ಜಗನ್ನಾಥ, ಲೋಕೇಶ ಕುಟುಂಬಕ್ಕೆ ₹5 ಲಕ್ಷ ಪರಿಹಾರ ವಿತರಿಸಿದ ಜಿಲ್ಲಾ ಉಸ್ತುವಾರಿ ಸಚಿವ

KannadaprabhaNewsNetwork |  
Published : Nov 11, 2024, 11:54 PM IST
ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ವಿತರಿಸಲಾಯಿತು. | Kannada Prabha

ಸಾರಾಂಶ

ಜಗನ್ನಾಥ, ಲೋಕೇಶ ಕುಟುಂಬದವರು ಮರಣ ಪ್ರಮಾಣಪತ್ರ ನೀಡಲು ಕೋರಿದ್ದು, ಕಾನೂನಿನಲ್ಲಿ ೭ ವರ್ಷವಾಗಬೇಕು ಎಂದಿದೆ. ಸಾಧ್ಯವಾದರೆ ಅದರಲ್ಲಿ ಬದಲಾವಣೆ ಮಾಡಿ ಪ್ರಮಾಣಪತ್ರ ನೀಡಲು ಕಾನೂನಾತ್ಮಕವಾಗಿ ಪ್ರಯತ್ನ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು.

ಕಾರವಾರ: ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದಲ್ಲಿ ಕಣ್ಮರೆಯಾದ ಲೋಕೇಶ, ಜಗನ್ನಾಥ ಕುಟುಂಬಕ್ಕೆ ₹೫ ಲಕ್ಷ ಪರಿಹಾರ ನೀಡಲಾಗಿದೆ. ಅಲಗೇರಿ ನಾಗರಿಕ ವಿಮಾನ ನಿಲ್ದಾಣದ ನಿರಾಶ್ರಿತರ ಮೂರು ಕುಟುಂಬಕ್ಕೆ ಸಾಂಕೇತಿಕವಾಗಿ ಪರಿಹಾರ ವಿತರಣೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಪರಿಹಾರ ವಿತರಣೆ ಮಾಡಿ ಮಾತನಾಡಿ, ಜಗನ್ನಾಥ, ಲೋಕೇಶ ಕುಟುಂಬದವರು ಮರಣ ಪ್ರಮಾಣಪತ್ರ ನೀಡಲು ಕೋರಿದ್ದು, ಕಾನೂನಿನಲ್ಲಿ ೭ ವರ್ಷವಾಗಬೇಕು ಎಂದಿದೆ. ಸಾಧ್ಯವಾದರೆ ಅದರಲ್ಲಿ ಬದಲಾವಣೆ ಮಾಡಿ ಪ್ರಮಾಣಪತ್ರ ನೀಡಲು ಕಾನೂನಾತ್ಮಕವಾಗಿ ಪ್ರಯತ್ನ ಮಾಡುತ್ತೇವೆ ಎಂದರು.ಮರಳು ಸಮಸ್ಯೆ ಕುರಿತು ಕೇಳಿದಾಗ, ಇದು ಇಂದು ನಿನ್ನೆಯ ಸಮಸ್ಯೆಯಲ್ಲ. ಮರಳಿನ ಸಮಸ್ಯೆ ಬಗೆಹರಿಯುತ್ತದೆ. ರಾಷ್ಟ್ರೀಯ ಹಸಿರು ಪೀಠದಲ್ಲಿ ಪ್ರಕರಣವಿದ್ದು, ಮುಂದಿನ ಜನವರಿಯಲ್ಲಿ ವಿಚಾರಣೆಯಿದೆ. ಏನಾದರೂ ಮಾಡಿ ಜನರಿಗೆ ಸಮಸ್ಯೆ ಆಗದಂತೆ ಮಾಡುತ್ತೇವೆ ಎಂದ ಅವರು, ಜಿಪಂ, ಪಿಡಬ್ಲ್ಯುಡಿ, ರಾಜ್ಯ ಹೆದ್ದಾರಿಗಳಿಗೆ ಹೊಂಡ ತುಂಬಲು ಅನುದಾನ ಬಿಡುಗಡೆಯಾಗಿದ್ದು, ಕೆಲಸ ಪ್ರಾರಂಭವಾಗಲಿದೆ. ಅಭಿವೃದ್ಧಿಗೆ ಯಾವ ರೀತಿಯ ತೊಂದರೆಯೂ ಆಗುವುದಿಲ್ಲ ಎಂದು ಭರವಸೆ ನೀಡಿದರು.ಶಿರೂರು ಗುಡ್ಡ ಕುಸಿತದ ಬಳಿಕ ಸಿಕ್ಕ ಮೂಳೆ ಡಿಎನ್‌ಎ ಪರೀಕ್ಷೆಗೆ ತಜ್ಞರು ತರಬೇಕಿದೆ. ವರದಿ ಸಿಗುತ್ತದೆ ಎನ್ನುವ ನಂಬಿಕೆಯಿದೆ. ಗಂಗಾವಳಿ ನದಿಯಲ್ಲಿ ಮಣ್ಣು ಸಂಗ್ರಹವಾಗಿರುವುದರಿಂದ ತೊಂದರೆ ಉಂಟಾಗುವ ಸಾಧ್ಯತೆಯಿದೆ. ಅದನ್ನು ಏನು ಮಾಡಬೇಕು ಎಂದು ಚಿಂತನೆ ಮಾಡಲಾಗುತ್ತಿದೆ. ತಜ್ಞರ ಸಲಹೆ ಪಡೆದು ಕ್ರಮ ವಹಿಸುತ್ತೇವೆ. ಕರಾವಳಿ ಉತ್ಸವವನ್ನು ಈ ಬಾರಿ ಮಾಡುತ್ತೇವೆ. ಜತೆಗೆ ನ. ೨೧, ೨೨ರಂದು ಮುರುಡೇಶ್ವರದ ಆರ್‌ಎನ್‌ಎಸ್ ಗಲ್ಫ್ ಕ್ಲಬ್‌ನಲ್ಲಿ ವಿಶ್ವ ಮೀನುಗಾರಿಕಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಆಗಮಿಸಲಿದ್ದಾರೆ. ಮೀನು ಪ್ರದರ್ಶನ, ಮೀನುಗಾರರಿಗೆ ಇರುವ ಸೌಲಭ್ಯದವಿದೆ ಎನ್ನುವ ಬಗ್ಗೆ ತಿಳಿಸಲಿದ್ದೇವೆ ಎಂದು ಮಾಹಿತಿ ನೀಡಿದರು.