ಕರ್ನಾಟಕ ರಾಜ್ಯ ರೈತ ಸಂಘ ರೈತ ಪರ್ವದಿಂದ ಪ್ರತಿಭಟನೆ ನಡೆಸಿ ಆಗ್ರಹ
ಜಿಲ್ಲೆಯಲ್ಲಿ ಇತ್ತೀಚೆಗೆ ಕಾಡುಪ್ರಾಣಿಗಳ ಹಾವಳಿಯಿಂದ ಮಾನವ ಪ್ರಾಣಕ್ಕೆ ಹಾನಿ ಆಗುತ್ತಿರುವುದನ್ನು ತಡೆಗಟ್ಟಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ರೈತ ಪರ್ವದವರು ನಗರದ ಅಶೋಕಪುರಂನಲ್ಲಿರುವ ಅರಣ್ಯ ಭವನ ಮುಂಭಾಗದಲ್ಲಿ ಗುರುವಾರ ಪ್ರತಿಭಟಿಸಿದರು.
ಒಂದು ತಿಂಗಳ ಅವಧಿಯಲ್ಲಿ ಹುಲಿ ದಾಳಿಗೆ ಮೂವರು ಜೀವ ಕಳೆದುಕೊಂಡು, ಓರ್ವ ರೈತ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇದನ್ನು ತಡೆಯುವಲ್ಲಿ ವಿಫಲವಾದ ಅರಣ್ಯಾಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತ ನೂರಾರು ರೈತರು ಅರಣ್ಯ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.ಈ ವೇಳೆ ಪೊಲೀಸರು ಗೇಟನ್ನು ಮುಚ್ಚಿ, ಬ್ಯಾರಿಕೇಡ್ ಗಳನ್ನು ಹಾಕಿ ಪ್ರತಿಭಟನಾಕಾರರನ್ನು ತಡೆದರು. ಇದರಿಂದ ಪ್ರತಿಭಟನಾಕಾರರು ಪೊಲೀಸರೊಂದಿಗೆ ಮಾತಿನ ಚಕಮಕಿ ಉಂಟಾಯಿತು. ಒಳ ಬಿಡುವಂತೆ ಒತ್ತಾಯಿಸಿದರೂ ಪೊಲೀಸರು ಅವಕಾಶ ನೀಡಲಿಲ್ಲ. ಇದರಿಂದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿ, ಗೇಟಿನ ಮುಂಭಾಗವೇ ಪ್ರತಿಭಟಿಸಿದರು.
ಹುಲಿ ದಾಳಿ ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಒಂದೆಡೆ ಅಕ್ರಮ ರೆಸಾರ್ಟ್ ಗಳು, ಹೋಮ್ ಸ್ಟೇಗಳು ತಲೆ ಎತ್ತಿರುವುದರಿಂದ ರಾತ್ರಿ ವೇಳೆ ಮೋಜು ಮಸ್ತಿ ನಡೆಸಲು ಫೈರ್ ಕ್ಯಾಂಪ್, ಕರ್ಕಶ ಧ್ವನಿವರ್ದಕ ಅಳವಡಿಸುವ ಮೂಲಕ ಕಾಡುಪ್ರಾಣಿಗಳಿಗೆ ಹಿಂಸೆ ನೀಡುತ್ತಿದ್ದಾರೆ. ಇದರಿಂದ ಪ್ರಾಣಿಗಳು ಭಯಪಟ್ಟು ನಾಡಿನ ಕಡೆಗೆ ಮುಖ ಮಾಡಿವೆ ಎಂದು ಅವರು ದೂರಿದರು.
ಕಾಡುಪ್ರಾಣಿಗಳಿಂದ ಜನರನ್ನು ರಕ್ಷಿಸಲು ಕ್ರಮ ವಹಿಸುವ ಜೊತೆಗೆ ನಾಡಿನೆಡೆಗೆ ಬಾರದಂತೆ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ರೈತರ ಹಿತಾಸಕ್ತಿ ಹಾಗೂ ವನ್ಯಜೀವಿಗಳನ್ನು ರಕ್ಷಿಸುವ ಸಲುವಾಗಿ ಹೋಮ್ ಸ್ಟೇ, ರೆಸಾರ್ಟ್ ಮುಕ್ತ ವಲಯ ಎಂದು ಘೋಷಿಸುವಂತೆ ಅವರು ಆಗ್ರಹಿಸಿದರು.