ವಿನಯ್‌ ರಾಜಕೀಯ ಭವಿಷ್ಯಕ್ಕೇ ಮುಳುವು?

KannadaprabhaNewsNetwork |  
Published : Apr 16, 2026, 02:15 AM IST
ವಿನಯ ಕುಲಕರ್ಣಿ | Kannada Prabha

ಸಾರಾಂಶ

ರಾಜಕೀಯವಾಗಿ ಯೋಗೇಶಗೌಡ ಬೆಳೆಯುತ್ತಿರುವುದನ್ನು ಸಹಿಸದೇ ಸುಪಾರಿ ಕೊಟ್ಟು ಮಾಡಿಸಿದ್ದ ಕೊಲೆ ಇದೀಗ ವಿನಯ್‌ ಕುಲಕರ್ಣಿ ರಾಜಕೀಯ ಭವಿಷ್ಯಕ್ಕೆ ಕಂಟಕವಾಗಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಇಡೀ ರಾಜ್ಯ ರಾಜಕೀಯದಲ್ಲೇ ತೀವ್ರ ಸಂಚಲನ ಉಂಟು ಮಾಡಿದ್ದ ಧಾರವಾಡ ಜಿಪಂ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದ ತೀರ್ಫು ಬರೋಬ್ಬರಿ 10 ವರ್ಷದ ಬಳಿಕ ಹೊರಬಂದಿದ್ದು, ಮಾಜಿ ಸಚಿವ, ಶಾಸಕ ವಿನಯ್‌ ಕುಲಕರ್ಣಿ ಸೇರಿದಂತೆ 17 ಜನ ಆರೋಪಿಗಳು ಅಪರಾಧಿಗಳೆಂದು ನ್ಯಾಯಾಲಯ ಘೋಷಿಸಿದೆ. ಇದರಿಂದಾಗಿ ವಿನಯ್‌ಗೆ ಸಂಕಷ್ಟ ಎದುರಾಗಿದೆ.ರಾಜಕೀಯವಾಗಿ ಯೋಗೇಶಗೌಡ ಬೆಳೆಯುತ್ತಿರುವುದನ್ನು ಸಹಿಸದೇ ಸುಪಾರಿ ಕೊಟ್ಟು ಮಾಡಿಸಿದ್ದ ಕೊಲೆ ಇದೀಗ ವಿನಯ್‌ ಕುಲಕರ್ಣಿ ರಾಜಕೀಯ ಭವಿಷ್ಯಕ್ಕೆ ಕಂಟಕವಾಗಿದೆ.ಏನೇನಾಗಿತ್ತು?

ಬಿಜೆಪಿಯಿಂದ ಜಿಪಂ ಸದಸ್ಯನಾಗಿದ್ದ ಯೋಗೇಶಗೌಡ ರಾಜಕೀಯವಾಗಿ ಹಂತ ಹಂತವಾಗಿ ಬೆಳೆಯುತ್ತಿದ್ದ. ಇದನ್ನು ಆಗ ಮಂತ್ರಿಯಾಗಿದ್ದ ವಿನಯ್‌ ಕುಲಕರ್ಣಿಗೆ ಸಹಿಸಲು ಆಗದೇ ಮುಂದೆ ತಮ್ಮ ರಾಜಕೀಯ ಎದುರಾಳಿಯಾಗಬಹುದು ಎಂದು ದ್ವೇಷ ಸಾಧಿಸುತ್ತಿದ್ದರಂತೆ.

2016ರ ಜೂನ್‌ 15ರಂದು ಧಾರವಾಡದ ಸಪ್ತಾಪುರ ಬಡಾವಣೆಯ ತಮ್ಮದೇ ಮಾಲೀಕತ್ವದ ಉದಯ್ ಜಿಮ್‌ನಲ್ಲಿ ಯೋಗೇಶಗೌಡ ಅವರ ಹತ್ಯೆ ನಡೆದಿತ್ತು. ಇದೊಂದು ಜಮೀನಿನ ವಿವಾದದ ಪ್ರಕರಣವೆಂದು ಪೊಲೀಸರು ತನಿಖೆ ನಡೆಸಿ ಎರಡೇ ದಿನದಲ್ಲಿ ಆರೋಪಿಗಳನ್ನು ಬಂಧಿಸಿದ್ದರು.