ಕಾಗೇರಿ ಎದುರಿಸಬೇಕು: ಶಿರಸಿ ಕುಮಟಾ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ವಿಚಾರವಾಗಿ ಮಾತನಾಡಿ, ಈ ರಸ್ತೆಯ ಮಧ್ಯೆ ಭಾಗದಲ್ಲಿ ಮನೆ ಇರುವವರಿಗೆ ಓಡಾಟಕ್ಕೆ ತೊಂದರೆ ಆಗುತ್ತದೆ. ಯಲ್ಲಾಪುರಕ್ಕೆ ಹೋಗಿ ಅಥವಾ ಸಿದ್ದಾಪುರಕ್ಕೆ ಹೋಗಿ ಶಿರಸಿಯಿಂದ ಮನೆಗೆ ಹೋಗಬೇಕು. ಇದರಿಂದ ಸುತ್ತುವರಿದು ಹೋದಂತಾಗುತ್ತದೆ. ಜನರಿಗೆ ತೊಂದರೆ ಆಗುತ್ತದೆ. ಹೀಗಾಗಿ ವೈಯಕ್ತಿಕವಾಗಿ ಈ ರಸ್ತೆ ಬಂದ್ ಮಾಡಬಾರದು ಎನ್ನುವುದು ತಮ್ಮ ಅಭಿಪ್ರಾಯವಾಗಿದೆ. ಆದರೆ ಸಂಸದ ವಿಶ್ವೇಶರ ಹೆಗಡೆ ಕಾಗೇರಿ ಬಂದ್ ಮಾಡಬೇಕು ಎಂದಿದ್ದಾರೆ. ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಕೂಡಾ ಅದೇ ರೀತಿ ಹೇಳಿದ್ದಾರೆ. ಇಬ್ಬರೂ ಈ ಜಿಲ್ಲೆಯನ್ನು ಇಬ್ಬರೂ ಆಳಿದ್ದಾರೆ. ಅವರು ನಿರ್ಧಾರ ಮಾಡಿದ್ದಾರೆ ಎಂದರೆ ತಮ್ಮ ಆಕ್ಷೇಪಣೆಯಿಲ್ಲ. ನಮ್ಮ ಉದ್ದೇಶ ಜನರಿಗೆ ತೊಂದರೆ ಆಗಬಾರದು ಎನ್ನುವುದಾಗಿದೆ. ಕಾಗೇರಿ ಬಂದ್ ಮಾಡುತ್ತಾರೆ ಎಂದರೆ ಬಂದ್ ಮಾಡಬಹುದು. ಆದರೆ ತಮ್ಮ ಒಪ್ಪಿಗೆಯಿಲ್ಲ ಎಂದರು.ಒಂದು ಭಾಗ ಭೀಮಣ್ಣ ಅವರಿಗೆ, ಒಂದು ಭಾಗ ದಿನಕರ ಶೆಟ್ಟಿಯವರಿಗೆ ಬರುತ್ತದೆ. ಸ್ಥಳೀಯವಾಗಿ ಸಮಸ್ಯೆಯ ಅರಿವು ಅವರಿಗಿದೆ. ಅವರ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ಬೆಂಬಲ ನೀಡುತ್ತೇವೆ ಎಂದ ಅವರು, ರಸ್ತೆ ಬಂದ್ ಮಾಡಿದರೆ ಸ್ಥಳೀಯರು ಹೋರಾಟ ಮಾಡುತ್ತೇವೆ ಎಂದಿದ್ದಾರೆ. ಅದನ್ನು ಕಾಗೇರಿ ಎದುರಿಸಬೇಕು. ಒಬ್ಬರು ಮಾಡಬೇಕು, ಒಬ್ಬರು ಮಾಡಬಾರದು ಎಂದರೆ ರಾಜಕಾರಣವಾಗುತ್ತದೆ. ಜನರಿಗೂ ಗೊಂದಲ ಉಂಟಾಗುತ್ತದೆ. ರಸ್ತೆ ಬಂದ್ ಮಾಡಿ ಹೋರಾಟವಾದರೆ ನೇರವಾಗಿ ಕಾಗೇರಿ ಎದುರಿಸಬೇಕು. ದೇಶಪಾಂಡೆ ಅವರದ್ದು ಹಳಿಯಾಳ, ನಮ್ಮದು ಭಟ್ಕಳ ಕ್ಷೇತ್ರ. ಸ್ಥಳೀಯವಾಗಿ ಜನಪ್ರತಿನಿಧಿಗಳಿದ್ದಾರೆ. ಅವರ ನಿರ್ಧಾರ ಮುಖ್ಯ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಪಂ ಮಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠ ನಾರಾಯಣ ಎಂ. ಇದ್ದರು.ಸರ್ಕಾರದ ಆದೇಶಕ್ಕೆ ಬೆಲೆ ಇಲ್ಲವೇ?

