ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಸೆ.17ರಂದು ಬೀದರ್ ಜಿಲ್ಲೆಯಾದ್ಯಂತ ವಿನೂತನ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದ್ದು, ಸಾರ್ವಜನಿಕರು ಹಾಗೂ ಗಣೇಶ ಮಂಡಳಿಗಳು ಕೈಜೋಡಿಸಬೇಕೆಂದು ಬಿಜೆಪಿ ರಾಜ್ಯ ಕಾರ್ಯದರ್ಶಿಗಳು ಹಾಗೂ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೀದರ್

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಸೆ.17ರಂದು ಬೀದರ್ ಜಿಲ್ಲೆಯಾದ್ಯಂತ ವಿನೂತನ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದ್ದು, ಸಾರ್ವಜನಿಕರು ಹಾಗೂ ಗಣೇಶ ಮಂಡಳಿಗಳು ಕೈಜೋಡಿಸಬೇಕೆಂದು ಬಿಜೆಪಿ ರಾಜ್ಯ ಕಾರ್ಯದರ್ಶಿಗಳು ಹಾಗೂ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮನವಿ ಮಾಡಿದ್ದಾರೆ.ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.‘ಆಶೀರ್ವಾದ್ ಕಾ ದಿಯಾ’ ಸೇರಿ 13ಕ್ಕೂ ಹೆಚ್ಚು ಸೇವಾ ಚಟುವಟಿಕೆಗಳು ಈ ಸಂದರ್ಭದಲ್ಲಿ ನಡೆಸಲಾಗುತ್ತಿದೆ. ಸಾರ್ವಜನಿಕರು ತಮ್ಮ ತಮ್ಮ ಮನೆಗಳಲ್ಲಿ 11, 21 ಅಥವಾ 100 ದೀಪಗಳನ್ನು ಹಚ್ಚಿ ವಿಶೇಷ ಪ್ರಾರ್ಥನೆ ಸಲ್ಲಿಸಲು ಕರೆ ನೀಡಿದರು. ದೇಶದ 25 ಕೋಟಿ ಮಕ್ಕಳ ಕನಸನ್ನು ಬಿಂಬಿಸುವ ನಿಟ್ಟಿನಲ್ಲಿ ಶಾಲೆ-ಕಾಲೇಜು ಗಳಲ್ಲಿ ರಂಗೋಲಿ, ಚಿತ್ರಕಲೆ ಮತ್ತು ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ‘ನಮೋ ಸೇವಾ ಖಾತೆ’ ಬೀದಿನಾಟಕ, ಅಂಗನವಾಡಿ ಮಿಲನ, ‘ಸೇವಾ ಜ್ಯೋತಿ’ ಸಂಕಲ್ಪ ಯಾತ್ರೆ, ರಕ್ತದಾನ ಶಿಬಿರ, ವೃಕ್ಷಾರೋಹಣ, ಪ್ಲಾಸ್ಟಿಕ್ ಮುಕ್ತ ಬೀದರ್ ಜಾಗೃತಿ, ಅಂಗದಾನ ಸಂಕಲ್ಪ ಹಾಗೂ ಸೈಬರ್ ಭದ್ರತೆ ಕುರಿತಂತೆ ಒಟ್ಟು 13ಕ್ಕೂ ಹೆಚ್ಚು ಸಾಮಾಜಿಕ ಕಾರ್ಯಕ್ರಮಗಳು ಅಕ್ಟೋಬರ್ 17ರವರೆಗೆ ನಡೆಯಲಿವೆ ಎಂದರು.

ಕ್ಯಾಥಲ್ಯಾಬ್ ಇನ್ನು ಆರಂಭವಾಗಿಲ್ಲ:ಸುಮಾರು 15 ಕೋಟಿ ವೆಚ್ಚದ ಕ್ಯಾಥ್ ಲ್ಯಾಬ್ ಘಟಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿ ಒಂದೂವರೆ ವರ್ಷ ಕಳೆದರೂ ಇನ್ನೂ ವೈದ್ಯರ ನೇಮಕ ವಾಗಿಲ್ಲ. ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ಲಕ್ಷಾಂತರ ರೂಪಾಯಿ ತೆರುವಂತಾಗಿದೆ. ಬ್ರಿಮ್ಸ್ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಕಾರ್ಯನಿರ್ವಹಿಸುತ್ತಿಲ್ಲ. ಅಗತ್ಯ ರಕ್ತ ಪರೀಕ್ಷೆಯ ಆಂಟಿಜೆನ್‌ಗಳ ಕೊರತೆಯಿದೆ. ಉಪಲೋಕಾಯುಕ್ತರೇ ಭೇಟಿ ನೀಡಿ ಈ ಆಸ್ಪತ್ರೆಯನ್ನು ‘ನರಕ’ ಎಂದು ಕರೆದಿದ್ದರೂ ಉಸ್ತುವಾರಿ ಸಚಿವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಹುಲಸೂರು ಕ್ಷೇತ್ರದಲ್ಲಿ ಶಾಸಕರ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದ್ದು, ಸೆ.19 ರಂದು ಔರಾದ್‌ನಲ್ಲಿ ಶಾಸಕ ಪ್ರಭು ಚವ್ಹಾಣ್ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿ ಕೊಳ್ಳಲಾಗಿದೆ ಎಂದರು.ರೈತರ ಜೀವನಾಡಿಯಾಗಿರುವ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು (ಬಿಎಸ್‌ಎಸ್‌ಕೆ) ಹರಾಜು ಮಾಡುವುದನ್ನು ಪಕ್ಷ ತೀವ್ರವಾಗಿ ವಿರೋಧಿಸುತ್ತದೆ. ಕಾರ್ಖಾನೆಯನ್ನು ಗುತ್ತಿಗೆ (ಲೀಸ್) ಅಥವಾ ಸೂಕ್ತ ಟೆಂಡರ್ ಮೂಲಕ ತಕ್ಷಣವೇ ಪುನರಾರಂಭಿಸಬೇಕು. ಈ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಸೆ. 16 ರಂದು ಹುಮ್ನಾಬಾದ್‌ನಿಂದ ಹಳ್ಳಿಖೇಡ್ ಕಾರ್ಖಾನೆಯ ವರೆಗೆ ಬಿಜೆಪಿಯಿಂದ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಬೃಹತ್ ಪಾದಯಾತ್ರೆ ಆಯೋಜಿಸ ಲಾಗಿದೆ ಎಂದರು.ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ, ಬೀದರ್ ಮಹಾನಗರ ಪಾಲಿಕೆ ಸದಸ್ಯ ಶಶಿ ಹೊಸಳ್ಳಿ ಮಾತನಾಡಿದರು. ಪಕ್ಷದ ಪ್ರಮುಖರಾದ ಈಶ್ವರಸಿಂಗ್‌ ಠಾಕೂರ್, ಬಾಬುವಾಲಿ, ಪೀರಪ್ಪ ಔರಾದೆ, ರಾಜಶೇಖರ ನಾಗಮೂರ್ತಿ, ಬಾಬುರಾವ ಕಾರಬಾರಿ, ಬಸವರಾಜ ಪವಾರ, ಶ್ರೀನಿವಾಸ ಚೌದ್ರಿ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.--ಚಿತ್ರ 15ಬಿಡಿಆರ್65:ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.--