ಕಾಸರಕೋಡು ಬಂದರು ರಸ್ತೆ ಕಾಮಗಾರಿ ಆರಂಭಮತ್ತೆ ಹೋರಾಟ: ಮೀನುಗಾರರ ಮುಖಂಡರ ಎಚ್ಚರಿಕೆ

KannadaprabhaNewsNetwork | Published : Apr 3, 2024 1:33 AM

ಸಾರಾಂಶ

ವಾಣಿಜ್ಯ ಬಂದರು ವಿರೋಧಿಸುವ ಕಡಲಮಕ್ಕಳ ದಶಕಗಳ ಹೋರಾಟ ಒಂದೆಡೆಯಾದರೆ, ಬಂದರು ನಿರ್ಮಾಣ ಮಾಡಿಯೆ ಸಿದ್ಧ ಎನ್ನುತ್ತಿರುವ ಎಚ್‌ಎಚ್‌ಪಿಪಿಎಲ್ ಕಂಪನಿ ಇನ್ನೊಂದೆಡೆ.

ಹೊನ್ನಾವರ: ತಾಲೂಕಿನ ಕಾಸರಕೋಡು ವಿವಾದಿತ ವಾಣಿಜ್ಯ ಬಂದರು ಪ್ರದೇಶದ ಕಡಲತೀರದ ಕಚ್ಚಾರಸ್ತೆಯಲ್ಲಿ ಮಂಗಳವಾರ ಜಲ್ಲಿ ಕಲ್ಲುಗಳನ್ನು ಸುರಿದು ಡಾಂಬರೀಕರಣ ನಡೆಸಲು ಪೊಲೀಸ್ ಸರ್ಪಗಾವಲಿನಲ್ಲಿ ಸಿದ್ಧತೆ ನಡೆದಿದೆ. ಈ ಮೂಲಕ ಮೀನುಗಾರರು ಆತಂಕಗೊಂಡಿದ್ದು, ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ವಾಣಿಜ್ಯ ಬಂದರು ವಿರೋಧಿಸುವ ಕಡಲಮಕ್ಕಳ ದಶಕಗಳ ಹೋರಾಟ ಒಂದೆಡೆಯಾದರೆ, ಬಂದರು ನಿರ್ಮಾಣ ಮಾಡಿಯೆ ಸಿದ್ಧ ಎನ್ನುತ್ತಿರುವ ಎಚ್‌ಎಚ್‌ಪಿಪಿಎಲ್ ಕಂಪನಿ ಇನ್ನೊಂದೆಡೆ. ಸರ್ಕಾರದ ಆದೇಶ ಪಾಲನೆ ಮಾಡುವುದು ನಮ್ಮ ಕರ್ತವ್ಯ ಎಂದು ಖಡಕ್ಕಾಗಿ ಹೇಳುವ ಜಿಲ್ಲಾಡಳಿತ ಕಂಪನಿಗೆ ಶ್ರೀರಕ್ಷೆಯಾದಂತಾಗಿದೆ. ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ನೂರಾರು ಸಂಖ್ಯೆಯಲ್ಲಿ ಪೊಲೀಸರ ಸರ್ಪಗಾವಲು, ಜತೆಗೆ ಜಿಲ್ಲಾಧಿಕಾರಿಗಳ ನಿಷೇಧಾಜ್ಞೆ ಆದೇಶ. ಇವೆಲ್ಲವು ರಸ್ತೆ ನಿರ್ಮಾಣಕ್ಕೆ ಆನೆಬಲ ಬಂದಂತಾಗಿದೆ.

ಪುನಃ ರಸ್ತೆ ನಿರ್ಮಾಣ: ಈ ಹಿಂದೆ ಈ ಸ್ಥಳದಲ್ಲಿ ಕಲ್ಲು ಮಣ್ಣು ಸುರಿದು ಹೊಸದಾಗಿ ಕಚ್ಚಾರಸ್ತೆ ನಿರ್ಮಿಸಿದ್ದರು. ತದನಂತರ ಮೀನುಗಾರರು ಪ್ರತಿಭಟಿಸಿ, ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣ ವಿಚಾರಣೆ ನಡೆದಿತ್ತು. ಇದೀಗ ಅದೇ ಸ್ಥಳದಲ್ಲಿ ಪಕ್ಕಾ ರಸ್ತೆ ನಿರ್ಮಾಣಕ್ಕೆ ಸಕಲ ಸಿದ್ಧತೆ ನಡೆದಿದೆ.

ಕೈಕಟ್ಟಿದ ಡಿಸಿ ಆದೇಶ: ನಿಷೇಧಾಜ್ಞೆ ಜಾರಿಯಾಗಿರುವುದು ಕೈಕಟ್ಟಿದಂತಾಗಿದೆ. ಪ್ರತಿಭಟಿಸಲು ಮುಂದಾದಲ್ಲಿ ಆದೇಶ ಉಲ್ಲಂಘನೆ ಹೆಸರಲ್ಲಿ ತಮ್ಮನ್ನು ವಿನಾಕಾರಣ ಬಂಧಿಸಿ ಜೈಲಿಗಟ್ಟುತ್ತಾರೆ ಎನ್ನುವುದು ಅವರ ಅಳಲಾಗಿದೆ. ಬಂದರು ವಿರೋಧಿಸಿ ನಡೆಸಿದ ಈ ಹಿಂದಿನ ಹೋರಾಟಗಳಿಂದ ದಾಖಲಾಗಿರುವ ಹತ್ತಾರು ದೂರುಗಳು ಹೈರಾಣಾಗಿಸಿದೆ. ಕಡಲಬ್ಬರಕ್ಕೆ ಅಂಜದ, ಅಳುಕದ ಕಡಲಮಕ್ಕಳು ಛಲಬಿಡದೇ ಹೋರಾಡಲು ಸಜ್ಜಾಗಿದ್ದಾರೆ. ಮುಂದಿನ ಬೆಳವಣಿಗೆಗಳು ಉಹಿಸಲಸಾಧ್ಯವಾದ ರೀತಿಯಲ್ಲಿದ್ದು, ಸದ್ಯಕ್ಕೆ ಕಾಸರಕೋಡು ಬೂದಿ ಮುಚ್ಚಿದ ಕೆಂಡದಂಥ ಪರಿಸ್ಥಿತಿ ಇದೆ.