ಇದು ರಾಜಕೀಯ ದ್ವೇಷದಿಂದ ಆದಂತಹ ಕೊಲೆ ಸಿಬಿಐಗೆ ವಹಿಸಿ ಎಂದು ಯೋಗೇಶಗೌಡ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಇದ್ದರು. 2018ರ ವರೆಗೂ ಇದೇ ಆಗಿತ್ತು. ಮುಂದೆ ರಾಜ್ಯದ ಕಾಂಗ್ರೆಸ್‌ ಸರ್ಕಾರ ಬದಲಾಗಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಬಳಿಕ ಈ ಪ್ರಕರಣವನ್ನು ಬಿಜೆಪಿ ಸರ್ಕಾರ ಸಿಬಿಐಗೆ ವಹಿಸಿತ್ತು.

ವಿನಯ್‌ ಬಂಧನ; ಬಿಡುಗಡೆ

2019 ಸೆಪ್ಟೆಂಬರ್‌ನಲ್ಲಿ ತನಿಖೆಯ ಜವಾಬ್ದಾರಿ ಹೊತ್ತುಕೊಂಡ ಸಿಬಿಐ, ಮೊದಲಿದ್ದ 6 ಜನ ಆರೋಪಿಗಳ ಜತೆಗೆ ಮತ್ತೆ 15 ಜನ ಹೊಸ ಆರೋಪಿಗಳನ್ನು ಸೇರಿಸಿತ್ತು. ಮಾಜಿ ಸಚಿವ, ಶಾಸಕ ವಿನಯ್‌ ಕುಲಕರ್ಣಿ ಹೆಸರು ಪ್ರಬಲವಾಗಿತ್ತು.

ಸಾಕ್ಷಿ ನಾಶದ ಆರೋಪದ ಹಿನ್ನೆಲೆಯಲ್ಲಿ 2020ರಲ್ಲಿ ನವೆಂಬರ್‌ನಲ್ಲಿ ವಿನಯ್‌ ಬಂಧನವಾಗಿತ್ತು. 2021ರ ಆಗಸ್ಟ್‌ನಲ್ಲಿ ಅಂದರೆ ಬರೋಬ್ಬರಿ 9 ತಿಂಗಳ ಬಳಿಕ ವಿನಯ್‌ಗೆ ಜಾಮೀನು ಸಿಕ್ಕಿತ್ತಾದರೂ ಧಾರವಾಡ ಜಿಲ್ಲೆ ಪ್ರವೇಶಕ್ಕೆ ನಿಷೇಧ ಹೇರಿತ್ತು. ಅಂದಿನಿಂದ ಈವರೆಗೂ ವಿನಯ್‌ ಧಾರವಾಡ ಜಿಲ್ಲೆಗೆ ಪ್ರವೇಶವೇ ಪಡೆದಿಲ್ಲ. 2023ರ ಚುನಾವಣೆಯನ್ನು ಜಿಲ್ಲೆಯ ಹೊರಗಿದ್ದುಕೊಂಡೇ ವಿನಯ್‌ ಗೆದ್ದಿದ್ದಾರೆ.

ಸಿಬಿಐ ತನಿಖೆಯಿಂದ ನಿಜವಾದ ಆರೋಪಿಗಳ ಬಂಧನವೂ ಆಯಿತು. ಮೊದಲು ತನಿಖೆ ಮಾಡಿ ಪ್ರಕರಣದ ದಿಕ್ಕನೇ ತಪ್ಪಿಸಿದ್ದ ಪೊಲೀಸ್‌ ಅಧಿಕಾರಿಗಳೂ ವಿಚಾರಣೆ ಎದುರಿಸಿದ್ದರು. ಆರೋಪಿಗಳೂ ಆಗಿದ್ದು ಈ ಪ್ರಕರಣದ ವಿಶೇಷ. ಪರಮಾಪ್ತನೇ ತಿರುಗಿ ಬಿದ್ದ!

