲಿಗೆಮ್ಮ, ವಾಣಿಜ್ಯ ವಿಭಾಗದ ಪದ್ಮಪ್ರಿಯ ಶೆಟ್ಟರ್ ಹಾಗೂ ಗೀತಾ ಹೂಗಾರ ಅವರನ್ನು ಸನ್ಮಾನಿಸಲಾಯಿತು. ಲಿಂಗಾಯತ ಪ್ರಗತಿಶೀಲ ಸಂಘದ ಸದಸ್ಯರು, ಪದಾಧಿಕಾರಿಗಳು, ಶ್ರೀಮಠದ ಭಕ್ತರು ಇದ್ದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಅವರು ಸ್ವಾಗತಿಸಿದರು. ಡಾ. ರಮೇಶ್ ಕಲ್ಲನಗೌಡರ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.