;Resize=(412,232))
ರಾಯಚೂರು/ ಕಲಬುರಗಿ : ಕಳೆದ ಹತ್ತು ದಿನಗಳಿಂದ ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳ ಜನರು ಮಳೆಗಾಲದಲ್ಲಿಯೂ ಬಿರು ಬೇಸಿಗೆಯ ತಾಪಯನ್ನು ಅನುಭವಿಸುತ್ತಿದ್ದಾರೆ. ಮುಂಗಾರು ಮಳೆಯ ಕೊರತೆಯಿಂದಾಗಿ ವಾತಾವರಣದಲ್ಲಿ ತೇವಾಂಶ ಕ್ಷೀಣಿಸಿದ ಪರಿಣಾಮವಾಗಿ ಕಲಬುರಗಿಯಲ್ಲಿ 37 ಡಿಗ್ರಿ ಸೆಲ್ಸಿಯಸ್, ರಾಯಚೂರಲ್ಲಿ 34 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದೆ.
ಕಳೆದ ಒಂದು ವಾರದಿಂದ ಕಲಬುರಗಿ ಜಿಲ್ಲೆಯಲ್ಲಿ 32ರಿಂದ 37ರವರೆಗೆ ಉಷ್ಣಾಂಶ ಗರಿಷ್ಠ (ಕನಿಷ್ಠ 24ರಿಂದ 25), ರಾಯಚೂರಿನಲ್ಲಿ 32ರಿಂದ 34 ಡಿ.ಸೆ. (21ರಿಂದ 25) ತಾಪಮಾನವು ದಾಖಲಾಗುತ್ತಿದೆ. ಸೆ.30 ವರೆಗೂ ತಾಪಮಾನವು ಇಷ್ಟೇ ಪ್ರಮಾಣದಲ್ಲಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ. ಕಲಬುರಗಿಯಲ್ಲಿ ಕಳೆದ ವರ್ಷ ಇದೇ ತಿಂಗಳು ಉಷ್ಣಾಂಶವು ಗರಿಷ್ಠ 27, ಕನಿಷ್ಠ 23 ಡಿ.ಸೆ., ರಾಯಚೂರಿನಲ್ಲಿ 30, 31 ಡಿ.ಸೆ. ಗರಿಷ್ಠ, 22ರಿಂದ 24 ಡಿ.ಸೆ. ಉಷ್ಣಾಂಶ ಇತ್ತು. ಆದರೆ ಈ ವರ್ಷ 5 ಡಿಗ್ರಿ ಹೆಚ್ಚಾಗಿದ್ದು, ಜನಸಾಮಾನ್ಯರು ಸೂರ್ಯನ ತಾಪಕ್ಕೆ ಸುಸ್ತಾಗುತ್ತಿದ್ದಾರೆ.
ಇದು ಜನರನ್ನು ಮಳೆಗಾಲದಲ್ಲಿ ಬೇಸಿಗೆ ಮಾದರಿಯಲ್ಲಿ ಸಂಕಟಕ್ಕೆ ತುತ್ತಾಗುವಂತೆ ಮಾಡುತ್ತಿದೆ. ಬೇಸಿಗೆಯಂತೆ ಬಿರು ಬಿಸಿಲಿನಿಂದಾಗಿ ಜನರು ತತ್ತರಿಸಿ ಹೋಗುತ್ತಿದ್ದಾರೆ. ಮಹಿಳೆಯರು, ಮಕ್ಕಳು, ವೃದ್ಧರು ಶಕೆಯಿಂದಾಗಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಕಚೇರಿಗಳು, ಮನೆಗಳಲ್ಲಿ ಹಗಲು-ರಾತ್ರಿ ಎಸಿ, ಫ್ಯಾನ್ ಬಳಕೆಯ ಪ್ರಮಾಣವು ಜಾಸ್ತಿಯಾಗಿದೆ.