ವಿನಯ್‌ ಕುಲಕರ್ಣಿ ಪರಮಾಪ್ತ, ಪೊಲೀಸರು ನಡೆಸಿದ್ದ ತನಿಖೆಯಲ್ಲಿ ಮೊದಲ ಆರೋಪಿಯಾಗಿದ್ದ ಬಸವರಾಜ ಮುತ್ತಗಿ ಮಾಫಿ ಸಾಕ್ಷಿಯಾಗುವ ಮೂಲಕ ವಿನಯ್‌ ವಿರುದ್ಧವೇ ತಿರುಗಿ ಬಿದ್ದಿದ್ದರು. ಹಾಗೆ ನೋಡಿದರೆ ಮೊದಲಿಗೆ ಮುತ್ತಗಿ ವಿನಯ್‌ಗೆ ನಿಷ್ಠವಾಗಿಯೇ ಇದ್ದ. ಯಾವಾಗ ಸಿಬಿಐ ವಿಚಾರಣೆ ಒಂದು ಹಂತಕ್ಕೆ ಬರುತ್ತಿದ್ದಂತೆ ಮುತ್ತಗಿಯನ್ನೇ ಮುಗಿಸಲು ವಿನಯ್‌ ಕುಲಕರ್ಣಿ ಸುಪಾರಿ ಕೊಟ್ಟಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದರಿಂದ ರೊಚ್ಚಿಗೆದ್ದ ಮುತ್ತಗಿ ತನ್ನ ಗುರು ವಿನಯ್‌ ವಿರುದ್ಧ ಸಾಕ್ಷಿಯಾದರು. ಜತೆಗೆ ಮಾಫಿ ಸಾಕ್ಷಿಯಾಗುವುದಾಗಿ ಲಿಖಿತ ಅರ್ಜಿ ಕೂಡ ಸಲ್ಲಿಸಿದ್ದನು. ಈ ಎಲ್ಲದರ ನಡುವೆಯೇ 2025ರಲ್ಲಿ ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂಬ ಆರೋಪದ ಮೇಲೆ ಸುಪ್ರೀಂ ಕೋರ್ಟ್‌ ವಿನಯ್‌ಗೆ ನೀಡಿದ್ದ ಜಾಮೀನನ್ನು ರದ್ದುಪಡಿಸಿತ್ತು. ಇದರಿಂದಾಗಿ 2025ರ ಜೂನ್‌ನಲ್ಲಿ ಮತ್ತೆ ಜೈಲು ಪಾಲಾಗಿದ್ದ ವಿನಯ್‌ ಕುಲಕರ್ಣಿಗೆ 2026ರ ಫೆಬ್ರವರಿಯಲ್ಲಷ್ಟೇ ಮತ್ತೆ ಜಾಮೀನು ಮಂಜೂರಾಗಿ ಹೊರಬಂದಿದ್ದರು.

ಇದರಿಂದಾಗಿ ಪ್ರಕರಣದಲ್ಲಿ 2 ಬಾರಿ ಆರೋಪಿಯಾಗಿ ಜೈಲುವಾಸ ಅನುಭವಿಸಿದ್ದ ವಿನಯ್‌ ಇದೀಗ, ಅಪರಾಧಿಯಾಗಿ ಜೈಲು ಸೇರಿದ್ದಾರೆ.

ರಾಜಕೀಯವಾಗಿ ಮುಳುವಾಗುತ್ತಾನೆ ಎಂದು ಸುಪಾರಿ ಕೊಟ್ಟು ಮಾಡಿಸಿದ ಕೊಲೆ, ಇದೀಗ ವಿನಯ್‌ ರಾಜಕೀಯ ಭವಿಷ್ಯಕ್ಕೆ ಮುಳುವಾದಂತಾಗಿದೆ.

123 ಸಾಕ್ಷಿ

ಈ ಪ್ರಕರಣದಲ್ಲಿ ಒಟ್ಟು 123 ಸಾಕ್ಷಿಗಳಿದ್ದಾರೆ. ಈ ಮುಂಚೆ ಪ್ರಮುಖ ಆರೋಪಿಗಳ ಪೈಕಿ ಮೊದಲ ಆರೋಪಿ ಬಸವರಾಜ ಮುತ್ತಗಿ ಸೇರಿದಂತೆ ಇಬ್ಬರು ಹಾಗೂ ಓರ್ವ ಪೊಲೀಸ್ ಅಧಿಕಾರಿ ಮಾಫಿ ಸಾಕ್ಷಿಯಾಗಿದ್ದರು.