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶಕುಮಾರ ಸಿಂಗ್ ಬಗ್ಗೆ ಕೇಳಿದಾಗ, ತಾವು ಸುಮ್ಮನೇ ಯಾರ ಬಗ್ಗೆಯೂ ಮಾತನಾಡುವುದಿಲ್ಲ. ರಿತೇಶಕುಮಾರ ಸಿಂಗ್ ಅವರಿಗೆ ಉತ್ತರ ಕನ್ನಡದಲ್ಲಿ ಏನು ಕೆಲಸ ಎಂದು ಸರ್ಕಾರ ಲಿಖಿತ ಆದೇಶ ನೀಡಿದೆ. ಈ ಆದೇಶಕ್ಕೆ ಬೆಲೆ ಇಲ್ಲವೇ? ಒಂದಾದರೂ ಸಭೆಗಾದರೂ ಬಂದಿದ್ದಾರಾ? ಸರ್ಕಾರದ ಆದೇಶವನ್ನು ಅವರು ಪಾಲನೆ ಮಾಡಬೇಕು. ಅಥವಾ ಸರ್ಕಾರ ಆದೇಶವನ್ನು ಹಿಂಪಡೆಯಬೇಕು ಎಂದು ಉಸ್ತುವಾರಿ ಸಚಿವರು ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ಬಡಾವಣೆಯ ಸಂತ್ರಸ್ತ 12 ಕುಟುಂಬಕ್ಕೆ ಮನೆ ಹಂಚಿದ ರಾಜ್ಯ ಸರ್ಕಾರ
ಹಾಲ್‌ ಟಿಕೆಟ್‌ ಸಿಗದೆ 25 ವಿದ್ಯಾರ್ಥಿಗಳು ಪರೀಕ್ಷೆ ವಂಚಿತ