ಗದಗ: ಜ್ಞಾನವೇ ಸಮಾಜದ ಪ್ರಗತಿಯ ಮೂಲವಾಗಿದ್ದು, ಮನೆ ಮನೆಗೂ ಅರಿವಿನ ಬೆಳಕು ತಲುಪಿಸುವ ಉದ್ದೇಶದಿಂದ ಮನೆಗೊಂದು ಗ್ರಂಥಾಲಯ ಯೋಜನೆ ಜಾರಿಗೊಳ್ಳುತ್ತಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ತಿಳಿಸಿದರು.ರಾಜ್ಯ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ವಿ. ಬಳ್ಳಾರಿ ಅವರ ಅಭಿನವ ನಗರದಲ್ಲಿನ ನಿವಾಸದಲ್ಲಿ ಬುಧವಾರ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗೃತಿ ಸಮಿತಿ ಸಹಯೋಗದಲ್ಲಿ ನಡೆದ ಮನೆಗೊಂದು ಗ್ರಂಥಾಲಯ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಮಾತನಾಡಿ, ನಾವು ಮನೆಯಲ್ಲಿ ದೇವರಿಗಾಗಿ ಪ್ರತ್ಯೇಕವಾಗಿ ಹೇಗೆ ದೇವರ ಕೋಣೆಯನ್ನು ಮೀಸಲಿಡುತ್ತೇವೆಯೋ, ಹಾಗೆಯೇ ಮನೆಯಲ್ಲಿ ಐದೋ ಹತ್ತೋ ಪುಸ್ತಕಗಳನ್ನಿಟ್ಟುಕೊಂಡು ಒಂದು ಪುಟ್ಟ ಗ್ರಂಥಾಲಯ ಮಾಡಿಕೊಳ್ಳಬೇಕು. ಅದು ನಮ್ಮ ಪಾಲಿನ ಜ್ಞಾನದ ದೇವಾಲಯವಾಗಲಿದೆ ಎಂದರು.ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದ ಗೌಡ ಪಾಟೀಲ ಮಾತನಾಡಿ, ಪ್ರತಿಯೊಬ್ಬರ ಮನೆಯಲ್ಲಿಯೂ ಸಣ್ಣದೊಂದು ಗ್ರಂಥಾಲಯವಿದ್ದರೆ ಆ ಮನೆಯಲ್ಲಿ ಜ್ಞಾನದ ದೀಪ ಬೆಳಗಲು ಸಾಧ್ಯ. ಪುಸ್ತಕ ಓದುವ ಹವ್ಯಾಸ ಕೇವಲ ವ್ಯಕ್ತಿಯ ಬೆಳವಣಿಗೆಯಲ್ಲದೆ, ಸಮಾಜದ ಪ್ರಗತಿಗೂ ಪೂರಕ ಎಂದರು.ಜಿಲ್ಲಾ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ. ಶಿವಪ್ಪ ಕುರಿ, ಸಂಚಾಲಕ ಸಂತೋಷ ಅಂಗಡಿ ಮಾತನಾಡಿದರು. ಈ ಸಂದರ್ಭದಲ್ಲಿ ಡಾ. ಮಾನಸ, ಡಾ. ರವಿ ಗುಂಜೀಕರ ಹಾಗೂ ಜಿಲ್ಲಾ ಜಾಗೃತಿ ಸಮಿತಿಯ ಸಂಚಾಲಕರನ್ನು ಸನ್ಮಾನಿಸಲಾಯಿತು.ಸಂಚಾಲಕ ಎ.ಎಸ್. ಮಕಾಂದಾರ, ಜಾನಪದ ಸಾಹಿತ್ಯ ಪರಿಷತ್ ಸದಸ್ಯ ಶಂಕ್ರಣ್ಣ ಸಂಕಣ್ಣವರ, ಕೆ.ಎಫ್. ಹಳ್ಯಾಳ, ಎಚ್.ಎಂ. ಶರೀಫನವರ, ಅಶೋಕ ಬರಗುಂಡಿ, ಮುತ್ತು ಬಳಿಯಲಿ, ನಿವೃತ್ತ ಶಿಕ್ಷಕ ಕೆ.ಎಫ್. ಬಳ್ಳಾರಿ, ಜಿಪಂ ಮಾಜಿ ಕೋಶಾಧ್ಯಕ್ಷ ಆರ್.ಎಂ. ನಿಂಬನಾಯ್ಕರ್, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ವಿಭೂತಿ, ಎಂ.ಎಂ. ನಿಟ್ಟಾಲಿ, ಸಿದ್ದಪ್ಪ ಲಿಂಗದಾಳ, ಲಕ್ಷಣರೆಡ್ಡಿ ಮುದಗಣ್ಣವರ, ರಾಜು ಕಂತಿಗೊಣ್ಣವರ, ರಾಜಕುಮಾರ ಸೊಪಡ್ಲ ಸೇರಿದಂತೆ ಅನೇಕ ಸಾಹಿತ್ಯ ಅಭಿಮಾನಿಗಳು ಇದ್ದರು.