ದೇವರ ಮೊರೆ ಹೋದ ಕಡಲಮಕ್ಕಳು:ಇನ್ನು ಮೀನುಗಾರರು ಸತತ ಹೋರಾಟದ ನಂತರ, ಜನಪ್ರತಿನಿಧಿಗಳ ಮನೆಅಂಗಳ ತುಳಿದು ಅಳಲು ತೋಡಿಕೊಂಡರೂ ಪ್ರಯೋಜನವಾಗದ ಕಾರಣ ತಮ್ಮನ್ನು ತಾಯಿಯಾಗಿ ರಕ್ಷಣೆ ನೀಡುತ್ತಾ ಬಂದಿರುವ ಪಟ್ಟಣದ ದಂಡಿನ ದುರ್ಗಾ ದೇವಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿ ನ್ಯಾಯ ಒದಗಿಸು ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಮೀನುಗಾರರ ಮುಖಂಡ ರಾಜೇಶ್ ತಾಂಡೇಲ್ ಮಾಧ್ಯಮದವರೊಂದಿಗೆ ಮಾತನಾಡಿ, ವಾಣಿಜ್ಯ ಬಂದರು ನಿರ್ಮಾಣಕ್ಕೆ ಎಲ್ಲ ರೀತಿಯಾದಂತಹ ಅನುಮತಿ ಪಡೆದುಕೊಂಡೆ ಕಾಮಗಾರಿ ಆರಂಭಿಸಬೇಕೆಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿತ್ತು. ಅದೇ ರೀತಿ ಎನ್‌ಜಿಟಿಯು ಕೂಡ ಕಡಲಾಮೆ ವಾಸ ಸ್ಥಳ ಯಾವುದೇ ರೀತಿ ಕಾಮಗಾರಿ ನಡೆಸಕೂಡದೆಂದು ಉಲ್ಲೇಖಿಸಿತ್ತು. ಇದು ಆಮೆಗಳು ಮೊಟ್ಟೆ ಇಡುವ ಸಮಯ.

ಈ ಸಮಯದಲ್ಲಿ ಒಂದೊಮ್ಮೆ ಕಾಮಗಾರಿ ಆರಂಭಿಸಿದರೆ ಅದು ಜೀವ ವೈವಿಧ್ಯತೆಗೆ ಹಾನಿ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಕೇವಲ ಕಚ್ಚಾ ರಸ್ತೆ ಮಾತ್ರ ಬಳಕೆ ಮಾಡಬಹುದು ಎಂದು ತಿಳಿಸಿತ್ತು. ಆದರೂ ಬಲವಂತದಲ್ಲಿ ಇಲ್ಲಿ ಕಾಮಗಾರಿ ಆರಂಭಿಸುತ್ತಿದ್ದಾರೆ. ಪೊಲೀಸ್ ಬಲ ಹಾಗೂ ಜಿಲ್ಲಾಡಳಿತದ ಒತ್ತಡದ ಮೇರೆಗೆ ಕಂಪನಿಯವರು ಕೆಲಸ ಆರಂಭಿಸಿದ್ದಾರೆ. ನಮ್ಮ ವಸತಿ ಪ್ರದೇಶಕ್ಕೆ ಆಗಮಿಸಿದ್ದಲ್ಲಿ ನಾವಂತೂ ಯಾವುದೇ ಕಾರಣಕ್ಕೂ ನಮ್ಮ ಸ್ಥಳವನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಮಾಧ್ಯಮದ ಮೂಲಕ ಆಡಳಿತ ವರ್ಗಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದರು.

ಈಗಾಗಲೇ ಹೋರಾಟ ಮಾಡಿ ಜೈಲಿಗೆ ಹೋಗಿ ಬಂದಿದ್ದೇವೆ. ಮತ್ತೇ ಹೆದರುವ ಮಾತೆ ಇಲ್ಲ. ಸಚಿವ ಮಂಕಾಳು ವೈದ್ಯರಲ್ಲಿಯು ಕಾಮಗಾರಿ ನಿಲ್ಲಿಸುವಂತೆ ಮನವಿ ಮಾಡಲಾಗಿತ್ತು. ಇಂದು ಅವರದೇ ಕಾಂಗ್ರೆಸ್ ಸರ್ಕಾರ ಇದೆ. ಅವರ ನಡೆ ಏನು ಎನ್ನುವುದು ತಿಳಿಯುತ್ತಿಲ್ಲ. ಸರ್ಕಾರದ ಆದೇಶ ಎನ್ನುವ ಡಿಸಿಯವರು ಯಾವ ಆದೇಶ ಇದೆ ಎನ್ನುವುದು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

Share this article