ಪ್ರಕರಣದ ತನಿಖೆ ನಡೆಸಿದ್ದ ಡಿವೈಎಸ್ಪಿ ತುಳಜಪ್ಪ ಸುಲ್ಫಿ ಕೂಡ ಆರೋಪಿಗಳಲ್ಲೊಬ್ಬರು ಆಗಿರುವುದು ಗಮನಾರ್ಹ. ಇವರು ಯೋಗೇಶಗೌಡ ಸಹೋದರ ಗುರುನಾಥಗೌಡ ಅವರಿಗೆ ಆಮಿಷ ಒಡ್ಡಿ ಪ್ರಕರಣ ಹಿಂಪಡೆಯುವಂತೆ ಪ್ರಯತ್ನಿಸಿದ್ದರು. ಈ ಮೂಲಕ ಪ್ರಕರಣ ಮುಚ್ಚಿ ಹಾಕುವ ಯತ್ನ ಮಾಡಿದ್ದರು ಎಂಬ ಆರೋಪ ಇದೆ.

ಮಾತು ಬದಲಿಸಿದ್ದ ಪತ್ನಿ:

ಯೋಗೇಶಗೌಡ ಪತ್ನಿ ಮಲ್ಲಮ್ಮ ಮೊದಲಿಗೆ ಆರೋಪಿಗಳ ವಿರುದ್ಧ ಹೋರಾಟ ನಡೆಸಿ ಸಿಬಿಐಗೆ ತನಿಖೆ ವಹಿಸಬೇಕು ಎಂದು ಒತ್ತಾಯಿಸಿದ್ದುಂಟು. ಆದರೆ ಮುಂದೆ ಏನಾಯಿತೋ ತನ್ನ ಹೇಳಿಕೆ ಬದಲಿಸಿ, ವಿನಯ್‌ ಕುಲಕರ್ಣಿ ಅವರೊಂದಿಗೆ ಗುರುತಿಸಿಕೊಂಡಿದ್ದರು. ಅಲ್ಲದೇ, 2019 ಲೋಕಸಭೆ ಚುನಾವಣೆಯಲ್ಲಿ ವಿನಯ್‌ ಕುಲಕರ್ಣಿ ಪರವಾಗಿ ಪ್ರಚಾರದಲ್ಲಿ ತೊಡಗುವ ಮೂಲಕ ಅಚ್ಚರಿಯನ್ನುಂಟು ಮಾಡಿದ್ದರು. ಆದರೆ ಈ ಬಗ್ಗೆ ತಲೆ ಕೆಡಿಸಿಕೊಳ್ಳದೇ ಯೋಗೇಶಗೌಡ ಸಹೋದರ ಗುರುನಾಥಗೌಡ ಕೊನೆವರೆಗೂ ಸಹೋದರನ ಸಾವಿಗೆ ನ್ಯಾಯ ಒದಗಿಸಲು ಹೋರಾಟ ನಡೆಸಿದರು.

ಜೀವ ಬೆದರಿಕೆಗೆ ಭದ್ರತೆ:

ಈ ಮಧ್ಯೆ, ತನಗೆ ಹಾಗೂ ತನ್ನ ಕುಟುಂಬಕ್ಕೆ ಪ್ರಕರಣದ 9ನೇ ಆರೋಪಿ ಅಶ್ವತ್ಥನಿಂದ ಜೀವ ಬೆದರಿಕೆ ಇದೆ ಎಂದು ಬಸವರಾಜ ಮುತ್ತಗಿ ನ್ಯಾಯಾಲಯಕ್ಕೆ ಹೇಳಿದ್ದನು. ಇದೇ ವೇಳೆ ತಾನು ತಪ್ಯೂಪ್ಪಿಗೆ ನೀಡುತ್ತೇನೆ ಎಂದು ಹೇಳಿದ ಬಳಿಕ ಜೀವ ಬೆದರಿಕೆ ಹೆಚ್ಚುತ್ತಿದೆ. ಇದೇ ಕಾರಣಕ್ಕೆ ನ್ಯಾಯಾಲಯದ ಆದೇಶದಂತೆ ಬಸವರಾಜ ಮುತ್ತಗಿ ಹಾಗೂ ಆತನ ಕುಟುಂಬಕ್ಕೆ ಪೊಲೀಸರು ಭದ್ರತೆ ನೀಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧರ್ಮವೇ ಪ್ರಪಂಚಕ್ಕೆ ಆಧಾರ ನಮ್ಮದು ಮಾತ್ರ ಧರ್ಮ ಉಳಿದವು ಮತಗಳು: ವಿಧುಶೇಖರ ಶ್ರೀಗಳು
ಲ್ಯಾಂಡ್ ಜಿಹಾದ್: ಪ್ರಮೋದ್ ಮುತಾಲಿಕ್ ಆಕ್ರೋಶ