ಸಂಡೂರು: ತಾಲೂಕಿನ ತಾಳೂರು ಗ್ರಾಮದಲ್ಲಿ ಶನಿವಾರ ಜೆಎಸ್‌ಡಬ್ಲು ಫೌಂಡೇಶನ್ ವತಿಯಿಂದ ರೈತರ ದಿನಾಚರಣೆ ಹಾಗೂ ಮಾದರಿ ತೋಟದ ಪ್ರಾತ್ಯಕ್ಷಿಕೆ, ಕ್ಷೇತ್ರ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹಗರಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಪಾಲಯ್ಯ ಮತ್ತು ಡಾ. ರವಿ ಸಮಗ್ರ ಕೃಷಿ ಪದ್ಧತಿ, ಮಣ್ಣು ಮತ್ತು ಮಳೆ ನೀರಿನ ಸದುಪಯೋಗ, ಕೀಟ ನಿರ್ವಹಣೆ, ಆಧುನಿಕ ಕೃಷಿ ಪದ್ಧತಿಗಳು ಮತ್ತು ಸಂಡೂರು ಭಾಗದಲ್ಲಿನ ಬೆಳೆಗಳ ಕುರಿತು ರೈತರಿಗೆ ಮಾರ್ಗದರ್ಶನ ನೀಡಿದರು. ಇಫ್ಕೊ ಸಂಸ್ಥೆಯ ಬಳ್ಳಾರಿಯ ವ್ಯವಸ್ಥಾಪಕರಾದ ಹನುಮಂತಪ್ಪ ಅವರು ಬೆಳೆಗಳ ಪ್ರತಿ ಪ್ಲಾಟ್‌ನ ವಿವರಗಳನ್ನು ಅಂದರೆ, ತಳಿ, ಒಟ್ಟು ಖರ್ಚು, ಒಟ್ಟು ಆದಾಯ ಮತ್ತು ಬೇಕಾದ ನಿರ್ವಹಣೆಯ ಕುರಿತು ರೈತರಿಗೆ ಮಾಹಿತಿ ನೀಡಿದರು.
ತಾಳೂರು ಗ್ರಾಮದ ಪ್ರಗತಿಪರ ರೈತ ವೀರೇಶ್ ಟಿ. ಅವರ ತೋಟದಲ್ಲಿ ಸಮಗ್ರ ಕೃಷಿ ಕುರಿತು ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಜೆಎಸ್‌ಡಬ್ಲು ಫೌಂಡೇಶನ್‌ನ ಕೃಷಿ ಕಾರ್ಯಕ್ರಮಗಳನ್ನು ಮುನ್ನಡೆಸುವ ನಾಗನಗೌಡ, ಅನುಷ್ಠಾನ ಸಂಸ್ಥೆ ಸ್ಕೋಡ್‌ವೆಸ್ ಸಂಸ್ಥೆಯ ರಾಜ, ಗಂಗಾಧರ, ಸಿಬ್ಬಂದಿ, ಸಂಡೂರು ಭಾಗದ ಪ್ರಗತಿಪರ ರೈತರಾದ ಬಸಪ್ಪ ಹಾಗೂ ೧೦೦ಕ್ಕೂ ಹೆಚ್ಚು ಆಸಕ್ತ ರೈತರು ಭಾಗವಹಿಸಿದ್ದರು.