ಕನ್ನಡಪ್ರಭ ವಾರ್ತೆ ಬೆಳಗಾವಿ
ವಿತಾವಿ ಕನ್ನಡ ಬಳಗ ಆಯೋಜಿಸಿದ್ದ 71ನೇ ರಾಜ್ಯೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡವು ಕೇವಲ ಸಂವಹನದ ಭಾಷೆಯಲ್ಲ. ಅದು ನಮ್ಮ ಚಿಂತನೆಯ ಭಾಷೆ, ನಮ್ಮ ಭಾವನೆಯ ಭಾಷೆ, ನಮ್ಮ ಸಂಸ್ಕೃತಿಯ ಭಾಷೆ ಮತ್ತು ನಮ್ಮ ಅಸ್ತಿತ್ವದ ಭಾಷೆ. ಸಾವಿರಾರು ವರ್ಷಗಳ ಸಾಹಿತ್ಯ ಪರಂಪರೆಯನ್ನು ಹೊತ್ತ ಕನ್ನಡವು ವಚನಕಾರರಿಂದ ದಾಸವರೇಣ್ಯರ ತನಕ, ಕುವೆಂಪುವಿನಿಂದ ಬೇಂದ್ರೆಯ ತನಕ, ಮಾಸ್ತಿಯಿಂದ ಕಾರಂತರ ತನಕ ಅಸಂಖ್ಯಾತ ಮಹನೀಯರ ಸೃಜನಶೀಲತೆಯಿಂದ ಶ್ರೀಮಂತವಾಗಿದೆ. ಆದರೆ, ಇಂದು ನಾವು ನಮ್ಮನ್ನು ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ ಕನ್ನಡದ ಗತಕಾಲದ ವೈಭವವನ್ನು ನಾವು ಎಷ್ಟು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತೇವೆ ಎಂಬುವುದಕ್ಕಿಂತ ಕನ್ನಡದ ಭವಿಷ್ಯವನ್ನು ನಾವು ಎಷ್ಟು ಸೃಜನಶೀಲವಾಗಿ ನಿರ್ಮಿಸುತ್ತೇವೆ ಎಂಬುವುದು ಮುಖ್ಯವಲ್ಲವೆ?. ನನ್ನ ದೃಷ್ಟಿಯಲ್ಲಿ, ಆ ಜವಾಬ್ದಾರಿ ವಿಶೇಷವಾಗಿ ವಿಶ್ವವಿದ್ಯಾಲಯಗಳ ಮತ್ತು ಯುವಜನತೆಯ ಮೇಲಿದೆ ಎಂದರು. ಕನ್ನಡವನ್ನು ಕೇವಲ ಸಂರಕ್ಷಿಸುವುದಲ್ಲ, ಕನ್ನಡವನ್ನು ಸೃಜನಶೀಲಗೊಳಿಸಬೇಕು. ಕನ್ನಡದಲ್ಲಿ ವಿಜ್ಞಾನ ಬರಬೇಕು. ಕನ್ನಡದಲ್ಲಿ ತಂತ್ರಜ್ಞಾನ ಮಾತನಾಡಬೇಕು. ಕನ್ನಡದಲ್ಲಿ ಸಂಶೋಧನೆ ನಡೆಯಬೇಕು. ಕನ್ನಡದ ಡಿಜಿಟಲ್ ಸಂಪನ್ಮೂಲಗಳು ಹೆಚ್ಚಬೇಕು. ಕನ್ನಡವು ಹೊಸ ಪೀಳಿಗೆಯ ಕನಸುಗಳ ಭಾಷೆಯಾಗಬೇಕು. ಕನ್ನಡ ನಮ್ಮ ಭೂತಕಾಲದ ಹೆಮ್ಮೆ ಮಾತ್ರವಲ್ಲ, ಅದು ನಮ್ಮ ವರ್ತಮಾನದ ಜವಾಬ್ದಾರಿ ಮತ್ತು ನಮ್ಮ ಭವಿಷ್ಯದ ಸಾಧ್ಯತೆ. ಈ ಕನ್ನಡ ಹಬ್ಬವು ಕೇವಲ ಸಂಭ್ರಮದ ಕಾರ್ಯಕ್ರಮವಾಗದೇ ಕನ್ನಡವನ್ನು ಜ್ಞಾನ, ವಿಜ್ಞಾನ, ತಂತ್ರಜ್ಞಾನ ಮತ್ತು ಸೃಜನಶೀಲತೆಯೊಂದಿಗೆ ಜೋಡಿಸುವ ಹೊಸ ಸಂಕಲ್ಪದ ವೇದಿಕೆಯಾಗಲಿ ಎಂದು ಆಶಿಸುತ್ತೇನೆ ಎಂದರು.