ಕನ್ನಡಪ್ರಭ ವಾರ್ತೆ ಭದ್ರಾವತಿ
ಜಗತ್ತಿನ ಕೆಲವೇ ಕೆಲವು ಸಮೃದ್ಧವಾದ ಭಾಷೆಗಳಲ್ಲಿ ಕನ್ನಡ ಭಾಷೆ ಸಹ ಒಂದಾಗಿದ್ದು, ಇಂತಹ ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಮನವಿ ಮಾಡಿದರು.ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದಿಂದ ಮಂಗಳವಾರ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಷ್ಟ್ರಕವಿ ಕುವೆಂಪು ಅವರು ನಾಡಗೀತೆ ರಚಿಸಿ ೧೦೦ ವರ್ಷಗಳು ಕಳೆದಿವೆ. ಇಂತಹ ಸಂದರ್ಭದಲ್ಲಿ ನೆಲ, ಜಲ, ಭಾಷೆ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಒಗ್ಗಟ್ಟಿನಿಂದ ಶ್ರಮಿಸಬೇಕಾಗಿದೆ. ಕನ್ನಡ ನಮ್ಮೆಲ್ಲರ ಮಾತೃಭಾಷೆಯಾಗಿದ್ದು, ಈ ಭಾಷೆಗೆ ೮ ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಇದನ್ನು ಗಮನಿಸಿದಾಗ ಕನ್ನಡ ಭಾಷೆಗೆ ಎಷ್ಟೊಂದು ಮಹತ್ವವಿದೆ ಎಂಬುದು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕಾಗಿದೆ. ಕನ್ನಡನಾಡು ಕಟ್ಟುವ ಕಾರ್ಯದಲ್ಲಿ ಪ್ರತಿಯೊಬ್ಬರು ಕೈಜೋಡಿಸಿದಾಗ ಭವಿಷ್ಯದಲ್ಲಿ ಕನ್ನಡದ ಶ್ರೀಮಂತಿಕೆ ಮತ್ತಷ್ಟು ಹೆಚ್ಚಲಿದೆ ಎಂದರು.ನಗರಸಭೆ ಪೌರಾಯುಕ್ತ ಕೆ.ಎನ್ ಹೇಮಂತ್ ಮಾತನಾಡಿ, ಈ ನಾಡಿನಲ್ಲಿ ಹುಟ್ಟಿ ಎಲ್ಲವನ್ನು ಪಡೆಯುವ ನಾವು ನೆಲ, ಜಲ, ಭಾಷೆ ಮೇಲಿನ ಅಭಿಮಾನ ಹೊಂದಬೇಕಾಗಿದೆ. ಕನ್ನಡ ಭಾಷೆಯಲ್ಲಿ ಎಲ್ಲವೂ ಅಡಗಿದ್ದು, ಇಂತಹ ಭಾಷೆ ಮಾತನಾಡಲು ನಾವೆಲ್ಲರೂ ಹೆಮ್ಮೆಪಡಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಮಾತನಾಡಿ, ವೇದಿಕೆಯಿಂದ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಕರ್ನಾಟಕ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವುದು ತುಂಬಾ ಸಂತಸವನ್ನುಂಟುಮಾಡಿದೆ. ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿರುವುದು ಮತ್ತಷ್ಟು ಮೆರಗು ತಂದುಕೊಟ್ಟಿದೆ. ದೇವರು ಪ್ರತಿಯೊಬ್ಬರಿಗೂ ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.ದೇವಸ್ಥಾನ ಪ್ರಧಾನ ಅರ್ಚಕ ವೇದಬ್ರಹ್ಮ ಶ್ರೀ ರಂಗನಾಥ ಶರ್ಮ, ನಗರಸಭೆ ಸದಸ್ಯೆ ಅನುಪಮ ಚನ್ನೇಶ್ ಸೇರಿದಂತೆ ಇನ್ನಿತರರು ಮಾತನಾಡಿದರು. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಿ. ರಮಾಕಾಂತ್, ಹಳೇನಗರ ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್, ನಿವೃತ್ತ ಶಿಕ್ಷಕ ಜುಂಜ್ಯಾನಾಯ್ಕ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಕಮಲ ಕುಮಾರಿ ತಂಡದವರು ಪ್ರಾರ್ಥಿಸಿ, ನಿವೃತ್ತ ಮುಖ್ಯ ಶಿಕ್ಷಕ ನಾಗರಾಜ್ ಸ್ವಾಗತಿಸಿದರು. ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎಂ.ಆರ್ ರೇವಣಪ್ಪ ವಂದಿಸಿದರು. ನಾಡಗೀತೆಗೆ ೧೦೦ ವರ್ಷಗಳು ತುಂಬಿರುವ ಹಿನ್ನಲೆಯಲ್ಲಿ ಸಾಮೂಹಿಕವಾಗಿ ನಾಡಗೀತೆ ಹಾಡಲಾಯಿತು. ಮಕ್ಕಳಿಂದ ನಡೆದ ನವಿಲು ನೃತ್ಯ ಸ್ವಾಗತ ಗೀತೆ ಗಮನ ಸೆಳೆಯಿತು.