ಕಮಲಾಪುರ ತಾಲೂಕುಗಳಲ್ಲಿ ಮಳೆ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬರಪೀಡಿತ ತಾಲೂಕು ಎಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ನವ ಕರ್ನಾಟಕ ರೈತ ಸಂಘದ ವತಿಯಿಂದ ಸೆ.15ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ನವ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ದಯಾನಂದ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕಮಲಾಪುರ

ಕಮಲಾಪುರ ತಾಲೂಕುಗಳಲ್ಲಿ ಮಳೆ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬರಪೀಡಿತ ತಾಲೂಕು ಎಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ನವ ಕರ್ನಾಟಕ ರೈತ ಸಂಘದ ವತಿಯಿಂದ ಸೆ.15ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ನವ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ದಯಾನಂದ್ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆ ಕೊರತೆಯಿಂದ ರೈತರ ಬೆಳೆಗಳು ಒಣಗಿ ಹೋಗಿದ್ದು, ಕೃಷಿಯನ್ನೇ ಅವಲಂಬಿಸಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿಯೂ ಸರ್ಕಾರ ಬರಗಾಲ ಘೋಷಣೆ ಮಾಡದೆ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.ಸೆ.16ರಂದು ಬೆಳಗ್ಗೆ 10:30ಕ್ಕೆ ಪಟ್ಟಣದ ಮುಖ್ಯ ರಸ್ತೆ ಬಸವೇಶ್ವರ ಪುತಳಿಯಿಂದ ತಹಸೀಲ್ದಾರ್ ಕಚೇರಿ ತನಕ ಪ್ರತಿಭಟನಾ ರ್ಯಾಲಿಯಲ್ಲಿ ಶರಣ ಶಂಕರಲಿಂಗ ಮಹಾರಾಜರು ಸ್ವಂತ ಮಠ, ಹಾಗೂ ಶ್ರೀನಿವಾಸ್ ಸರಡಗಿ ಅಪ್ಪಾರಾವ್ ದೇವಿ ಮುತ್ಯ, ಹರಸೂರ ಮಠದ ಸ್ವಾಮೀಜಿ, ಬಬಲಾದ ಗುರುಪಾದಲಿಂಗ ಸ್ವಾಮೀಜಿ ಸಹಿತ ಹಲವು ಮಠಾಧೀಶರು ರೈತರಿಗಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಎಂದರು.ಕಮಲಾಪುರ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸುಭಾಷ್ ಬಿರಾದಾರ ಮಾತನಾಡಿ, ಮಳೆ ಕೊರತೆಯಿಂದ ಉಂಟಾಗಿರುವ ಬೆಳೆ ನಷ್ಟವನ್ನು ಸಮರ್ಪಕವಾಗಿ ಪರಿಶೀಲಿಸಿ ರೈತರಿಗೆ ಪರಿಹಾರ ಒದಗಿಸುವಲ್ಲಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಕಮಲಾಪುರ ಪಟ್ಟಣಕ್ಕೆ ಹರಿಯುವ ಗಂಡೋರಿ ನಾಲ ಜಲಾಶಯ ನೀರು ಮತ್ತು ಬಲದಂಡೆ ಕಾಲುವೆಯನ್ನೇ ರೈತರು ಅವಲಂಬನೆಯಗಿದ್ದಾರೆ. ಗೇಟು ದುರಸ್ತಿಗೆ ಬಂದು ಒಂದು ವರ್ಷ ಕಳೆದರೂ ಇದುವರೆಗೆ ದುರಸ್ತಿ ಮಾಡಲು ಮುಂದಾಗಿಲ್ಲ. ಕರ್ನಾಟಕ ನೀರಾವರಿ ನಿಗಮ ನಿಯಮಿತ ಇಲಾಖೆ ಅಧಿಕಾರಿಗಳ ಹಾಗೂ ಸ್ಥಳೀಯ ಶಾಸಕ, ತಹಸಿಲ್ದಾರ್ ಬೇಜವಾಬ್ದಾರಿತನದಿಂದ ಸಾಕಷ್ಟು ಜಲಾಶಯ ನೀರು ವ್ಯರ್ಥವಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಅಮಾನತ್ತು ಮಾಡಿ ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.ವಿವಿಧ ಸಂಘಟನೆಯ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ರೈತ ಮೋರ್ಚಾ ಪದಾಧಿಕಾರಿಗಳು, ರೈತ ಮುಖಂಡರು, ರೈತ ಬಾಂಧವರು ಮಹಿಳೆಯರು ಭಾಗವಹಿಸಬೇಕು ಎಂದು ಮನವಿ ಮಾಡಿದರು. ತಾಲೂಕು ನವ ಕರ್ನಾಟಕ ರೈತ ಸಂಘದ ಅಧ್ಯಕ್ಷ ಶಿವರಾಜ ಪಾಟೀಲ ಮುಖಂಡರು ಇದ್ದರು.