ವಿತಾವಿ ಯು ಒಂದು ತಾಂತ್ರಿಕ ವಿಶ್ವವಿದ್ಯಾಲಯ. ನಮ್ಮ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ, ಕ್ವಾಂಟಮ್ ತಂತ್ರಜ್ಞಾನ, ರೋಬೋಟಿಕ್ಸ್, ಸೆಮಿಕಂಡಕ್ಟರ್, ಬಯೋಟೆಕ್ನಾಲಜಿ ಮತ್ತು ಇನ್ನಿತರ ಅತ್ಯಾಧುನಿಕ ಕ್ಷೇತ್ರಗಳಲ್ಲಿ ಜ್ಞಾನ ಪಡೆಯುತ್ತಿದ್ದಾರೆ. ಆದರೆ, ತಂತ್ರಜ್ಞಾನ ಎಷ್ಟೇ ವೇಗವಾಗಿ ಮುಂದುವರಿದರೂ ನಮ್ಮ ಭಾಷೆ ಮತ್ತು ಸಂಸ್ಕೃತಿಯ ಬೇರುಗಳನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.ವಿಜ್ಞಾನವು ಸತ್ಯವನ್ನು ಅನ್ವೇಷಿಸುತ್ತದೆ. ತಂತ್ರಜ್ಞಾನವು ಆ ಸತ್ಯವನ್ನು ಕಾರ್ಯರೂಪಕ್ಕೆ ತರುತ್ತದೆ. ಸಾಹಿತ್ಯವು ಆ ಜ್ಞಾನಕ್ಕೆ ಮಾನವೀಯತೆಯ ಅರ್ಥವನ್ನು ನೀಡುತ್ತದೆ. ಆದ್ದರಿಂದ ವಿಜ್ಞಾನ, ತಂತ್ರಜ್ಞಾನ ಮತ್ತು ಸಾಹಿತ್ಯ ಇವು ಮೂರು ಬೇರೆ ಬೇರೆ ಜಗತ್ತುಗಳಲ್ಲ. ಮಾನವ ನಾಗರಿಕತೆಯ ಸಮಗ್ರ ಬೆಳವಣಿಗೆಯ ಮೂರು ಪರಸ್ಪರ ಪೂರಕ ಶಕ್ತಿಗಳು. ನಮ್ಮ ವಿದ್ಯಾರ್ಥಿಗಳು ವಿಶ್ವದ ಯಾವುದೇ ಮೂಲೆಗೆ ಹೋಗಲಿ, ಜಾಗತಿಕ ಮಟ್ಟದ ಶಿಕ್ಷಣ ಪಡೆಯಲಿ,
ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಪರಿಣತಿ ಗಳಿಸಲಿ. ಆದರೆ, ಕೊಂಬೆಗಳು ಆಕಾಶ ಮುಟ್ಟಲಿ, ಬೇರುಗಳು ಮಾತ್ರ ನೆಲವನ್ನು ಮರೆಯಬಾರದು. ನಮ್ಮ ವಿದ್ಯಾರ್ಥಿಗಳು ಜ್ಞಾನದಲ್ಲಿ ಜಾಗತಿಕರು, ಚಿಂತನೆಗಳಲ್ಲಿ ಆಧುನಿಕರು. ಆದರೆ, ಬೇರುಗಳಲ್ಲಿ ಕನ್ನಡಿಗರು ಆಗಬೇಕು. ಇದೇ ಕನ್ನಡ ಹಬ್ಬದ ನಿಜವಾದ ಆಶಯ ಎಂದರು.ಈ ಸಂದರ್ಭದಲ್ಲಿ ಜಿಲ್ಲೆಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟಕಕಾರ ಡಾ.ಡಿ.ಎಸ್.ಚೌಗಲೆ, ವೈದ್ಯೆ ಡಾ.ಸುಜಾತಾ ಜಾಲಿ ಹಾಗೂ ಕಲಾವಿದ ಕಾಡಪ್ಪ ಗಾಡಿವಡ್ಡರ ಅವರನ್ನು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ, ಕುಲಸಚಿವ ಡಾ.ಪ್ರಸಾದ ರಾಂಪುರೆ ಹಾಗೂ ಮೌಲ್ಯಮಾಪನ ಕುಲಸಚಿವ ಡಾ.ಉಜ್ವಲ್ ಯು.ಜೆ. ಸನ್ಮಾನಿಸಿದರು. ವಿಟಿಯು ಸಿಬ್ಬಂದಿ ಮಹಾದೇವಪ್ಪ ಕಮ್ಮಾರ ರಚಿಸಿದ ಪುರಸ್ಕೃತರ ಭಾವಚಿತ್ರಗಳನ್ನು ಈ ವೇಳೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಡಾ.ಪ್ರಲ್ಹಾದ್ ರಾಥೋಡ್, ವಿಟಿಯು ಕುಟುಂಬದ ಪ್ರಾಧ್ಯಾಪಕ ಬಂಧುಗಳು, ಬೋಧಕೇತರ ಸಿಬ್ಬಂದಿ, ವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕನ್ನಡ ಹಬ್ಬ-2026 ಸಂಭ್ರಮ:-ಡಾ.ಡಿ.ಎಸ್.ಚೌಗಲೆ,